ಕೊಣಾಜೆಯಿಂದ ಮಂಗಳೂರು ಕಡೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಕಾಲೇಜು ಬಸ್ ಶನಿವಾರ ಸಂಜೆ ನಾಟೆಕಲ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಮಗುಚಿದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಬಸ್‌ನಡಿಗೆ ಸಿಲುಕಿದ ದ್ವಿಚಕ್ರ ವಾಹನ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಬೈಕ್ ಸವಾರನನ್ನು ಚಿಕ್ಕಮಗಳೂರು ಮೂಲದ ಹಾಗೂ ಇನ್ಫೋಸಿಸ್ ಉದ್ಯೋಗಿಯಾಗಿದ್ದ ಪ್ರಜ್ವಲ್ ಅರ್ನಾಲ್ಡ್ (31) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಕಾಲೇಜು ಬಸ್ ನಾಟೆಕಲ್ ಬಳಿ ಬೈಕ್ ಅನ್ನು ಓವರ್‌ಟೇಕ್ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿದೆ. ಈ ವೇಳೆ ಬೈಕ್ ಸವಾರ ಬಸ್‌ನಡಿಗೆ ಸಿಲುಕಿಕೊಂಡರು. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಕ್ರೇನ್ ಸಹಾಯದಿಂದ ಬಸ್ ಅನ್ನು ಮೇಲಕ್ಕೆತ್ತಿ ಗಾಯಾಳುವನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಗಂಭೀರ ಗಾಯಗಳಿಂದ ಅವರು ಚಿಕಿತ್ಸೆ ವೇಳೆ ಮೃತಪಟ್ಟರು.
ಅಪಘಾತದಲ್ಲಿ ಬಸ್‌ನಲ್ಲಿದ್ದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸಂಚಾರಕ್ಕೂ ಅಡಚಣೆ ಉಂಟಾಯಿತು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿಸಿದ್ದಾರೆ.





