- ರಾಮಪ್ಪ ಲಮಾಣಿ, ಎಂಪಿ ಕುಮಾರಸ್ವಾಮಿ, ಪೂರ್ಣೀಮಾ ಶ್ರೀನಿವಾಸ ಕಾಂಗ್ರೆಸ್‌ನತ್ತ ಮುಖ
- ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸೇರ್ಪಡೆಯಾಗಲಿರುವ ಬಿಜೆಪಿ-ಜೆಡಿಎಸ್ ನಾಯಕರು
ಬಿಜೆಪಿ ಮತ್ತು ಜೆಡಿಎಸ್‌ನ ಮಾಜಿ ಶಾಸಕರು ಕಾಂಗ್ರೆಸ್‌ನತ್ತ ಮತ್ತೆ ಮುಖಮಾಡಿದ್ದು, ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ರಾಮಪ್ಪ ಲಮಾಣಿ, ಜೆಡಿಎಸ್‌ನ ಮೂಡಿಗೆರೆಯ ಮಾಜಿ ಶಾಸಕ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸೇರುವುದು ಅಧಿಕೃತವಾಗಿದೆ.
ಈ ಇಬ್ಬರು ಬಿಜೆಪಿ ನಾಯಕರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿಯಲ್ಲಿ ಭೇಟಿಯಾಗಿ ಚರ್ಚಿಸಿ, ಈ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಳೆದ ವಿಧಾನಸಭೆ ಚುಣಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕಾಗಿ ರಾಮಪ್ಪ ಲಮಾಣಿ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದರು.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ರಾಮಪ್ಪ ಲಮಾಣಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬಿಜೆಪಿಗೆ ಮಾಜಿ ಶಾಸಕಿ ಪೂರ್ಣಿಮಾ ಗುಡ್ ಬೈ; ಅ.20ರಂದು ಕಾಂಗ್ರೆಸ್‌ಗೆ ಸೇರ್ಪಡೆ
ಸಂಪರ್ಕ ಸೇತುವೆ ಶೆಟ್ಟರ್
ಬಿಜೆಪಿ ಮಾಜಿ ಶಾಸಕರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಸಂಪರ್ಕಿಸಿದ್ದು, ಅವರ ಮೂಲಕ ಕಾಂಗ್ರೆಸ್ ಪಕ್ಷ ಸೇರುವ ಪ್ರಯತ್ನ ಎದ್ದು ಕಾಣಿಸುತ್ತಿದೆ. ಬಿಜೆಪಿಯಲ್ಲಿ ಇರುವ ಅತೃಪ್ತರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡುವಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಈಗಾಗಲೇ 20 ಕ್ಕೂ ಅಧಿಕ ಮಂದಿ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಶೆಟ್ಟರ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ
ಅ.20 ಕ್ಕೆ ಎಂ ಪಿ ಕುಮಾರಸ್ವಾಮಿ, ಪೂರ್ಣಿಮಾ ಶ್ರೀನಿವಾಸ್ ಸೇರ್ಪಡೆ
ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಎಂ ಪಿ ಕುಮಾರಸ್ವಾಮಿ ಅವರು, ಇದೀಗ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಇಕ್ಕಟ್ಟಿಗೆ ಸಿಲುಕಿದ್ದು, ಈ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಅ. 20 ರಂದು ಸೇರ್ಪಡೆ ಆಗಲಿದ್ದಾರೆ. ಜೊತೆಗೆ ಮಾಜಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡಾ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.