ದೇಶಾದ್ಯಂತ ನಡೆಯುತ್ತಿರುವ ವಿವಿಧ ಜನಪರ ಪ್ರತಿಭಟನೆಗಳು ಹಾಗೂ ಹೋರಾಟಗಳನ್ನು ಒಂದೇ ಸೂರಿನಡಿ ತಂದು ನಕ್ಷೆಗೊಳಿಸುವ ಉದ್ದೇಶದಿಂದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಸತ್ಯಾಗ್ರಹ’ ಎಂಬ ನೂತನ ಡಿಜಿಟಲ್ ವೇದಿಕೆಯನ್ನು ಶನಿವಾರ ಲೋಕಾರ್ಪಣೆಗೊಳಿಸಿದ್ದಾರೆ.
ಗಾಂಧಿ ಜಯಂತಿಯ ಬೆನ್ನಲ್ಲೇ ಈ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಲಾಗಿದ್ದು, ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟದ ತತ್ವಗಳಿಂದ ಇದು ಪ್ರೇರಣೆ ಪಡೆದಿದೆ. ನಿವೇಶನ ಹಕ್ಕು, ಪರೀಕ್ಷಾ ಅಕ್ರಮಗಳು, ವಿದ್ಯಾರ್ಥಿಗಳ ಸಮಸ್ಯೆಗಳು, ರೈತರ ಹೋರಾಟ ಹಾಗೂ ವಿವಿಧ ಅನ್ಯಾಯಗಳ ವಿರುದ್ಧ ಹೋರಾಡುತ್ತಿರುವ ಸಾರ್ವಜನಿಕರು ಮತ್ತು ಯುವಜನರು ತಮ್ಮ ಅನುಭವ ಹಾಗೂ ಮಾಹಿತಿಯನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಲು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಇದನ್ನೂ ಓದಿ: ಸೋನಮ್ ಉಪವಾಸ ಹೋರಾಟದಿಂದ ರಾಹುಲ್ ಗಾಂಧಿ ದೂರ; ಯಾಕೆ?
ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದ ಪ್ರತಿಭಟನೆಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ನಕ್ಷೆಯಲ್ಲಿ ಪ್ರದರ್ಶಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಹಾಗೆಯೇ ವಿವಿಧ ಕಾರಣಗಳಿಗಾಗಿ ಹೋರಾಡುತ್ತಿರುವ ಸಮುದಾಯಗಳು ಹಾಗೂ ಜನರು ಪರಸ್ಪರ ಸಂಪರ್ಕ ಸಾಧಿಸಲು ಮತ್ತು ಬೆಂಬಲ ಕೋರಲು ಈ ವೇದಿಕೆ ನೆರವಾಗಲಿದೆ. ಸಾರ್ವಜನಿಕರ ದೈನಂದಿನ ಹೋರಾಟ ಮತ್ತು ದೂರುಗಳನ್ನು ರಾಷ್ಟ್ರೀಯ ಮಟ್ಟದ ಚರ್ಚೆ ಹಾಗೂ ಸಂಸತ್ತಿನ ಗಮನಕ್ಕೆ ತರುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ರಾಹುಲ್ ಗಾಂಧಿ, “ದೇಶದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧದ ಧ್ವನಿಗಳಿಗೆ ಶಕ್ತಿ ತುಂಬಲು ಮತ್ತು ಸಂಘಟಿಸಲು ಈ ವೇದಿಕೆ ನೆರವಾಗಲಿದೆ” ಎಂದು ತಿಳಿಸಿದ್ದಾರೆ.



