ಬಳ್ಳಾರಿ ನಗರ ಕ್ಷೇತ್ರದ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ತೆಗೆದು ಹಾಕಲು ಒಳಸಂಚು ರೂಪಿಸಿದ ಆರೋಪದ ಮೇಲೆ ಬಿಜೆಪಿಯ ಕಾರ್ಪೊರೇಟರ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಗಿದೆ.
ಕಾಂಗ್ರೆಸ್‌ನ ಬೂತ್ ಮಟ್ಟದ ಪ್ರತಿನಿಧಿ (ಬಿಎಲ್‌ಎ) ಗೌತಮ್ ಎಸ್. ನೀಡಿರುವ ದೂರು ಆಧರಿಸಿ ಬಿಜೆಪಿ ಕಾರ್ಪೊರೇಟರ್, ಬಿಎಲ್‌ಎ-1 ಶ್ರೀನಿವಾಸ ಮೋತ್ಕರ್, ಬಳ್ಳಾರಿ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ನಂದೀಶ್, ಬಿಎಲ್‌ಒ ಸುಮಾಲತಾ, ಪಾಲಿಕೆಯ ಕೇಸ್ ವರ್ಕರ್ ಶರಣಬಸವ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಾಗಿದೆ.
ಆಗಸ್ಟ್ 24ರಂದು ಕರಡು ಪಟ್ಟಿ ಪ್ರಕಟವಾಗಿತ್ತು. ಕಾರ್ಪೊರೇಟರ್ ಶ್ರೀನಿವಾಸ ಮೋತ್ಕರ್ ಸೆ.21 ರಂದು 7,561 ಮತದಾರರ ಹೆಸರನ್ನು ಮರು ಪರಿಷ್ಕರಣೆ ಮಾಡುವಂತೆ ಕೋರಿ ಅಧಿಕಾರಿಗಳಿಗೆ ಪತ್ರ ನೀಡಿದ್ದರು. ಚುನಾವಣಾ ಅಧಿಕಾರಿಗಳು ಮೊದಲಿಗೆ ಈ ಪತ್ರವನ್ನು ತಿರಸ್ಕರಿಸಿ ಹಿಂಬರಹ ನೀಡಿದ್ದರು. ಸೆ.22ರಂದು 7,561 ‘ಫಾರಂ-7’ ಅರ್ಜಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಇದು ನಿಯಮ ಬಾಹಿರ. ಅಧಿಕಾರಿಗಳು ನಿಯಮ ಗಾಳಿಗೆ ತೂರಿ ಈ ಬೃಹತ್ ಪ್ರಮಾಣದ ಅರ್ಜಿಗಳನ್ನು ಸ್ವೀಕರಿಸಿ ಮರು ಪರಿಶೀಲನೆ ಕೈಗೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ
ಬಿಜೆಪಿ ಮುಖಂಡರು ಸಲ್ಲಿಸಿರುವ 7,561 ಅರ್ಜಿಗಳಲ್ಲಿ ಶೇ 98.08ಕ್ಕೂ ಹೆಚ್ಚು ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.




