ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದ ವನ್ಯಜೀವಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಅರಣ್ಯ ಮತ್ತು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.
ನಗರದ ಹಾರ್ನ್‌ಬಿಲ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವನ್ಯಜೀವಿ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ದಾಂಡೇಲಿಯ ಪ್ರಕೃತಿ ಸೌಂದರ್ಯ, ದಟ್ಟ ಅರಣ್ಯ ಹಾಗೂ ಜೀವ ವೈವಿಧ್ಯತೆ ತಮ್ಮನ್ನು ಆಕರ್ಷಿಸಿದೆ ಎಂದು ಹೇಳಿದರು. ಪ್ರಕೃತಿಯೊಂದಿಗೆ ಬೆಸೆದುಕೊಂಡು ಬದುಕುತ್ತಿರುವ ಇಲ್ಲಿನ ಜನರ ಜೀವನಶೈಲಿ ಇತರರಿಗೆ ಮಾದರಿಯಾಗಿದ್ದು, ಪರಿಸರದ ಬಗ್ಗೆ ಅವರಿಗಿರುವ ಕಾಳಜಿ ಶ್ಲಾಘನೀಯ ಎಂದು ತಿಳಿಸಿದರು
ನಾನು ಈ ಅಭಿಯಾನದ ರಾಯಭಾರಿಯಾಗಿ ಬಂದಿದ್ದೇನೆ. ಆದರೆ ಅರಣ್ಯದ ಮಹತ್ವ, ಅದರ ಸಂರಕ್ಷಣೆಯ ಅಗತ್ಯತೆ ಹಾಗೂ ವನ್ಯಜೀವಿಗಳ ಬಗ್ಗೆ ಇಲ್ಲಿನ ಜನರಿಗೆ ಹೆಚ್ಚಿನ ಅರಿವು ಇದೆ. ಆದ್ದರಿಂದ ಈ ಅರಣ್ಯದ ನಿಜವಾದ ರಾಯಭಾರಿಗಳು ನೀವೇ, ಎಂದು ಸ್ಥಳಿಯರಿಗೆ ಹೇಳಿದರು. ಅರಣ್ಯ ಸಂಪತ್ತಿನ ರಕ್ಷಣೆ ಕೇವಲ ಅರಣ್ಯ ಇಲಾಖೆಯ ಹೊಣೆಗಾರಿಕೆಯಾಗದೆ, ಸಮಾಜದ ಪ್ರತಿಯೊಬ್ಬರೂ ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದು ಗಣೇಶ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಜೇನುನೊಣ ದಾಳಿಗಿಂತ ಭಯಾನಕ ಅವ್ಯವಸ್ಥೆ: ಮೊರಾರ್ಜಿ ವಸತಿ ಶಾಲೆ ವಿರುದ್ಧ ಗಂಭೀರ ಆರೋಪ
ಪರಿಸರ ಸಮತೋಲನ ಕಾಪಾಡಲು ಜನರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ವಿಶೇಷವಾಗಿ ಯುವ ಪೀಳಿಗೆಗೆ ಬಾಲ್ಯದಿಂದಲೇ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಅವರು, ಪ್ರಕೃತಿಯ ಮೇಲಿನ ಪ್ರೀತಿ ಹಾಗೂ ಸಂರಕ್ಷಣೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಇದೇ ವೇಳೆ ಅರಣ್ಯ ಸಂಪತ್ತಿನ ರಕ್ಷಣೆಗೆ ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.
ಗ್ರಾಮ ಮಟ್ಟದಲ್ಲಿ ಅರಣ್ಯ ಸಂರಕ್ಷಣೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತಿಗೆ ‘ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಮ ಪಂಚಾಯತ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ವಿಶೇಷ ಕ್ಷಣವಾಗಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಗಣೇಶ್, ತಮ್ಮ ಜನಪ್ರಿಯ ‘ಮುಂಗಾರು ಮಳೆ’ ಚಿತ್ರದ ಅನಿಸುತ್ತಿದೆ ಯಾಕೋ ಇಂದು ಹಾಡನ್ನು ಹಾಡಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




