ಮಕ್ಕಳು ದೇಶದ ಭವಿಷ್ಯ, ಸಮಾಜದ ಆಶಾಕಿರಣ ಇಂದಿನ ಮಕ್ಕಳು ಹೇಗಿರುತ್ತಾರೋ ನಾಳೆ ಸಮಾಜವು ಹಾಗೆಯೇ ರೂಪಗೊಳ್ಳುತ್ತದೆ. ಮಕ್ಕಳ ಸ್ಥಿತಿಗತಿಯು ಒಂದು ಕುಟುಂಬದ ಅಥವಾ ಸಮಾಜದ ಸಮಸ್ಯೆಯಲ್ಲ. ಅದು ಇಡೀ ರಾಷ್ಟ್ರದ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷರು ಹಾಗೂ ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಲ್.ಎಚ್. ಅರುಣ್ ಕುಮಾರ್ ಹೇಳಿದರು.
ನಗರದ ಡಿ.ಸಿ.ಎಂ. ಟೌನ್‌ಶಿಪ್ ನಲ್ಲಿರುವ ಗೋಲ್ಡನ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಇಂದಿನ ಮಕ್ಕಳು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡುತ್ತಿದ್ದಾರೆ. ಆದರೆ ಮತ್ತೊಂದೆಡೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂದಿಗೂ ಗುಣಮಟ್ಟದ ಶಿಕ್ಷಣ ಎಲ್ಲಾ ಮಕ್ಕಳಿಗೂ ಸಮಾನವಾಗಿ ದೊರೆಯುತ್ತಿಲ್ಲ. ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಮಕ್ಕಳ ಮೇಲಿನ ದೌರ್ಜನ್ಯ, ಡಿಜಿಟಲ್ ವ್ಯಸನ, ಮಾನಸಿಕ ಒತ್ತಡ ಮತ್ತು ಪೌಷ್ಠಿಕ ಆಹಾರದ ಕೊರತೆ ಇವು ಇಂದಿನ ಸವಾಲುಗಳಾಗಿವೆ” ಎಂದರು.
“ಮಕ್ಕಳ ಸಹಜ ಬಾಲ್ಯವನ್ನು ಉಳಿಸುವುದು ಅತ್ಯಂತ ಮುಖ್ಯವಾಗಿದ್ದು, ಭಾರತದ ಸಂವಿಧಾನ ಮತ್ತು ಮಕ್ಕಳ ಹಕ್ಕುಗಳ ಒಡಂಬಡಿಕೆ ಮಕ್ಕಳ ರಕ್ಷಣೆಗೆ ಹಲವು ಮಹತ್ವದ ಅವಕಾಶಗಳನ್ನು ಒದಗಿಸಿದೆ ಎಂದು ತಿಳಿಸಿದರು. ಅಂಕಗಳಿಸುವಿಕೆ ಒಂದೇ ಶಿಕ್ಷಣವಲ್ಲ, ಉತ್ತಮ ವ್ಯಕ್ತಿತ್ವವನ್ನು ಹೊಂದಿದ ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ರೂಪಿಸುವುದು ಇಂದಿನ ಸಮಾಜದ ಅಗತ್ಯವಾಗಿದೆ. ನಮಗೆ ಸ್ಪರ್ಧೆಯಲ್ಲಿ ಗೆಲ್ಲುವ ಮಕ್ಕಳು ಮಾತ್ರ ಬೇಕಾಗಿಲ್ಲ. ಸೋಲನ್ನು ಸ್ವೀಕರಿಸುವ ಧೈರ್ಯವಿರುವ ಮಕ್ಕಳು ಬೇಕು. ಒಂದು ದೇಶದ ನಿಜವಾದ ಅಭಿವೃದ್ಧಿಯನ್ನು ಆ ದೇಶದ ಮಕ್ಕಳು ಎಷ್ಟು ಸುರಕ್ಷಿತವಾಗಿ, ಸ್ವತಂತ್ರವಾಗಿ, ಗೌರವದಿಂದ ಮತ್ತು ಸಂತೋಷದಿಂದ ಬದುಕುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಅಳೆಯಬೇಕು” ಎಂದರು.

“ಜಿಲ್ಲಾ ಬಾಲಭವನ ಸಮಿತಿಯ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಶಿಲ್ಪ ಎಸ್.ಬಿ. ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಮಕ್ಕಳ ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲ್ಯಗಳನ್ನು ಬೆಳೆಸುವುದು ಮಕ್ಕಳಲ್ಲಿ ಆತ್ಮವಿಶ್ವಾಸದ ಗುಣಗಳನ್ನು ಅಭಿವೃದ್ಧಿಪಡಿಸುವುದು, ಬಾಲಭವನದ ಉದ್ದೇಶಗಳಾಗಿದ್ದು, ಜಿಲ್ಲಾ ಬಾಲ ಭವನವು ಚಿತ್ರಕಲೆ, ಸ್ಪರ್ಧೆ, ಕರಕುಶಲ ತರಬೇತಿ, ಬೇಸಿಗೆ ಶಿಬಿರಗಳು, ನಾಟಕ ಮತ್ತು ಏಕಪಾತ್ರಾಭಿನಯ, ಪರಿಸರ ಜಾಗೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲಾಗುತ್ತಿದೆ” ಎಂದು ತಿಳಿಸಿದರು.
ಮಕ್ಕಳ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ನಿಕಟಪೂರ್ವ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಬಹುಮಾನ ವಿತರಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗೋಲ್ಡನ್ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೆಚ್.ಎಂ. ಹೇಮಲತಾ, ಜಿಲ್ಲಾ ಬಾಲಭವನ ಕಚೇರಿ ಸಹಾಯಕಿ ಶ್ರೀಮತಿ ಲತಾ ಎಂ.ಜಿ. ಉಪಸ್ಥಿತರಿದ್ದರು.




