ಹೊಸ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಇರುವ ನಿಯಮಗಳನ್ನು ದೆಹಲಿ ಸರ್ಕಾರವು ಸಡಿಲಿಸಿದ್ದು, ಎರಡು ಪ್ರಮುಖ ಕಡ್ಡಾಯ ಷರತ್ತುಗಳನ್ನು ಕೈಬಿಟ್ಟಿದೆ. ಸೆಪ್ಟೆಂಬರ್ 30ರಂದು ಅಧಿಸೂಚನೆ ಹೊರಡಿಸಲಾಗಿರುವ ‘ದೆಹಲಿ ಶಾಲಾ ಶಿಕ್ಷಣ (ತಿದ್ದುಪಡಿ) ನಿಯಮಗಳು 2026’ರ ಅನ್ವಯ, 1973ರ ಮೂಲ ನಿಯಮದ 44 ಮತ್ತು 50ನೇ ವಿಧಿಗಳಿಗೆ ತಿದ್ದುಪಡಿ ತರಲಾಗಿದೆ. ಈ ನಿಯಮಗಳನ್ವಯ, ಖಾಸಗಿ ವಾಣಿಜ್ಯ ಭೂಮಿಯಲ್ಲಿ ಹೊಸ ಶಾಲೆ ನಿರ್ಮಿಸಲು ಇನ್ಮುಂದೆ ‘ಸಾರ್ವಜನಿಕ ಹಿತಾಸಕ್ತಿ ಮೌಲ್ಯಮಾಪನ’ದ (ಆ ಪ್ರದೇಶಕ್ಕೆ ಹೊಸ ಶಾಲೆಯ ಅಗತ್ಯವಿದೆಯೇ ಎಂಬ ಪರಿಶೀಲನೆ) ಅಗತ್ಯವಿರುವುದಿಲ್ಲ. ಜೊತೆಗೆ, ಶಾಲೆಗೆ ಮಾನ್ಯತೆ ಪಡೆಯುವಾಗ ಆ ನಿರ್ದಿಷ್ಟ ಪ್ರದೇಶದಲ್ಲಿ ಹೊಸ ಶಾಲೆಯ ನೈಜ ಅಗತ್ಯವಿದೆಯೇ ಎಂದು ಸಾಬೀತುಪಡಿಸುವ ಷರತ್ತನ್ನೂ ಸಹ ಸರ್ಕಾರ ರದ್ದುಗೊಳಿಸಿದೆ.
ನಿಯಮ 44ಕ್ಕೆ ತರಲಾಗಿರುವ ತಿದ್ದುಪಡಿಯ ಪ್ರಕಾರ, ಸೊಸೈಟಿ ಅಥವಾ ಸಾರ್ವಜನಿಕ ಟ್ರಸ್ಟ್‌ನಿಂದ ಖಾಸಗಿಯವರ ಒಡೆತನದ ವಾಣಿಜ್ಯ ಜಾಗದಲ್ಲಿ ಶಾಲೆ ನಿರ್ಮಿಸಲು ಉದ್ದೇಶಿಸಿದ್ದರೆ ಸಾರ್ವಜನಿಕ ಹಿತಾಸಕ್ತಿ ಮೌಲ್ಯಮಾಪನ ಅನ್ವಯಿಸುವುದಿಲ್ಲ. ಆದರೆ, ಸರ್ಕಾರ ಅಥವಾ ಮಹಾನಗರ ಪಾಲಿಕೆಯಿಂದ ರಿಯಾಯಿತಿ ದರದಲ್ಲಿ ಇಲ್ಲವೇ ಹರಾಜಿನ ಮೂಲಕ ಪಡೆದ ಸಾಂಸ್ಥಿಕ ಜಾಗದಲ್ಲಿ (Institutional land) ಶಾಲೆ ನಿರ್ಮಿಸಲು ‘ಅಗತ್ಯತಾ ಪ್ರಮಾಣಪತ್ರ’ (Essentiality Certificate) ಹೊಂದುವ ನಿಯಮವನ್ನು ಹಾಗೆಯೇ ಮುಂದುವರಿಸಲಾಗಿದೆ. ಇಂತಹ ಅರ್ಜಿದಾರರು ಜಾಗ ಖರೀದಿಸುವ ಅಥವಾ ಹಂಚಿಕೆ ಪಡೆಯುವ ಮುನ್ನ ಆ ಪ್ರದೇಶದಲ್ಲಿ ಶಾಲೆಯ ಅಗತ್ಯವನ್ನು ಸಾಬೀತುಪಡಿಸುವುದು ಕಡ್ಡಾಯವಾಗಿದೆ.
ಇದೇ ವೇಳೆ ನಿಯಮ 50ಕ್ಕೂ ಮಹತ್ವದ ಬದಲಾವಣೆ ತರಲಾಗಿದೆ. ಈ ಹಿಂದೆ ಯಾವುದೇ ಹೊಸ ಖಾಸಗಿ ಶಾಲೆ ಮಾನ್ಯತೆ ಪಡೆಯಬೇಕಾದರೆ, ಆ ಪ್ರದೇಶದಲ್ಲಿ ಶಾಲೆಯ ಅವಶ್ಯಕತೆ ಎಷ್ಟಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಅಲ್ಲದೆ, ಹೊಸ ಶಾಲೆ ಆರಂಭದಿಂದ ಆ ಭಾಗದಲ್ಲಿರುವ ಇತರ ಮಾನ್ಯತೆ ಪಡೆದ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬುದನ್ನು ಖಾತರಿಪಡಿಸುವ ಅಗತ್ಯವಿತ್ತು. ಇದೀಗ ದೆಹಲಿ ಸರ್ಕಾರವು ಈ ಸಂಪೂರ್ಣ ನಿಯಮವನ್ನೇ ಕೈಬಿಟ್ಟಿದ್ದು, ಹೊಸ ಶಾಲೆಗಳಿಗೆ ಮಾನ್ಯತೆ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸಿದೆ.
ಸರ್ಕಾರದ ಈ ನಡೆಯ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಶಿಕ್ಷಣ ಸಚಿವ ಆಶಿಶ್ ಸೂದ್, “ಆಡಳಿತಾತ್ಮಕ ವಿಳಂಬವನ್ನು (Red tape) ತಪ್ಪಿಸಿ, ರಾಜಧಾನಿಯ ಮಕ್ಕಳಿಗೆ ಹೆಚ್ಚಿನ ಶಾಲೆಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ನಮ್ಮ ಮಕ್ಕಳಿಗೆ ಹೆಚ್ಚಿನ ಅವಕಾಶಗಳು ಮತ್ತು ಸೀಟುಗಳ ಅಗತ್ಯವಿದೆ. ಹಳೆಯ ನಿಯಮಗಳಿಂದ ಶೈಕ್ಷಣಿಕ ಮೂಲಸೌಕರ್ಯಕ್ಕೆ ಅಡ್ಡಿಯಾಗಬಾರದು. ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸುತ್ತಲೇ, ಖಾಸಗಿ ವಾಣಿಜ್ಯ ಭೂಮಿಯನ್ನು ಶಿಕ್ಷಣಕ್ಕಾಗಿ ಬಳಸಿಕೊಳ್ಳಲು ಹಾಗೂ ಶಾಲಾ ಮೂಲಸೌಕರ್ಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಈ ನಿಯಮಗಳನ್ನು ಸಡಿಲಿಸಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
This video cannot be played in your browser. Open the video directly
ಆದರೆ, ಸರ್ಕಾರದ ಈ ನಿರ್ಧಾರದ ಬಗ್ಗೆ ಶಿಕ್ಷಣ ತಜ್ಞರು ಮತ್ತು ವಕೀಲರಾದ ಅಶೋಕ್ ಅಗರ್ವಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸರ್ಕಾರದ ಈ ತೀರ್ಮಾನವು ಶಿಕ್ಷಣದ ಖಾಸಗೀಕರಣದತ್ತ ವಾಲುತ್ತಿರುವ ಸ್ಪಷ್ಟ ಸೂಚನೆಯಾಗಿದೆ. ಒಂದೆಡೆ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದ್ದರೆ, ಮತ್ತೊಂದೆಡೆ ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚುತ್ತಿದೆ. ಅಲ್ಲದೆ, ಈ ಹಿಂದೆ ಕೇವಲ ಸೊಸೈಟಿ, ಟ್ರಸ್ಟ್ ಅಥವಾ ಲಾಭರಹಿತ ಸಂಸ್ಥೆಗಳು ಮಾತ್ರ ಶಾಲೆ ನಡೆಸಲು ಅವಕಾಶವಿತ್ತು. ಈಗಿನ ಅಧಿಸೂಚನೆ ಪ್ರಕಾರ ವ್ಯಕ್ತಿಗಳು ಕೂಡ ಅರ್ಜಿ ಸಲ್ಲಿಸುವಂತಿದ್ದು, ಇದು ನೇರವಾಗಿ ‘ಶಿಕ್ಷಣ ಹಕ್ಕು ಕಾಯ್ದೆ’ಯ (RTE) ಉಲ್ಲಂಘನೆಯಾಗಿದೆ,” ಎಂದು ಅವರು ಕಾನೂನು ತೊಡಕುಗಳನ್ನು ಎತ್ತಿತೋರಿಸಿದ್ದಾರೆ.
ಶಿಕ್ಷಣ ತಜ್ಞ ಅಶೋಕ್ ಪಾಂಡೆ ಅವರ ಅಭಿಪ್ರಾಯವೇ ವಿಭಿನ್ನವಾಗಿದೆ. “ಈ ನಿಯಮ ಸಡಿಲಿಕೆಯಿಂದ ವಾಸ್ತವದಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದ ಪರಿಣಾಮಗಳೇನೂ ಆಗುವುದಿಲ್ಲ. ಖಾಸಗಿ ಒಡೆತನದ ವಾಣಿಜ್ಯ ಭೂಮಿ ಎಂದರೆ ಏನು ಎಂಬುದನ್ನು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿಲ್ಲ. ಅಲ್ಲದೆ ದೆಹಲಿಯಂತಹ ನಗರದಲ್ಲಿ ಶಾಲೆ ತೆರೆಯಲು ಖಾಸಗಿ ಜಾಗ ಎಲ್ಲಿದೆ? ಜಾಗದ ಬೆಲೆಯೂ ವಿಪರೀತ ದುಬಾರಿಯಾಗಿದೆ. ಕೇವಲ ‘ಅಗತ್ಯತೆಯ ಮೌಲ್ಯಮಾಪನ’ದಿಂದ ವಿನಾಯಿತಿ ನೀಡುವುದು ಅತಿ ಸಣ್ಣ ಸಡಿಲಿಕೆಯಾಗಿದ್ದು, ಕೇವಲ ಇದೇ ಕಾರಣಕ್ಕಾಗಿ ರಾಜಧಾನಿಯಲ್ಲಿ ಏಕಾಏಕಿ ದೊಡ್ಡ ಮಟ್ಟದಲ್ಲಿ ಹೊಸ ಶಾಲೆಗಳು ತಲೆ ಎತ್ತುತ್ತವೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ,” ಎಂದು ಅವರು ವಿಶ್ಲೇಷಿಸಿದ್ದಾರೆ.





