ಕರ್ನಾಟಕದ ವಿವಿಧ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳ ವ್ಯಾಪ್ತಿಯ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಿಗೆ ಕೋರಿ ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿಂದು ಹುಣಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಸಂವಿಧಾನ ವೃತ್ತದಿಂದ ಆರಂಭವಾದ ಪ್ರತಿಭಟನಾ ಪಾದಯಾತ್ರೆ ಜೆಎಲ್‌ಬಿ ರಸ್ತೆ ಹಾಗೂ ಕಲ್ಪತರು ಮಾರ್ಗವಾಗಿ ತಾಲೂಕು ಕಚೇರಿವರೆಗೆ ಸಾಗಿತು. ನಂತರ ಪ್ರತಿಭಟನಾಕಾರರು ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ, ಉಪತಹಸೀಲ್ದಾರ್ ಶ್ರೀಪಾದ್ ಅವರ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು, ವಿದ್ಯುತ್ ಕಾಯ್ದೆ–2003ರ ಕಲಂ 14(6)ರ ಅಡಿಯಲ್ಲಿ ಟಾಟಾ ಪವರ್ ಸಲ್ಲಿಸಿರುವ ಅರ್ಜಿಯು ಅಪೂರ್ಣವಾಗಿದ್ದು, ಸಮಾನಾಂತರ ವಿದ್ಯುತ್ ವಿತರಣೆಗೆ ಅಗತ್ಯವಿರುವ ವಿದ್ಯುತ್ ಮೂಲ, ಖರೀದಿ ಮತ್ತು ಉತ್ಪಾದನಾ ವೆಚ್ಚ, ಮೂಲಸೌಕರ್ಯ ನಿರ್ಮಾಣ, ಬಂಡವಾಳ ಹೂಡಿಕೆ, ತಾಂತ್ರಿಕ ಯೋಜನೆ ಹಾಗೂ ಸಿಬ್ಬಂದಿ ನೇಮಕಾತಿ ಕುರಿತ ಸಮಗ್ರ ಮಾಹಿತಿಯನ್ನು ಒದಗಿಸಿಲ್ಲ ಎಂದು ಆರೋಪಿಸಿದರು.

ರಾಜ್ಯದ ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಹಾಸನ, ಚಾಮರಾಜನಗರ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಬಳ್ಳಾರಿ, ರಾಯಚೂರು, ಕಲಬುರಗಿ ಹಾಗೂ ಯಾದಗಿರಿ ಸೇರಿದಂತೆ 19 ಜಿಲ್ಲೆಗಳಲ್ಲಿ ಈಗಿರುವ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನಾಂತರವಾಗಿ ಖಾಸಗಿ ಕಂಪನಿಗೆ ಪರವಾನಿಗೆ ನೀಡುವುದು ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ 600ಕ್ಕೂ ಹೆಚ್ಚು ಸಾರ್ವಜನಿಕರ ಸಹಿಗಳನ್ನು ಸಂಗ್ರಹಿಸಿ ಮನವಿಯೊಂದಿಗೆ ಸಲ್ಲಿಸಲಾಯಿತು. ಅಲ್ಲದೆ, ವಿದ್ಯುತ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಅವರಿಗೆ ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಪತ್ರಗಳನ್ನು ಹಸ್ತಾಂತರಿಸಲಾಯಿತು.
ಈ ಸುದ್ದಿ ಓದಿದ್ದೀರಾ?ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಮಳವಳ್ಳಿಯಲ್ಲಿ ಬೆಂಬಲ

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಅಗ್ರಹಾರ ರಾಮೇಗೌಡ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ದಸಂಸ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಚಿಕ್ಕಹುಣಸೂರು ರಾಜು, ಉಂಡವಾಡಿ ಚಂದ್ರೇಗೌಡ, ನಿಲುವಾಗಿಲು ಪ್ರಭಾಕರ್, ತಮಡಹಳ್ಳಿ ಶ್ರೀನಿವಾಸ್, ಈಶ್ವರ್, ಕಿರಿಜಾಜಿ ಧನಂಜಯ, ಕಲ್ಲಹಳ್ಳಿ ವಿಷಕಂಠಪ್ಪ, ಜಯಣ್ಣ, ಶಿವಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು.




