ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಬಿಜೆಪಿಯಲ್ಲಿ ಒಳ ಜಗಳ ನಡೆಯುತ್ತಲೇ ಇದೆ. ಮಾಜಿ ಸಚಿವ, ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ರೇಣುಕಾಚಾರ್ಯ ಅವರು ತಮ್ಮದೇ ಪಕ್ಷದ ಕೆಲವು ನಾಯಕರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಅವರು ಎರಡು ದಿನಗಳ ಹಿಂದೆ ಜಗಳೂರಿನ ಮಾಜಿ ಶಾಸಕ ಗುರುಸಿದ್ದನಗೌಡರ ಉಚ್ಛಾಟನೆಯನ್ನು ಪ್ರಶ್ನಿಸಿ ರಾಜ್ಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸಿರುವ ದಾವಣಗೆರೆಯ ಬಿಜೆಪಿ ಮುಂಖಡರು ರೇಣುಕಾಚಾರ್ಯ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.
ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ ವೀರೇಶ್ ಹನಗವಾಡಿ, “ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಗುರುಸಿದ್ದನಗೌಡ ಅವರೇ ನೇರ ಕಾರಣ” ಎಂದು ಆರೋಪಿಸಿದ್ದಾರೆ.
“ಕಳೆದ ಚುನಾವಣೆಯಲ್ಲಿ ಗುರುಸಿದ್ದನಗೌಡ ಮತ್ತವರ ಮಕ್ಕಳು ನೇರವಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿದ್ದಾರೆ. ಆ ಬಗ್ಗೆ ಬಿಜೆಪಿ ಅಭ್ಯರ್ಥಿ ರಾಮಚಂದ್ರಪ್ಪ ಅವರು ಜಿಲ್ಲಾ ಸಮಿತಿಯ ಗಮನಕ್ಕೆ ತಂದಿದ್ದರು. ಬಳಿಕ ನಡೆದ ಕೋರ್ ಸಮಿತಿಯಲ್ಲಿ ಚರ್ಚಿಸಿ, ಪಕ್ಷದ ಶಿಸ್ತು ಸಮಿತಿಗೆ ಕಳಿಸಲಾಗಿತ್ತು. ಶಿಸ್ತುಪಾಲನಾ ಸಮಿತಿಯ ಸೂಚನೆ ಮೇರೆಗೆ ಗುರುಸಿದ್ದನಗೌಡ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ” ಎಂದು ಅವರು ತಿಳಿಸಿದರು.
ಗುರುಸಿದ್ದನಗೌಡ ಅವರ ಉಚ್ಚಾಟನೆಯು ಬಿಜೆಪಿ ಜಿಲ್ಲಾ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರ ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಸಂದರ್ಭದಲ್ಲಿ ಮಾತೆತ್ತದ ರೇಣುಕಾಚಾರ್ಯ ನಂತರ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಆಗಿದ್ದರು. ಪಕ್ಷದ ಶಿಸ್ತಿನ ಸಿಪಾಯಿ, ಕಟ್ಟಾಳು ಎಂದು ಹೇಳಿಕೊಂಡಿದ್ದರು. ಆದರೆ, ಈಗ ಪ್ರಚಾರಕ್ಕಾಗಿ ಮತ್ತು ಪಕ್ಷದಲ್ಲಿ ಗೊಂದಲ ಮೂಡಿಸುವ ಉದ್ದೆಶದಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜಿಲ್ಲಾ ಮುಖಂಡರು ಪ್ರತ್ಯಾರೋಪ ಮಾಡಿದ್ದಾರೆ.
ರೇಣುಕಾಚಾರ್ಯ ಅವರ ಹೇಳಿಕೆ ಪಕ್ಷಕ್ಕೆ ಕಪ್ಪುಚುಕ್ಕೆ ಇದ್ದಂತೆ. ಅವರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಅವರು ತಮ್ಮ ನಿಲುವು ಸ್ಪಷ್ಟವಾಗಿ ತಿಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿದ್ದಾರೆ.
“ನಮ್ಮವರೇ ನಮ್ಮನ್ನು ಸೋಲಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿ. ಗುರುಸಿದ್ದನಗೌಡ ಅವರು ನೇರವಾಗಿ ವಿಪಕ್ಷಗಳ ಜೊತೆಗೆ ಪ್ರಚಾರ ನಡೆಸಿದ್ದರು ಎಂಬುದನ್ನು ಲಿಖಿತ ರೂಪದಲ್ಲಿ ಮತ್ತು ದಾಖಲೆ ಸಮೇತ ದೂರು ಸಲ್ಲಿಸಲಾಗಿತ್ತು. ಪಕ್ಷದ ತೀರ್ಮಾನದಂತೆ ಉಚ್ಚಾಟನೆ ಮಾಡಲಾಗಿದೆ. ಆದರೂ, ಟಿ. ಗುರುಸಿದ್ದನಗೌಡ ಅವರ ವಿರುದ್ಧ ಯಾವುದೇ ದ್ವೇಷ ಇಲ್ಲ. ಗುರುಸಿದ್ದನಗೌಡರೆ ಉಚ್ಚಾಟನೆ ವಿಷಯಕ್ಕೂ ಮತ್ತು ಸಂಸದ ಸಿದ್ದೇಶ್ವರ ಅವರಿಗೆ ಯಾವುದೇ ಸಂಬಂಧವೇ ಇಲ್ಲ” ಎಂದು ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಸ್. ವಿ.ರಾಮಚಂದ್ರ ತಿಳಿಸಿದ್ದಾರೆ.