ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ದಾವಣಗೆರೆ ಜಿಲ್ಲಾ ಶಾಖೆ ಜನವರಿ 28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯನ್ನು ದಾವಣಗೆರೆ ನಗರದ ಸರ್ಕಾರಿ ನೌಕರ ಭವನದಲ್ಲಿ ಹಮ್ಮಿಕೊಂಡಿತ್ತು.
ಈ ವೇಳೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ, ನಮ್ಮ ಪುರಾತನ ಕಾಲದಿಂದಲೂ ವೈದಿಕ ಧರ್ಮವನ್ನೇ ಹಿಂದೂ ಧರ್ಮವೆಂದು ಪ್ರತಿಪಾದಿಸುತ್ತಾ, ಅವರ ಆಲೋಚನೆಗಳನ್ನೇ ನಮ್ಮಲ್ಲಿ ತುಂಬುವ ಕೆಲಸ ನಡೆಯುತ್ತಿದೆ. ಅಲ್ಲದೆ, ಶೋಷಿತ ವರ್ಗದ ನಮ್ಮ ನಮ್ಮಗಳ ಮಧ್ಯೆ ಒಡಕನ್ನು ತುಂಬುವ ಮೂಲಕ ನಮ್ಮನ್ನು ಸಮಾಜದ ಮುಖ್ಯ ವಾಹಿನಿಗೆ ಬರದಂತೆ ತಡೆಯಲಾಗುತ್ತಿದೆ ಎಂದು ಆರೋಪಿಸಿದರು.
ನಮ್ಮ ನಮ್ಮಗಳ ಮಧ್ಯೆ ಒಡಕನ್ನು ಸೃಷ್ಟಿ ಮಾಡುವ ಮೂಲಕ ಕ್ಷುಲ್ಲಕ ಕಾರಣಗಳನ್ನೇ ಮುಂದು ಮಾಡಿಕೊಂಡು ನಮ್ಮ ನಮ್ಮ ವರ್ಗಗಳ ನಡುವೆ ಹೊಡೆದಾಡಲು ಬಿಡುತ್ತಾರೆ. ಇಂತಹ ಮೂಢನಂಬಿಕೆಗಳು ಅಥವಾ ಕಿವಿ ಚುಚ್ಚುವ ಮಾತುಗಳಿಂದ ನಾವು ಎಚ್ಚರಗೊಳ್ಳುವುದು ಯಾವಾಗ ಎಂದು ಪ್ರಶ್ನಿಸಿದರು.
ಕಾಲ ಬದಲಾದಂತೆ ಅಗ್ರಹಾರಗಳು ಬದಲಾಗುತ್ತಿವೆ. ಆದರೆ, ನಮ್ಮ ವಾಡಿಗಳು ನಮ್ಮ ಹಟ್ಟಿಗಳು, ನಮ್ಮ ಕಾಲೋನಿಗಳು ಬದಲಾಗುತ್ತಿಲ್ಲ. ನಮ್ಮಗಳ ಬಗ್ಗೆ ನಮ್ಮ ಸಂಸ್ಕೃತಿ, ನಮ್ಮ ದೇವರು, ನಮ್ಮ ಆಚಾರ ವಿಚಾರವೇ ಮೇಲು ಎನ್ನುವ ಕಿತ್ತಾಟದಲ್ಲಿ ನಾವು ತೊಡಗಿದ್ದೇವೆ. ನಮ್ಮನ್ನು ಒಂದಾಗದಂತೆ ಮೇಲ್ವರ್ಗಗಳು ನೋಡಿ ಕೊಳ್ಳುತ್ತಿವೆ ಎಂದು ಕಿಡಿಕಾರಿದರು.
ಸಮಾರಂಭದಲ್ಲಿ ಮುಖಂಡರಾದ ಹೊದಿಗೆರೆ ರಮೇಶ್, ಹೆಗ್ಗರೆ ರಂಗಪ್ಪ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.