ಕಲಬುರಗಿ | ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಜನಪರ ಸಂಘಟನೆಗಳ ಮುತ್ತಿಗೆ

Date:

ಬೌದ್ಧ, ಜೈನ, ಸೂಫಿ ಸಂತರು, ಶರಣರು, ತತ್ವಪದಕಾರರ ದಾರ್ಶನಿಕ ನೆಲೆಯಾದ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕೋಮು ದ್ವೇಷ ಬಿತ್ತುವ ಕೇಂದ್ರವಾಗುತ್ತಿದೆ. ವಿಶ್ವವಿದ್ಯಾಲಯವನ್ನು ಕೋಮುವಾದಿ ಶಕ್ತಿಗಳ ಕಪಿಮುಷ್ಠಿಗೆ ನೀಡಬಾರದು ಎಂದು ಒತ್ತಾಯಿಸಿ ʼಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯʼ ಉಳಿಸಿ ಆಂದೋಲನ ಸಮಿತಿಯು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ.

ಕಲಬುರಗಿಯ ಕಡಗಂಚಿಯಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಬೃಹತ್ ಜಾಥಾ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಬಳಿಕ, ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ  ಸಲ್ಲಿಸಿದ್ದಾರೆ.

ಜಾಥದಲ್ಲಿ ಮಾತನಾಡಿದ ಆಂದೋಲನದ ಮುಖಂಡರು, “ಬೌದ್ಧರ, ಜೈನರ, ಸೂಫಿ ಸಂತರ, ಶರಣರ, ತತ್ವಪದಕಾರರ ದಾರ್ಶನಿಕ ನೆಲೆಯಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ, ಸ್ಥಾಪನೆಯಾಗಿರುವ ʼಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯʼವು ರಾಜ್ಯದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮ, ಪ್ರಾಮಾಣಿಕ ಕಾಳಜಿಯ ಫಲ, 2009ರಲ್ಲಿ ಕೇಂದ್ರೀಯ ವಿವಿ ಸ್ಥಾಪನೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗವನ್ನು ಶೈಕ್ಷಣಿಕವಾಗಿ ಸಬಲೀಕರಿಸುವ ಉದ್ದೇಶ ಈ ವಿವಿಯದ್ದು” ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದುರಂತವೆಂದರೆ, ತನ್ನ ಸದುದ್ದೇಶದಿಂದ ದೂರ ಸರಿದಿರುವ ವಿವಿಯಲ್ಲಿ, ಸದ್ಯ ಮನುವಾದಿ ಆರ್‌ಎಸ್‌ಎಸ್‌ ಮತ್ತು ಎಬಿವಿಪಿಗಳ ಸಮಾಜ ವಿರೋಧಿ ಚಟುವಟಿಕೆಗಳ ಅಡ್ಡಾ ಆಗಿದೆ.  ಕೇಂದ್ರದಲ್ಲಿ ಆರ್‌ಎಸ್‌ಎಸ್‌ನ ಪ್ರಭಾವಿ ಬಿಜೆಪಿ ಸರಕಾರ ಅಧಿಕಾರ ಚುಕ್ಕಾಣಿ ಹಿಡಿದಾಗಿನಿಂದ, ವಿಶ್ವವಿದ್ಯಾಲಯವು ಸಂಘಗಳ ಉಗ್ರ ಹಿಂದೂತ್ವದ ಕಾರ್ಖಾನೆಯಂತೆ ಬಳಕೆಯಾಗುತ್ತಿದೆ. ದಿನಬೆಳಗಾದರೆ ಆರ್‌ಎಸ್‌ಎಸ್‌ ಶಾಖಾಗಳು ವಿವಿಯ ಪ್ರಾಧ್ಯಾಪಕರ ನೇತೃತ್ವದಲ್ಲಿ ರಾಜಾರೋಷವಾಗಿ ನಡೆಯುತ್ತಿವೆ. ಮತಾಂಧ ಶಿಕ್ಷಕರು, ಹಿಂದೂ ಕೋಮುವಾದಿ ವಿಚಾರಧಾರೆಯನ್ನು ವಿದ್ಯಾರ್ಥಿಗಳ ಮನ, ಮಸ್ತಕಗಳಲ್ಲಿ ಎರಕ ಹೊಯುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಿದ್ದ ವಿಶ್ವವಿದ್ಯಾಲಯವು, ಸಂಘ ಪರಿವಾರದ ಆವಾಸ ಸ್ಥಾನವಾಗಿದೆ. ಇಲ್ಲಿನ ಕೆಲವು ಉಪನ್ಯಾಸಕರು, ಮುಖ್ಯಸ್ಥರು, ಅಧಿಕಾರಿಗಳೇ ಆರ್‌ಎಸ್‌ಎಸ್‌ ಅಡ್ಡೆಯ ಕಾವಲುಗಾರರಾಗಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಜನರ ಸಾಮುದಾಯಿಕ ಸಮಸ್ಯೆಗಳಿಗೆ, ಸಂಶೋಧನೆಯ ಮೂಲಕ ಪರಿಹಾರವನ್ನು ಸೂಚಿಸಲು ನೆರವಾಗುವ ಬದಲಾಗಿ, ವಿಶ್ವವಿದ್ಯಾಲಯವು ಜಾತಿವಾದಿಗಳ, ಕೋಮುವಾದಿಗಳ, ಮತಾಂಧರ, ಪ್ರಯೋಗಶಾಲೆಯಾಗಿ ರೂಪಿಸಲು ಹೊರಟಿರುವುದು ಅಕ್ಷಮ್ಯ. ಇದು ಸಂವಿಧಾನ ವಿರೋಧಿ ನಡೆ. ಜನಸಾಮಾನ್ಯರ ತೆರಿಗೆ ಹಣದ ಋಣಪ್ರಜ್ಞೆಯ ಕನಿಷ್ಟ ವಿವೇಕವೂ ಇಲ್ಲದ ಕೆಲವು ಜಾತಿವಾದಿ ಅಧಿಕಾರಿಗಳು, ಪ್ರಾಧ್ಯಾಪಕರು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸದೆ ಸಮಾಜಕ್ಕೆ ದ್ರೋಹ ಎಸಗುತ್ತಿದ್ದಾರೆ.

ಬಾಬಾ ಸಾಹೇಬರ ಬಹುತ್ತ ಭಾರತದ ಮೇಲೆ ಸಂಘಗಳ ದಾಳಿ, ಬಹುತ್ವ ಭಾರತದ ಕೇಂದ್ರಿಯ ವಿಶ್ವವಿದ್ಯಾಲಯ, ಡಾ. ಬಾಬಾ ಸಾಹೇಬ ಅಂಬೇಡ್ಕರ ಪ್ರಣೀತ ಸಂವಿಧಾನದ ಮೇಲೆ ನಡೆಯಬೇಕಿದೆ ಹೊರತು, ಕೋಮುವಾದಿ ಆಜೆಂಡಾದ ಮೇಲಲ್ಲ. ವಿಶ್ವವಿದ್ಯಾಲಯಕ್ಕೆ ಪ್ರೊ. ಬಟ್ಟು ಸತ್ಯನಾರಾಯಣರವರು ಕುಲಪತಿಗಳಾಗಿ ನೇಮಕವಾದಗಿನಿಂದ ಇಡೀ ಕ್ಯಾಂಪಸ್‌ನ ಶೈಕ್ಷಣಿಕ ವಾತಾವರಣವು ಕೋಮುವಾದಿಕರಣಕ್ಕೆ ಒಳಗಾಗಿದೆ. ಆರ್.ಎಸ್.ಎಸ್. ಬೆಂಬಲಿಸುವ ಹಾಗೂ ಹಿಂದುತ್ವ ಚಟುವಟಿಕೆಗಳಿಗೆ ಸಹಕಾರ ನೀಡುವ ಎ.ಬಿ.ವಿ.ಪಿ ಸಂಘಟನೆಗಳ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಧ್ಯಾಪಕರು ಮಾನ್ಯತೆ ಅಂಜಿಸಲಾಗುತ್ತಿದೆ. ಬಹುತ್ವ ಭಾರತದ ಮೌಲ್ಯಾಧಾರಿತ ವಾತಾವರಣದಲ್ಲಿ ಕೋಮುವಾದಿ ವಿಚಾರಧಾರೆ ವಿದ್ಯೆಯನ್ನು ಕಲಿಯಬೇಕಾದ ಯುವ ಜನಾಂಗ ಭಯದಲ್ಲಿ ಬದುಕುವಂತಾಗಿದೆ. ಇವುಗಳಿಗೆ ಒಪ್ಪದ ವಿದ್ಯಾರ್ಥಿಗಳನ್ನು, ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸಿ ಅಮಾನತ್ತು  ಮಾಡುವುದು, ಕೇಸ್ ದಾಖಲಿಸುವುದು ಎಗ್ಗಿಲ್ಲದೆ ನಡೆದಿದೆ ಎನ್ನುತ್ತಿದ್ದಾರೆ.

ಆರ್‌ಎಸ್‌ಎಸ್‌ನ ತೊಂದರೆ, ಕಿರುಕುಳ ಕಟ್ಟಿಟ್ಟ ಬುತ್ತಿ. ವೈಜ್ಞಾನಿಕ, ವೈಚಾರಿಕ ಆಲೋಚನೆ ಮಾಡುವ ವಿದ್ಯಾರ್ಥಿ, ಪ್ರಾಧ್ಯಾಪಕರನ್ನು, ಕೇಂದ್ರೀಯ ವಿವಿಯನ್ನು ಉಗ್ರ ಹಿಂದುತ್ವದ ಪ್ರಯೋಗ ಶಾಲೆ ಮಾಡಲು ಬಿಡಬೇಕೆ?

ಸಾಮರಸ್ಯಕ್ಕೆ ಹೆಸರಾದ ಕಲ್ಯಾಣ ಕರ್ನಾಟಕದಲ್ಲಿ ಉಗ್ರ ಹಿಂದುತ್ವದ ವಿಷಾನಿಲ ಹಬ್ಬಿಸಿ ಇಲ್ಲಿನವರ ಭವಿಷ್ಯವನ್ನು ಕತ್ತಲ ಕೂಪಕ್ಕೆ ತಳ್ಳುವ ಹುನ್ನಾರ ಸಂಘಗಳಲ್ಲಿದೆ. ಆದ್ದರಿಂದಲೆ, ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕ್ಯಾಂಪಸ್ಸಿನಲ್ಲಿ ಪ್ರೊ. ಬಟ್ಟು ಸತ್ಯನಾರಾಯಣ ಸ್ವತಃ ಮುಂದೆ ನಿಂತು ರಾಮನವಮಿ, ಸರಸ್ವತಿ ಪೂಜೆ, ಹೋಮ-ಹವನ ಇತ್ಯಾದಿ ಚಟುವಟಿಕೆಗಳನ್ನು ನಡೆಸುವ ಮೂಲಕ ಕೋಮುದ್ವೇಷವನ್ನು ಕಸಿ ಮಾಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ, ಜಾತ್ಯಾತೀತ-ಧರ್ಮಾತೀತ ಪ್ರಗತಿಪರರು, ವಿಚಾರವಂತರು, ಹೋರಾಟಗಾರರು, ಚಿಂತಕರು ಈ ಜಾಥಾದಲ್ಲಿ ಭಾಗವಹಿಸಿದ್ದರು. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಿರ್ಭೀತ ವೈಚಾರಿಕ ವಾತಾವರಣವನ್ನು, ಶೈಕ್ಷಣಿಕ ವಾತಾವರಣ ನಿರ್ಮಿಸಲು ಎಲ್ಲರೂ ಸಹಕರಿಸಬೇಕಾಗಿದೆ. ಸತ್ಯನಾರಾಯಣರ ಮತ್ತು ಬಸವರಾಜ ಡೋಣೂರು ಮೇಲೆ ಕ್ರಮ ಕೈಗೊಳ್ಳಿ, ವಿಶ್ವವಿದ್ಯಾಲಯವನ್ನು ಕೋಮುವಾದದಿಂದ ಮುಕ್ತ ಮಾಡಿರಿ ಎಂದು ಪ್ರತಿಭಟನಾನಿರತರು ಕೋರಿಕೊಂಡಿದ್ದಾರೆ.

ಪ್ರತಿಭಟನಾಕಾರರ ಹಕ್ಕೊತ್ತಾಯಗಳು

 1. ದಲಿತ ಮತ್ತು ದಲಿತೇತರರ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡುಬಾರದು. ಕೂಡಲೇ ಪ್ರೊ. ಬಸವರಾಜ ಡೋಣೂರುರವರನ್ನು ಈ ಕೂಡಲೇ ಅಮಾನತ್ತುಗೊಳಿಸಿ. ಆರೋಪದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು.
 2. ಆರ್‌ಎಸ್‌ಎಸ್‌ ಕೋಮುವಾದಿ, ಫ್ಯಾಸಿಸ್ಟ್ ಹಿನ್ನೆಲೆಯ ಮಾನ್ಯ ಕುಲಪತಿ ಶ್ರೀ ಬಟ್ಟು ಸತ್ಯನಾರಾಯಣ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕು.
 3. ಆರ್‌ಎಸ್‌ಎಸ್‌ ಚಟುವಟಿಕೆಗಳಾದ ಶಾಖಾ ಮತ್ತು ಧಾರ್ಮಿಕ ಆಚರಣೆಗಳನ್ನು ಕ್ಯಾಂಪಸ್‌ನಲ್ಲಿ ನಡೆಸಕೂಡದು. ವಿವಿಯ ಆವರಣದಲ್ಲಿ ಹೋಮ, ಹವನ, ಸರಸ್ವತಿ ಪೂಜೆ, ಗಣಪತಿ ಉತ್ಸವ, ರಾಮನವಮಿ, ಗಾಯತ್ರಿ ಮಂತ್ರ ಪಠಣ ಇತ್ಯಾದಿ ವೈಯುಕ್ತಿಕವಾಗಿ ಆಚರಿಸಿಕೊಳ್ಳಬೇಕು. ಯಾವುದೇ ಧರ್ಮದ ನಂಬಿಕೆಗಳನ್ನು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಆಚರಣೆ ಮಾಡಕೂಡದು.
 4. ವಿಶ್ವವಿದ್ಯಾಲಯಗಳ ಅಧ್ಯಾಪಕರು, ಪ್ರಾಧ್ಯಾಪಕರು ಯಾವುದೇ ವೈಯುಕ್ತಿಕ ನಂಬಿಕೆಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವುದನ್ನು ನಿಯಂತ್ರಿಸಬೇಕು.
 5. ಅವೈಜ್ಞಾನಿಕ ವಿಚಾರಧಾರೆಯ ವ್ಯಕ್ತಿಗಳನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕರೆಯಬಾರದು.
 6. ಪಿ.ನಂದಪ್ಪ ಒಳಗೊಂಡಂತೆ, ಸಂಶೋಧನಾ ವಿದ್ಯಾರ್ಥಿಗಳಾದ ರಾಹುಲ, ಆದರ್ಶ ಇನ್ನೂ ಅನೇಕ ವಿದ್ಯಾರ್ಥಿಗಳ ಮೇಲೆ ಹೇರಿರುವ ಸುಳ್ಳು ಕೇಸುಗಳನ್ನು ಕೂಡಲೇ ವಾಪಾಸ್ಸು ಪಡೆಯಬೇಕು.
 7. ಸಂಘ ಪರಿವಾರದ ಕಾಲಾಳುವಿನಂತೆ ಕಾರ್ಯನಿರ್ವಹಿಸುತ್ತಿರುವ ಪ್ರೊ. ಬಸವರಾಜ ಡೋಣೂರು (ಹಿಂದಿನ ಕುಲಸಚಿವರು) ಹಾಗೂ ಎಬಿವಿಪಿ ರಾಜ್ಯ ಕಾರ್ಯದರ್ಶಿ ಡಾ.ಬಸವರಾಜ ಕೂಬಕಡ್ಡಿ, ಅದೇ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ರೋಹಿಣಾಕ್ಷ ಶ್ರೀಲಾಲು ಅವರುಗಳನ್ನು ಕಾನೂನು ವಿರೋಧಿ ಚಟುವಟಿಕೆಯ ಅಪರಾಧದ ಅಡಿಯಲ್ಲಿ ಅಮಾನತ್ತು ಮಾಡಬೇಕು.
 8. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಎಲ್ಲಾ ಘಟನೆಯನ್ನು ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
 9. ಕೇಂದ್ರೀಯ ವಿಶ್ವವಿದ್ಯಾಲಯವು ಕೆ.ಎಸ್‌.ಇ.ಟಿ. ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಪರಿಗಣಿಸದೆ, ಉದ್ದೇಶಪೂರ್ವಕವಾಗಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯ ಸಂಶೋಧನೆಯ ಅವಕಾಶದಿಂದ ವಂಚಿಸಲಾಗುತ್ತಿದೆ.
 10. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಕಡಗಂಚಿ, ಸುಂಟನೂರು, ಆಲೂರ ಗ್ರಾಮದ ಜನರ ಸ್ವಂತ ಜಮೀನು ಕಳೆದು ಕೊಂಡಿದ್ದಾರೆ. ಅಂತಹ ಕುಟುಂಬದ ಸದಸ್ಯರೊಬ್ಬರಿಗೆ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ನೇಮಕಗೊಂಡ ಕೆಲವರನ್ನು ತೆಗೆದುಹಾಕಲಾಗಿದೆ. ಅವರನ್ನು ಪುನಃ ನೇಮಿಸಿಕೊಳ್ಳಬೇಕು.
 11. ವಿಶ್ವವಿದ್ಯಾಲಯದ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಈ ಹಿಂದೆ ಕಲ್ಪಿಸಲಾಗಿದ್ದ ಶೈಕ್ಷಣಿಕ ಸವಲತ್ತುಗಳನ್ನು ಹಣದ ಕೊರತೆ ಎಂದು ನೆಪ ಹೇಳಿ ನಿಲ್ಲಿಸಲಾಗಿದೆ. ಅದನ್ನು ನೀಡಬೇಕು.
 12. ವಿಶ್ವವಿದ್ಯಾಲಯವೇ ಪತ್ರಿಕೆಗಳಲ್ಲಿ ನೀಡಿದ್ದ ಜಾಹಿರಾತಿನಲ್ಲಿ ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಉಚಿತವಾಗಿದೆ ಎಂದು ಹೇಳಿಕೆ ನೀಡಿ, ತನ್ನ ಹೇಳಿಕೆಗೆ ತದ್ವಿರುದ್ಧವಾಗಿ ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಂದ ಮನಸಿಗೆ ಬಂದಂತೆ ಶುಲ್ಕವನ್ನು ವಿಧಿಸಿ ಅವರನ್ನು ಆರ್ಥಿಕವಾಗಿ ಶೋಷಿಸಲಾಗುತ್ತಿದೆ. ಈ ವಿಷಯವನ್ನು ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರ ಗಮನಕ್ಕೆ ತಂದಾಗ ಆಗಿರುವ ತಪ್ಪನ್ನು ಒಪ್ಪಿಕೊಂಡ ಮೇಲೂ ಸಹ ಮತ್ತೆ ದಲಿತ ವಿದ್ಯಾರ್ಥಿಗಳಿಗೆ ಅಧಿಕ ಶುಲ್ಕವನ್ನು ವಿಧಿಸುವ ಮೂಲಕ ಅವರಿಗೆ ತೊಂದರೆ ನೀಡಲಾಗುತ್ತಿದೆ.
 13. 2021-2022, 2022-2023ರ ಶೈಕ್ಷಣಿಕ ವರ್ಷದಲ್ಲಿ ಎಸ್.ಸಿ./ಎಸ್.ಟಿ, ವಿದ್ಯಾರ್ಥಿಗಳ ಪದವಿ ಪ್ರವೇಶಾತಿಯಲ್ಲಿ ಮೀಸಲಾತಿಯನ್ನು ವಿಶ್ವವಿದ್ಯಾಲಯ ಉಲ್ಲಂಘಿಸಿರುತ್ತದೆ. ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳ ಜಾಗದಲ್ಲಿ ಸವರ್ಣೀಯ ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ಅವಕಾಶವನ್ನು ಕಲ್ಪಿಸಿಕೊಡುವ ಮೂಲಕ ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಲಾಗಿದೆ.
 14. ವಿಶ್ವವಿದ್ಯಾಲಯದ ಸಮಾನ ಅವಕಾಶಗಳ ಕಲ್ಯಾಣ ಘಟಕ(ಎಸ್.ಸಿ./ಎಸ್.ಟಿ. ಸೆಲ್)ದ ಅಧ್ಯಕ್ಷರನ್ನು ನೇಮಕ ಮಾಡುವಾಗ UGC ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ.
 15. ನಂದಪ್ಪ ಪಿ ಎಂಬ ಸಂಶೋಧನಾ ವಿದ್ಯಾರ್ಥಿ ಮೇಲೆ ಸುಳ್ಳು ಪೊಲೀಸ್ ಪಕರಣ ದಾಖಲಿಸಿದೆ. ಎಬಿವಿಪಿ ಅಧ್ಯಕ್ಷ ಮಾಡಿದ ಸುಳ್ಳು ಆರೋಪದಿಂದ, ಪ್ರೊಕ್ಟರ್ ಕಮಿಟಿ ವಿಚಾರಣೆಗೆ ಕರೆಸಿ, ಜಾತಿ, ಮಾಂಸಾಹಾರ ಹಾಗೂ ಸಿದ್ಧಾಂತಕ್ಕೆ ಸಂಬಂಧಿಸಿದ ಅನವಶ್ಯಕ ಪ್ರಶ್ನೆ ಕೇಳಿ ಮಾನಸಿಕ ಕಿರುಕುಳ ನೀಡಿದ್ದಾರೆ. ಅನ್ಯಾಯವನ್ನು ಖಂಡಿಸಿ ವಿದ್ಯಾರ್ಥಿ ನಂದಪ್ಪ ಪಿ. ಉಪವಾಸ ಸತ್ಯಾಗ್ರಹ ಮಾಡಿದರೂ ಸಹ ವಿಶ್ವವಿದ್ಯಾಲಯವು ಸಮಸ್ಯೆಯನ್ನು ಬಗೆಹರಿಸಿಲ್ಲ.
 16. ಪುರುಷ ಸೆಕ್ಯುರಿಟಿ ಗಾರ್ಡ್‌ಗಳು ಯಾವುದೇ ಮುನ್ಸೂಚನೆ ಕೊಡದೆ ತಪಾಸಣೆಯ ನೆಪದಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್‌ನ ಕೊಠಡಿಗಳಿಗೆ ಏಕಾಏಕಿ ಪ್ರವೇಶಿಸಿ ಅವರಿಗೆ ತೊಂದರೆ ಕೊಡುತ್ತಿದ್ದಾರೆ. ನೀವು ಏಕೆ ಕುಂಕುಮ ಹಾಕಿಲ್ಲ, ಬಳೆ ತೊಟ್ಟಿಲ್ಲ ಎಂದು ಹೇಳಿ ಅವರಿಗೆ ಮಾನಸಿಕವಾಗಿ ಕಿರುಕುಳ ನೀಡುವುದಲ್ಲದೆ, ನೀವು ‘ಕಾಶ್ಮೀರಿ ಫೈಲ್’ ಸಿನಿಮಾ ನೋಡಿ ಎಂದು ಒತ್ತಾಯಿಸಲಾಗುತ್ತಿದೆ.
 17. ಎಸ್.ಟಿ/ಎಸ್.ಟಿ ವಿದ್ಯಾರ್ಥಿಗಳು ಜನರಲ್ ಮೆರಿಟಲ್‌ನಲ್ಲಿ ಆಯ್ಕೆಯಾಗಿ ಪ್ರವೇಶ ಪಡೆದರೆ, ಅಂತಹ ದಲಿತ ವಿದ್ಯಾರ್ಥಿಗಳಿಗೆ ಜನರಲ್ ವಿದ್ಯಾರ್ಥಿಗಳಿಗೆ ವಿಧಿಸುವ ಶುಲ್ಕವನ್ನೇ ವಿಧಿಸಲಾಗುತ್ತಿದೆ.
 1. ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಸೆಕ್ಯುರೀಟಿ ಆಫೀಸರ್ ಡಾ. ಶಿವಾನಂದ ಕೋಳಿ ಉದ್ದೇಶಪೂರ್ವಕವಾಗಿ ದಲಿತ ವಿದ್ಯಾರ್ಥಿಗಳನ್ನು ತಡೆದು ಕಿರುಕುಳ ನೀಡುತ್ತಿದ್ದಾರೆ. ವಿಶ್ವವಿದ್ಯಾಲಯದ ಆವರಣದಲ್ಲಿ ದಿನನಿತ್ಯ ಆರ್.ಎಸ್.ಎಸ್, ಶಾಖಾ ಪರೇಡ್ ಮತ್ತು ಪಥಸಂಚಲನ ನಡೆಸಲಾಗುತ್ತಿದೆ.
 2. ವಿಶ್ವವಿದ್ಯಾಲಯದ ಗ್ರಂಥಾಲಯದ ಮುಂದೆ ಇದ್ದಂತಹ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತಕ್ಕೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗಿದೆ.
 3. ಸಹಾಯಕ ಹಾಗೂ ಸಹ ಪ್ರಾಧ್ಯಾಪಕರ ನೇಮಕಾತಿಯ ಸಂದರ್ಭದಲ್ಲಿ ಮೀಸಲಾತಿಯ ನಿಯಮವನ್ನು ಉಲ್ಲಂಘಿಸಲಾಗಿದೆ.
 4. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರವನ್ನು ಪ್ರಶ್ನಿಸಲು ಬಂದ ಸ್ಥಳೀಯ ಹೋರಾಟಗಾರರ ಮೇಲೆ, ಉದ್ದೇಶಪೂರ್ವಕವಾಗಿ ಪೊಲೀಸ್ ಕೇಸ್ ಹಾಕುವ ಮೂಲಕ ವಿಶ್ವವಿದ್ಯಾಲಯವು ಸಮಾಜ ವಿರೋಧಿಯಾಗಿ ನಡೆದುಕೊಂಡಿದೆ.
 5. ಉನ್ನತ ವ್ಯಾಸಂಗವನ್ನು ಕಲ್ಪಿಸಿಕೊಡುವ ಸದುದ್ದೇಶದಿಂದ ಸ್ಥಾಪಿಸಲಾಗಿರುವ ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಕೋಮುವಾದಿ, ಜಾತಿವಾದಿ, ಮತಾಂಧರಿಂದ ರಕ್ಷಿಸಿಕೊಳ್ಳಬೇಕು.

ಕೋಮುವಾದ ಅಳಿಸಿ, ವಿವಿ ಉಳಿಸಿ ಜಾಥಾದಲ್ಲಿ, ಡಾ. ಡಿ.ಜಿ. ಸಾಗರ,ಮರೆಪ್ಪ ಹಳ್ಳಿ, ಪ್ರೊ. ಆರ್.ಕೆ. ಹುಡುಗಿ,ಲಚ್ಚಪ್ಪ ಜಮಾದರ,ಮಹಾಂತೇಶ ಎಸ್‌.ಕೌಲಗಿ,ಮಾರುತಿ ಗೋಖಲೆ,ಅಶ್ವಿನಿ ಮದನಕರ್,ಸುರೇಶ ಹಾದಿಮನಿ,ಮೀನಾಕ್ಷಿ ಬಾಳಿ, ಕೆ ನೀಲಾ, ಲಕ್ಷ್ಮಿಕಾಂತ್ ಹುಬ್ಳಿ, ಮರೆಪ್ಪ ಚಟ್ಟೆರಕೇರಾ, ಶಿವಪುತ್ರ ಜವಳಿ, ಚಂದಪ್ಪ ಕಟ್ಟಿಮನಿ, ದುರ್ಗೆಶ್ ಕೆವಿಎಸ್‌, ಶ್ರೀನಾಥ್ ಪೂಜಾರಿ,ಅಬ್ದುಲ್ ಖಾದರ್, ಬಸಣ್ಣಾ ಸಿಂಗ್, ರವೀಂದ್ರ ಶಹಾಬಾದಿ, ಪ್ರಭಾ ಖಾನಪುರ, ಡಾ. ಹಣಮಂತರಾವ ದೊಡ್ಮನಿ, ಗುಂಡಪ್ಪ ಲಂಡನಕ‌, ಎಸ್.ಪಿ.ಸುಳ್ಳದ, ಮೌಲಾಮುಲ್ಲಾ, ಸಂಜಯ ಮಾಕಲ್, ಮಹಾದೇವ ಭನ್ನಿ, ದಯಾನಂದ ಶೇರಿಕಾರ್. ಎ.ಬಿ. ಹೊಸ್ಟನಿ, ದಿಗಂಬರ ಬೆಳಮಗಿ, ಬಸಲಿಂಗ ಗಾಯಕವಾಡ,  ಎಚ್.ಶಂಕರ್, ಎಸ್‌.ಎಮ್.ಪಟ್ಟಣಕ‌, ಮಹೇಶ ರಾಠೋಡ್, ಸುಧಾ ಮದಾನಿ ಸೇರಿದಂತೆ, ಎಲ್ಲಾ ಪ್ರಗತಿಪರ ಸಂಘಟನೆಯ ಮುಖಂಡರು, ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕಡ್ಡಾಯ ಮತದಾನದಿಂದ ಪ್ರಜಾಪ್ರಭುತ್ವ ಸದೃಢ; ತಾಪಂ ಇಒ ವಿಶ್ವನಾಥ ಹೊಸಮನಿ

ಭಾರತದ ಸಂವಿಧಾನ ಜಾತಿ, ಧರ್ಮ, ಬಡವ ಶ್ರೀಮಂತ ಎನ್ನದೆ ಎಲ್ಲರಿಗೂ ಸಮಾನತೆಯಿಂದ...

ತುಮಕೂರು | ಅಧಿಕಾರಕ್ಕಾಗಿ ಊರೂರು ಅಲೆಯುವ ವಿ.ಸೋಮಣ್ಣ ಜಿಲ್ಲೆಗೆ ಬೇಕೆ? ಗೃಹ ಸಚಿವ ಪರಮೇಶ್ವರ್ ಪ್ರಶ್ನೆ

ರಾಜಕೀಯ ಅಧಿಕಾರಕ್ಕಾಗಿ ಗೋವಿಂದರಾಜ ನಗರ, ವರುಣ, ಚಾಮರಾಜನಗರ, ತುಮಕೂರು ಎಂದು ಅಲೆಯುತ್ತಿರುವ...

ಬೆಂಗಳೂರಿನಲ್ಲಿ ನೀರು ಸೋರಿಕೆ ಪತ್ತೆ ಹಚ್ಚಲಿವೆ ರೊಬೋಟ್‌ಗಳು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ನೀರಿನ ಸಮಸ್ಯೆ ತಲೆದೂರಿದೆ. ಈ ಹಿನ್ನೆಲೆ,...

ದಾವಣಗೆರೆ | ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹ

ದಾವಣಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಲವಾರು ವರ್ಷಗಳಿಂದ ಬೇಡಿಕೆ ಇಡಲಾಗಿದೆ. ಸರ್ಕಾರ...