ಕನ್ನಡ ನಾಡಿನ ಇತಿಹಾಸದಲ್ಲಿ ವೀರವನಿತೆ ಒನಕೆ ಓಬವ್ವ ಅವರ ಧೈರ್ಯ, ಸಾಹಸ, ಸ್ವಾಭಿಮಾನ ಹಾಗೂ ದೇಶಪ್ರೇಮಕ್ಕೆ ವಿಶಿಷ್ಟ ಸ್ಥಾನವಿದೆ. ಅಸಾಧಾರಣ ಸಮಯಪ್ರಜ್ಞೆ ಮತ್ತು ವೀರೋಚಿತ ಹೋರಾಟದ ಮೂಲಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಓಬವ್ವ ಅವರ ಜೀವನ ಇಂದಿನ ಯುವಜನತೆಗೆ, ವಿಶೇಷವಾಗಿ ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋಟೆಯೊಳಗೆ ಶತ್ರು ಸೈನಿಕರು ನುಸುಳುತ್ತಿರುವುದನ್ನು ಗಮನಿಸಿದ ಓಬವ್ವ, ಕೈಗೆ ಸಿಕ್ಕ ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಶತ್ರುಗಳನ್ನು ಎದುರಿಸಿದ್ದರು. ಪತಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ತೊಂದರೆಯಾಗಬಾರದೆಂಬ ಕಾಳಜಿಯ ನಡುವೆಯೂ ಕೋಟೆಯ ರಕ್ಷಣೆಯ ಹೊಣೆ ಹೊತ್ತು ಹೋರಾಡಿದ ಅವರ ಕರ್ತವ್ಯನಿಷ್ಠೆ, ಧೈರ್ಯ ಮತ್ತು ತ್ಯಾಗ ಅನುಕರಣೀಯ. ನಾಡಿನ ರಕ್ಷಣೆಗೆ ಆದ್ಯತೆ ನೀಡಿದ ಅವರ ಶೌರ್ಯಗಾಥೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಸದಾ ಜೀವಂತವಾಗಿರಬೇಕು ಎಂದರು.
ಒನಕೆ ಓಬವ್ವನ ಸಾಹಸಗಾಥೆ ಇತಿಹಾಸದ ಹೆಮ್ಮೆ
ಉಪನ್ಯಾಸ ನೀಡಿದ ಚಿತ್ರದುರ್ಗದ ಬೋರಪ್ಪ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂಜೀವಕುಮಾರ ಪೋತೆ, ಚಿತ್ರದುರ್ಗದ ಪಾಳೆಗಾರರ ಆಡಳಿತದ ಸಂದರ್ಭದಲ್ಲಿ ಹೈದರಾಲಿ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಶತ್ರು ಸೈನಿಕರು ಕೋಟೆಯೊಳಗೆ ನುಸುಳಲು ಯತ್ನಿಸಿದ್ದರು. ಇದನ್ನು ಗಮನಿಸಿದ ಓಬವ್ವ ಒನಕೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಶತ್ರು ಸೈನಿಕರನ್ನು ಧೈರ್ಯದಿಂದ ಎದುರಿಸಿದ್ದರು. ಅವರ ಸಮಯಪ್ರಜ್ಞೆ, ಸಾಹಸ ಮತ್ತು ಸ್ವಾಭಿಮಾನ ಕರ್ನಾಟಕದ ಇತಿಹಾಸದಲ್ಲಿ ಅಚ್ಚಳಿಯದ ವೀರಗಾಥೆಯಾಗಿ ಉಳಿದಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೊಡೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಜಿಲ್ಲಾ ಪಂಚಾಯಿತಿಯ ಯೋಜನಾಧಿಕಾರಿ ಅಶೋಕ ಕಲಘಟಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ರಾಜಶೇಖರ ಕುದರಿ, ಚೆನ್ನು ಕಟ್ಟಿಮನಿ, ಅಡಿವೆಪ್ಪ ಸಾಲಗಲ, ಶೇಖ್ ಮಾಸ್ತರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೋಹನ್ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ರಂಗನಾಥ ಬತ್ತಾಸೆ ಹಾಗೂ ತಂಡದಿಂದ ಒನಕೆ ಓಬವ್ವ ಅವರ ಸಾಹಸಗಾಥೆಯನ್ನು ಬಿಂಬಿಸುವ ನೃತ್ಯ ಪ್ರದರ್ಶನ ನಡೆಯಿತು. ಕಲಾವಿದರ ಮನಮೋಹಕ ಪ್ರದರ್ಶನ ಸಭಿಕರ ಗಮನ ಸೆಳೆಯಿತು.




