ಮುಂಡಗೋಡ: ತಾಲೂಕಿನ ಕರಗಿನಕೊಪ್ಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ಸಂಭವಿಸಿದ ಜೇನುನೊಣ ದಾಳಿ ಪ್ರಕರಣವು ಇದೀಗ ಶಾಲೆಯ ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯ ಗಂಭೀರ ಆರೋಪಗಳಿಗೆ ಕಾರಣವಾಗಿದೆ.
ಜೇನುನೊಣ ದಾಳಿಯಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರೆ, ಘಟನೆ ಬಳಿಕ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಚಿಕಿತ್ಸೆಯ ವಿಚಾರದಲ್ಲಿ ಶಾಲಾ ಆಡಳಿತದ ನಿರ್ಲಕ್ಷ್ಯ ಬೆಳಕಿಗೆ ಬಂದಿರುವುದಾಗಿ ಪೋಷಕರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಶಾಲೆಯ ತರಗತಿ ಕೋಣೆಯಲ್ಲಿ ಜೇನುನೊಣಗಳು ಗೂಡು ಕಟ್ಟಿಕೊಂಡಿದ್ದರು ಅದನ್ನು ತೆರವುಗೊಳಸದೆ ಹಾಗೆ ಬಿಟ್ಟಿರುವುದು ಈ ಘಟನೆಗೆ ಕಾರಣವಾಗಿದೆ.
ಶಾಲೆ ಆರಂಭವಾಗಿ ಒಂದು ವಾರವೂ ಕಳೆದಿರದ ಪರಿಸ್ಥಿತಿಯಲ್ಲಿ ಶಾಲಾ ಆವರಣದ ಸ್ವಚ್ಛತೆ ಹಾಗೂ ಸುರಕ್ಷತೆ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಗಳ ಹೇಳಿಕೆ ಪ್ರಕಾರ, ಜೇನುಗೂಡು ತರಗತಿ ಕೊಠಡಿಯ ಸಮೀಪವೇ ಇದ್ದು, ಯಾರೋ ಕಲ್ಲು ಎಸೆದ ಪರಿಣಾಮ ಜೇನುನೊಣಗಳು ರೊಚ್ಚಿಗೆದ್ದು ಏಕಾಏಕಿ ದಾಳಿ ನಡೆಸಿದವು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಜೇನು ಕಡಿತದಿಂದ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಮುಂಡಗೋಡ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ, ಘಟನೆ ನಡೆದ ತಕ್ಷಣ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡದೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರೂ ಆಸ್ಪತ್ರೆಗೆ ವಿದ್ಯಾರ್ಥಿಗಳೊಂದಿಗೆ ಶಾಲೆಯಿಂದ ಒಬ್ಬ ಮಹಿಳಾ ಸಿಬ್ಬಂದಿ ಹೊರತುಪಡಿಸಿದರೆ ಬೇರೆ ಶಿಕ್ಷಕರು ಬಂದಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ಶಿರಸಿ | ಮಾರಿಕಾಂಬಾ ದೇವಸ್ಥಾನ: ನೂತನ ಧರ್ಮದರ್ಶಿಗಳ ಆಯ್ಕೆ ಪೂರ್ಣ; ಐವರ ನೇಮಕ
ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ, ಸರ್ಕಾರಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವುದಾಗಿ ಸೂಚಿಸಿದರೂ ಅದನ್ನು ಬಳಸದೆ, ಏಳು ರಿಂದ ಎಂಟು ವಿದ್ಯಾರ್ಥಿಗಳನ್ನು ಒಂದೇ ಆಟೋದಲ್ಲಿ ಆಸ್ಪತ್ರೆಯಿಂದ ವಸತಿ ಶಾಲೆಗೆ ಅದು ಕೂಡ ರಾತ್ರಿ ಹೊತ್ತಿನಲ್ಲಿ ಕರೆದುಕೊಂಡು ಹೋದರು. ವಿದ್ಯಾರ್ಥಿಗಳೊಂದಿಗೆ ಶಾಲೆಯ ಶಿಕ್ಷಕರು ಅಥವಾ ಜವಾಬ್ದಾರಿಯುತ ಸಿಬ್ಬಂದಿ ಯಾರೂ ಇರಲಿಲ್ಲ ವಿದ್ಯಾರ್ಥಿನಿಯರ ಜೊತೆ ಒಬ್ಬ ಸ್ಟಾಪ್ ನರ್ಸ್ ಮಾತ್ರ ತೆರಳಿದರು.
ವಸತಿ ಶಾಲೆಯು ಮುಂಡಗೋಡ ಪಟ್ಟಣದಿಂದ ಸುಮಾರು ಐದು ಕಿಲೋಮೀಟರ್ ದೂರದ ಅರಣ್ಯ ಪ್ರದೇಶದಲ್ಲಿದ್ದು, ಇಂತಹ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿ ಅವರನ್ನು ಸೂಕ್ತ ಮೇಲ್ವಿಚಾರಣೆ ಇಲ್ಲದೆ ಕಳುಹಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಘಟನೆಯ ಬಗ್ಗೆ ಸಂಬಂಧಿತ ಹಿರಿಯ ಅಧಿಕಾರಿಗಳಿಗೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ತಲುಪಿಲ್ಲ ಎನ್ನಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ನಿಯಮಾವಳಿಗಳನ್ನು ಪಾಲಿಸಿಲ್ಲ ಇಷ್ಟು ಗೌಪ್ಯವಾಗಿ ಈ ಪ್ರಕರಣವನ್ನು ಇಡಲು ಕಾರಣ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಈ ಕುರಿತು ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿದಾಗ, ಆ ಸಮಯದಲ್ಲಿ ನಾನು ಸ್ಥಳದಲ್ಲಿರಲಿಲ್ಲ. ಸಂಪೂರ್ಣ ಮಾಹಿತಿ ಇಲ್ಲ, ವಿದ್ಯಾರ್ಥಿಗಳ ಜೊತೆ ಯಾರು ಇಲ್ಲ ಎಂದು ಹೇಳಿದರು, ಶಾಲಾ ಕೊಠಡಿಯಲ್ಲಿ ಜೇನು ಗೂಡು ಕಟ್ಟಿದರು ಅದನ್ನು ತೆರವುಗೊಳಿಸಲ್ಲಾ ಏಕೆ ಎಂದು ಪ್ರಶ್ನಿಸಿದರು ಜೇನು ಬಿಡಿಸುವವರು ಬಂದಿಲ್ಲ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ಉಡಾಫೆಯಿಂದ ಉತ್ತರ ನೀಡಿದರು. ಆದರೆ, ಶಾಲಾ ಆವರಣದಲ್ಲಿ ಜೇನುಗೂಡು ಇದ್ದಿರುವುದು, ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳದಿರುವುದು, ಘಟನೆ ನಂತರ ಸಮರ್ಪಕ ಜವಾಬ್ದಾರಿ ಪ್ರದರ್ಶಿಸದಿರುವುದು ಪ್ರಾಂಶುಪಾಲರ ನಿರ್ಲಕ್ಷ್ಯವಲ್ಲವೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.
ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ನಡೆಸಿದ ಈ ಘಟನೆಯ ಕುರಿತು ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ, ಘಟನೆಗೆ ಕಾರಣರಾದವರ ವಿರುದ್ಧ ಹಾಗೂ ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಕ್ಕಳ ಸುರಕ್ಷತೆಗೆ ಹೊಣೆ ಯಾರು? ಜೇನುನೊಣ ದಾಳಿ ಅನಿರೀಕ್ಷಿತವಾಗಿರಬಹುದು. ಆದರೆ ಘಟನೆ ನಂತರದ ಅವ್ಯವಸ್ಥೆ, ಪೋಷಕರಿಗೆ ಮಾಹಿತಿ ನೀಡದಿರುವುದು, ಆಂಬ್ಯುಲೆನ್ಸ್ ಬದಲಿಗೆ ಆಟೋದಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸಿರುವುದು ಹಾಗೂ ಜವಾಬ್ದಾರಿಯುತ ಅಧಿಕಾರಿಗಳ ಗೈರುಹಾಜರಿ ಕ್ಷಮಾರ್ಹವೇ? ಎಂಬ ಪ್ರಶ್ನೆಗೆ ಸಂಬಂಧಪಟ್ಟ ಇಲಾಖೆ ಉತ್ತರಿಸಬೇಕಾಗಿದೆ.





