ದೇವರಾಜ ಅರಸು ನನ್ನ ಹೃದಯವನ್ನು ಗಾಢವಾಗಿ ತಟ್ಟಿದ ನಾಯಕ – ಪ್ರೊ. ಜೇಮ್ಸ್ ಮ್ಯಾನರ್, ಲಂಡನ್

Date:

ಜಾಗೃತ ಕರ್ನಾಟಕʼ ಆಯೋಜಿಸಿರುವ ನಮ್ಮ ಕರ್ನಾಟಕ, ನಮ್ಮ ಮಾದರಿ ಚಿಂತನಾ ಸಮಾವೇಶವನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಿದ ಲಂಡನ್‌ ವಿವಿ ಪ್ರೊಫೆಸರ್‌ ಜೇಮ್ಸ್‌ ಮ್ಯಾನರ್

“ದೇವರಾಜ ಅರಸು ಅವರು ನನ್ನ ಹೃದಯವನ್ನು ಗಾಢವಾಗಿ ತಟ್ಟಿದ ನಾಯಕ. ಅವರು ಕರ್ನಾಟಕದ ಕೋಟ್ಯಂತರ ಜನರಿಗೆ ಹೇಗೆ ಆಪ್ತರಾಗಿದ್ದರೋ, ನನಗೂ ಅಷ್ಟೇ ಆಪ್ತರಾಗಿದ್ದರು. ಸದಾ ನೆನಪಿಸಿಕೊಳ್ಳಬೇಕಿರುವ ವ್ಯಕ್ತಿ ಅವರು” ಎಂದು ಲಂಡನ್‌ ವಿವಿ ಪ್ರಾಧ್ಯಾಪಕ ಪ್ರೊ ಜೇಮ್ಸ್‌ ಮ್ಯಾನರ್‌ ಹೇಳಿದರು.

ಬೆಂಗಳೂರಿನಲ್ಲಿ ʼಜಾಗೃತ ಕರ್ನಾಟಕʼ ಆಯೋಜಿಸಿರುವ ನಮ್ಮ ಕರ್ನಾಟಕ, ನಮ್ಮ ಮಾದರಿ ಚಿಂತನಾ ಸಮಾವೇಶವನ್ನು ಆನ್‌ಲೈನ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೊ ಜೇಮ್ಸ್‌ ಮ್ಯಾನರ್‌ ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ…

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಈ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ ಸಂಘಟಕರಿಗೆ ಧನ್ಯವಾದಗಳನ್ನು ಹೇಳುತ್ತಾ ನನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದೇನೆ.

ದೇವರಾಜ ಅರಸು ಅವರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ಒಂದರ್ಥದಲ್ಲಿ ನನ್ನ ಶೈಕ್ಷಣಿಕ ಮತ್ತು ವೃತ್ತಿ ಬದುಕನ್ನು ರೂಪಿಸುವಲ್ಲಿ ಅವರ ಕೊಡುಗೆ ತುಂಬಾ ದೊಡ್ಡದು.

ಅವರು ನನಗೆ ಕರ್ನಾಟಕದ ಕಥನವನ್ನು ಹೇಳುತ್ತಿದ್ದರು. ಆ ಕಥನವನ್ನು ನಾನು ಜಗತ್ತಿಗೆಲ್ಲಾ ಹಂಚಿ ನನ್ನ ವೃತ್ತಿ ಬದುಕನ್ನು ಕಟ್ಟಿಕೊಂಡೆ.

ಅವರು ನನ್ನ ಹೃದಯವನ್ನು ಗಾಢವಾಗಿ ತಟ್ಟಿದ ನಾಯಕ. ಅವರು ಕರ್ನಾಟಕದ ಕೋಟ್ಯಂತರ ಜನರಿಗೆ ಹೇಗೆ ಆಪ್ತರಾಗಿದ್ದರೋ, ನನಗೂ ಅಷ್ಟೇ ಆಪ್ತರಾಗಿದ್ದರು. ಸದಾ ನೆನಪಿಸಿಕೊಳ್ಳಬೇಕಿರುವ ವ್ಯಕ್ತಿ ಅವರು.

ನಾವಿಂದು ಎಷ್ಟು ಮಂದಿ ಮಾಜಿ ಮುಖ್ಯಮಂತ್ರಿಗಳ ಜನ್ಮದಿನವನ್ನು ಆಚರಿಸುತ್ತೇವೆ ಹೇಳಿ? ಎರಡು? ಮೂರು? ಆ ಸಂಖ್ಯೆ ಹೆಚ್ಚಿರಬಹುದು ಅನ್ನಿಸುವುದಿಲ್ಲ. ಆದರೆ, ಅರಸು ಅವರನ್ನು ಅವರ ಜನ್ಮ ದಿನದಂದು ನೆನಪಿಸಿಕೊಳ್ಳುವುದೇ ಒಂದು ವಿಶೇಷ ಅನುಭವ.

ಅವರನ್ನ ಭೇಟಿಯಾದವರಿಗೆಲ್ಲಾ ಈ ವಿಶಿಷ್ಟ ಅನುಭವ ಆಗಿರುತ್ತದೆ. ಅವರು ಕೆಲವೇ ಕೆಲವು ವ್ಯಕ್ತಿಗಳ ಜತೆ ಸಣ್ಣ ಸಣ್ಣ ಸಭೆಗಳಲ್ಲಿ ಮಾತನಾಡಲಿ, ಅಥವಾ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿರಲಿ, ಅವರೆದುರಿಗಿದ್ದವರನ್ನೆಲ್ಲ ಹೇಗೋ ಒಂದು ರೀತಿ ಪ್ರಸನ್ನತೆಯಿಂದ ಪ್ರಭಾವಿಸುವ ವಿಶಿಷ್ಟ ಶಕ್ತಿ ಅವರಿಗಿತ್ತು. ಈ ಕುರಿತು ಹೆಚ್ಚಿನ ವಿಚಾರಗಳನ್ನು ಮುಂದೆ ಹೇಳುತ್ತೇನೆ.

ಅರಸು ಕರ್ನಾಟಕ ರಾಜಕೀಯದ ಮೇಲೆ ಅಗಾಧ ಪ್ರಭಾವ ಬೀರಿದವರು. ರಾಜ್ಯದ ರಾಜಕೀಯ ಸೂತ್ರಗಳನ್ನೇ ಮುರಿದು ಕಟ್ಟಿದವರು. ಅವರಿಂದಾಗಿ ರಾಜ್ಯ ರಾಜಕೀಯದ ಮೇಲೆ ಪ್ರಬಲ ಭೂಮಾಲೀಕ ವರ್ಗಗಳಿಗೆ ಇದ್ದ ಏಕಸ್ವಾಮ್ಯ ಅಂತ್ಯವಾಯಿತು. ರಾಜ್ಯ ರಾಜಕೀಯಕ್ಕೆ ಅವಕಾಶ ವಂಚಿತ ವರ್ಗಗಳ ಪ್ರವೇಶವಾಯಿತು.

ಇವೆಲ್ಲ ಕರ್ನಾಟಕದಲ್ಲಿ ಮಾತ್ರವೇ ಆಗಿದೆ ಎಂದಲ್ಲ. ಉಳಿದೆಡೆ ಕೂಡಾ ಆಗಿದೆ. ಆದರೆ, ಉಳಿದೆಡೆ ಆಗಿದ್ದು ಅರಸು ಅವರು ಅದನ್ನು ಮಾಡಿ ಹಲವಾರು ವರ್ಷಗಳಾದ ನಂತರ ಎನ್ನುವುದು ಮುಖ್ಯ.

ಉದಾಹರಣೆಗೆ ಗುಜರಾತಿನಲ್ಲಿ ಖಾಮ್ (Koli Kshatriya, Harijan, Adivasi and Muslim) ಸಮುದಾಯಗಳನ್ನು ರಾಜಕೀಯಕ್ಕೆ ತಂದ ರಾಜಕೀಯ ತಂತ್ರ ಕೂಡಾ ಅರಸು ಅವರು ಕರ್ನಾಟಕದಲ್ಲಿ ಮಾಡಿದ ರಾಜಕೀಯ ಪ್ರಯೋಗದ ಹಾಗೆಯೇ ಇತ್ತು.

ಆದರೆ ಅರಸು ಅವರನ್ನು ಈ ರಾಜಕೀಯ ಮಾದರಿಯ ಶಕಪುರುಷ ಎನ್ನಬಹುದು. ಅವರು ಮಾಡಿದ್ದನ್ನು ಮುಂದೆ ಹಲವರು ಅನುಸರಿಸಿದರು.

ಹಾಗಾಗಿ ಅರಸು ಅವರ ಬಗ್ಗೆ ಮಾತನಾಡಲು ನನಗೆ ತುಂಬಾ ಸಂತೋಷ. ಮಾತ್ರವಲ್ಲ, ಅವರ ಬಗ್ಗೆ ಮಾತನಾಡಲು ನನಗೆ ದೊರೆತ ಈ ಅವಕಾಶ ನನ್ನ ಸುಯೋಗ ಅಂತ ಭಾವಿಸಿ ಅವರ ಬಗೆಗಿನ ನನ್ನ ಕೆಲ ಅನಿಸಿಕೆಗಳನ್ನು ತಮ್ಮ ಮುಂದಿಡುತ್ತಿದ್ದೇನೆ.

ನಿಮಗೆಲ್ಲರಿಗೂ ತಿಳಿದಿರುವಂತೆ ದೇವರಾಜ ಅರಸು ಅವರು ಅರಸು ಎನ್ನುವ ಸಣ್ಣ ಸಮುದಾಯಕ್ಕೆ ಸೇರಿದವರು. ಮೈಸೂರು ಮಹಾರಾಜರ ಮನೆತನದವರು ಕೂಡಾ ಇದೇ ಸಮುದಾಯದವರು.

ಅರಸು ಅವರು ಸ್ವಾತಂತ್ರ್ಯ ಸಂಗ್ರಾಮದತ್ತ ಒಲವು ಬೆಳೆಸಿಕೊಂಡರು. ಅಂದಿನ ಮೈಸೂರು ಕಾಂಗ್ರೆಸ್ ಪಕ್ಷ ಸೇರಿದರು. ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆಗಾಗಿ ನಡೆಯುತ್ತಿದ್ದ ಹೋರಾಟದ ಭಾಗವಾದರು. ಈ ಕಾರಣಕ್ಕೆ ಮೈಸೂರು ಅರಸೊತ್ತಿಗೆಯವರಿಗೂ ದೇವರಾಜ ಅರಸು ಅವರ ನಡುವೆ ಆತ್ಮೀಯ ಸಂಬಂಧವೇನೂ ಇರಲಿಲ್ಲ.

ಅವರು ಪ್ರಜಾಸತ್ತೆಯ ಮೇಲೆ ತಮಗಿದ್ದ ನಂಬಿಕೆಯನ್ನು ಸಡಿಲಿಸಲಿಲ್ಲ. ಸ್ವಾತಂತ್ರ್ಯ ನಂತರ ಚುನಾವಣೆ ನಡೆದಾಗ ಅರಸು ಅವರು ಮೈಸೂರು ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು. ಆ ನಂತರ ಮಂತ್ರಿಯೂ ಆದರು.

ಆದರೆ ಆ ದಿನಗಳಲ್ಲಿ ಮೈಸೂರು ರಾಜ್ಯ ಕಾಂಗ್ರೆಸ್ಸಿನ ಉನ್ನತ ಸ್ಥಾನಗಳಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರುಗಳೇ ಇರುತ್ತಿದ್ದರು. ಈ ಎರಡು ಸಮುದಾಯಗಳಿಗೆ ಸೇರಿದ ನಾಯಕರು ಗ್ರಾಮೀಣ ಮಟ್ಟದಲ್ಲಿ ಜನರ ಮೇಲೆ ದೊಡ್ಡ ಮಟ್ಟದ ಹಿಡಿತ ಹೊಂದಿದ್ದ ಕಾರಣಕ್ಕೆ ಅವರಿಗೆ ಪಕ್ಷಗಳಲ್ಲೂ ಉನ್ನತ ಅಧಿಕಾರದ ಸ್ಥಾನ ಸಹಜವಾಗಿಯೇ ಸಿಗುತಿತ್ತು.

1969ರಲ್ಲಿ ಕಾಂಗ್ರೆಸ್ ಇಬ್ಬಾಗವಾಯಿತು; ಇಂದಿರಾ ಗಾಂಧಿಯವರ ನೇತೃತ್ವದ ಬಣ ಕಾಂಗ್ರೆಸ್ (ಆರ್) ಮತ್ತು ಕರ್ನಾಟಕದವರೇ ಆದ ನಿಜಲಿಂಗಪ್ಪ ಅವರ ಬಣ ಕಾಂಗ್ರೆಸ್ (ಓ) ಅಥವಾ ಸಂಸ್ಥಾ ಕಾಂಗ್ರೆಸ್. ಆ ನಂತರವೂ ಕೂಡಾ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಪ್ರಬಲ ಸಮುದಾಯದ ನಾಯಕರ ಪಾರಮ್ಯ ಮುಂದುವರಿಯಿತು. ಕರ್ನಾಟಕದಲ್ಲಿ ಸಂಸ್ಥಾ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯಿತು.

ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರ ಬಣ ಸೇರಿ ಕಾಂಗ್ರೆಸ್ (ಆರ್) ನ ರಾಜ್ಯ ಅಧ್ಯಕ್ಷರಾದರು. ಆ ಕಾಲದ ಪ್ರಬಲ ನಾಯಕರ್ಯಾರೂ ಕೂಡಾ ಅರಸು ಅವರ ಜತೆ ಇರಲಿಲ್ಲ.

‘ನೋಡಿ ಪಕ್ಷದ ಅಧ್ಯಕ್ಷ ಅಂತ ಹೇಳಿಕೊಳ್ಳಲು ನನ್ನ ಬಳಿ ಬಾಗಿಲಿಗೆ ತಗಲಿ ಹಾಕಿದ ಬೋರ್ಡ್ ಬಿಟ್ಟರೆ ಬೇರೇನೂ ಇಲ್ಲ. ಸಂಘಟನೆಯೂ ಇಲ್ಲ, ಬೆಂಬಲವೂ ಇಲ್ಲ ಅಂತ ಅವರೊಮ್ಮೆ ನನ್ನ ಜತೆ ಮಾತನಾಡುತ್ತಾ ಹೇಳಿದ್ದರು.

ಆ ಸ್ಥಿತಿಯಲ್ಲೂ ಸಾವರಿಸಿಕೊಂಡು ಅರಸು ತಮ್ಮದೇ ಆದ ಸಂಘಟನೆ ಕಟ್ಟಿದರು. ರಾಜಕೀಯವನ್ನು ಅರ್ಥೈಸಿಕೊಂಡು ಮುಂದಡಿ ಇಡುವ ಅಪಾರ ಪ್ರತಿಭೆ ಮತ್ತು ಜಾಣ್ಮೆ ಅವರಲ್ಲಿತ್ತು. ರಾಜ್ಯದ ಹಿಂದುಳಿದ ಸಮುದಾಯಗಳು ಸಂಖ್ಯೆಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತರಿಗಿಂತ ಹೆಚ್ಚಿದ್ದಾರೆ ಎಂದೂ, ಅವರನ್ನು ಸಂಘಟಿಸಿದರೆ ತನ್ನ ಪಕ್ಷ ಬೆಳೆಯಬಹುದು ಎಂದು ಅವರು ಲೆಕ್ಕ ಹಾಕಿದರು.

ಹಿಂದುಳಿದ ಸಮುದಾಯಗಳು ರಾಜಕೀಯವಾಗಿ ಸ್ವಂತಿಕೆ ಬೆಳೆಸಿಕೊಂಡು ತಮ್ಮ ಹಿತಾಸಕ್ತಿಯ ಅನುಸಾರ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಬಹುದು, ಪ್ರಬಲ ಭೂಮಾಲೀಕ ಜಾತಿಗಳನ್ನು ರಾಜಕೀಯವಾಗಿ ಮಣಿಸಬಹುದು ಎನ್ನುವ ಅವರ ಲೆಕ್ಕಾಚಾರ ಒಂದು ರೀತಿಯ ಜೂಜಾಟವೇ (gamble) ಆಗಿತ್ತು. ಆದರೂ ಅರಸು ಅದನ್ನು ಮಾಡಲು ಮುಂದಾದರು.

ಆ ಹಂತದಲ್ಲಿ 1971 ರ ಲೋಕಸಭಾ ಚುನಾವಣಾ ಬಂತು. ಇಂದಿರಾ ಗಾಂಧಿ ಅವರು ಗರೀಬೀ ಹಠಾವೋ ಅಥವಾ ಬಡತನ ನಿರ್ಮೂಲನೆ ಮಾಡುವ ಭರವಸೆ ನೀಡಿ ಚುನಾವಣಾ ಪ್ರಚಾರ ನಡೆಸಿದರು. ಆಶ್ಚರ್ಯ ಎಂಬಂತೆ ಅರಸು ಅವರ ನೇತೃತ್ವದಲ್ಲಿ ಕಾಂಗ್ರೆಸ್ (ಆರ್) ಕರ್ನಾಟಕದಲ್ಲಿ ಆಗ ಇದ್ದ ಎಲ್ಲಾ 27 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತು.

ರಾಜ್ಯ ರಾಜಕೀಯದಲ್ಲಿ ಪ್ರಬಲ ಸಮುದಾಯಗಳಿಗೆ ಚುನಾವಣಾ ಫಲಿತಾಂಶ ದೊಡ್ಡ ಆಘಾತ ತಂದಿತು. ನಿಜಲಿಂಗಪ್ಪ ಅವರಿಗೂ ಅದೊಂದು ಆಘಾತ. ಅದರಿಂದ ಚೇತರಿಸಿಕೊಳ್ಳುವುದಕ್ಕೆ ಮೊದಲೇ ಬಂದ 1972ರ ವಿಧಾನಸಭಾ ಚುನಾವಣೆಯಲ್ಲಿ ಅರಸು ಅವರ ನೇತೃತ್ವದಲ್ಲಿ ಕಾಂಗ್ರೆಸ್ (ಆರ್) ಮತ್ತೆ ಜಯಭೇರಿ ಬಾರಿಸಿತು. ಅರಸು ಮುಖ್ಯಮಂತ್ರಿಯಾದರು.

ಪ್ರಬಲ ಸಮುದಾಯಗಳ ಹೊರಗಿನ ನಾಯಕರೊಬ್ಬರು ಮೊತ್ತ ಮೊದಲಿಗೆ ರಾಜ್ಯದ ಚುಕ್ಕಾಣಿ ಹಿಡಿದರು. ಅರಸು ಪ್ರಾಬಲ್ಯ ಪ್ರಶ್ನಿಸುವ ಪ್ರಬಲ ಸಮುದಾಯಗಳ ನಾಯಕರಾರೂ ಅವರ ಪಕ್ಷದಲ್ಲಿ ಇರಲಿಲ್ಲ.

ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಇಂದಿರಾ ಗಾಂಧಿ ಬಣದಲ್ಲೇ ಉಳಿದಿದ್ದರು. ಆದರೆ ಅವರು ಕೇಂದ್ರ ಸಚಿವರಾಗಿದ್ದ ಕಾರಣ ದೆಹಲಿಯಲ್ಲಿದ್ದರು. ಇಂದಿರಾ ಬಣದಲ್ಲಿದ್ದ ಉಳಿದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ಅರಸು ಅವರ ಬೆಂಬಲಕ್ಕೆ ನಿಂತರು.

ಆಡಳಿತದಲ್ಲೂ ಅರಸು ಅವಕಾಶ ವಂಚಿತ ಸಮುದಾಯಗಳ ಪರವಾಗಿ ನಿಂತರು. ಅರಸು ತಮ್ಮ ಮಂತ್ರಿ ಮಂಡಲದಲ್ಲಿ ಪ್ರಬಲ ಖಾತೆಗಳನ್ನು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ನಾಯಕರನ್ನು ಸೇರಿಸಿಕೊಂಡರು. ಇವರಲ್ಲಿ ಅನೇಕರು ಆ ತನಕ ಅನಾಮಿಕರಾಗಿದ್ದವರು. ಅರಸು ಅವರು ಹುಡುಕೀ, ಹುಡುಕೀ ರಾಜಕೀಯಕ್ಕೆ ತಂದವರು.

ಹೊಸಬರಾಗಿದ್ದರೂ ಅರಸು ಮಂತ್ರಿ ಮಂಡಲದಲ್ಲಿ ಪ್ರತಿಭಾವಂತ ಮಂತ್ರಿಗಳಿದ್ದರು. ಅವರೆಲ್ಲರೂ ಅರಸು ಅವರು ಅವಕಾಶ ವಂಚಿತ ಸಮುದಾಯಗಳಿಗಾಗಿ ರೂಪಿಸಿದ ಯೋಜನೆಗಳಿಗೆ ಒತ್ತಾಸೆಯಾಗಿ ನಿಂತರು. ಅರಸು ರೂಪಿಸಿದ ಅತೀ ಮುಖ್ಯ ಯೋಜನೆ ಭೂಸುಧಾರಣೆ. ಇದೊಂದೇ ಯೋಜನೆಯಿಂದಾಗಿ ಸುಮಾರು 12.5 ಲಕ್ಷ ಎಕರೆಯಷ್ಟು ಭೂಮಿ ಗೇಣಿದಾರರ ಕೈಸೇರಿತು.

ಚಾರಿತ್ರಿಕವಾಗಿ ಹಳೆ ಮೈಸೂರ್ ಪ್ರಾಂತ್ಯದಲ್ಲಿ ಭೂರಹಿತರ ಸಂಖ್ಯೆ ಇಡೀ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಕಡಿಮೆ ಇತ್ತು. ಆದರೂ ದೊಡ್ಡ ಸಂಖ್ಯೆಯಲ್ಲೆ ಉಳಿದಿದ್ದ ಗೇಣಿದಾರರಿಗೆ ಅರಸು ಅವರ ಯೋಜನೆ ನೆರವಾಯಿತು.

ಇಷ್ಟಾಗಿಯೂ ಭೂರಹಿತರ ಸಮಸ್ಯೆ ಇನ್ನೂ ಉಳಿದಿತ್ತು. ಇದನ್ನು ಪರಿಹರಿಸುವುದು ಸುಲಭವಲ್ಲ ಅಂತ ಅರಸು ಒಮ್ಮೆ ನನ್ನ ಬಳಿಯೇ ಹೇಳಿಕೊಂಡಿದ್ದರು.

ಆದರೆ ಅರಸು ಅವರು ಭೂಸುಧಾರಣೆಯ ನಂತರವೂ ಭೂರಹಿತರಾಗಿಯೇ ಇದ್ದವರಿಗಾಗಿ ಬೇರೆ ಯೋಜನೆಗಳನ್ನು ರೂಪಿಸಿದರು. ಭೂರಹಿತರಾಗಿ ಅವರು ಉಚಿತ ನಿವೇಶನಗಳನ್ನು ನೀಡುವ ಯೋಜನೆ ಜಾರಿಗೊಳಿಸಿದರು.

ಭೂರಹಿತರ ಸಮಸ್ಯೆ ಈ ರೀತಿ ಇನ್ನೊಂದು ಯೋಜನೆಯ ಮೂಲಕ ಸ್ವಲ್ಪ ಮಟ್ಟಿಗೆ ಪರಿಹಾರವಾದಂತಾಯಿತು.

ಹಾಗಾಗಿ ಆ ಕಾಲದಲ್ಲಿ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಇಂದಿರಾ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳ ಪೈಕಿ ಅರಸು ಅವರು ನಿಜಕ್ಕೂ ಬಡವರ ಮತ್ತು ಅವಕಾಶ ವಂಚಿತ ಸಮುದಾಯಗಳಿಗಾಗಿ ನೆರವಾಗುವ ಮಹತ್ವದ ಯೋಜನೆಗಳನ್ನು ರೂಪಿಸಿದರು.

ಇಂದಿರಾ ಗಾಂಧಿಯವರ ಗರೀಬೀ ಹಟಾವೋ ಬರೀ ಘೋಷಣೆಯಾಗಿ ಉಳಿಯಬಾರದು ಎಂದು ಕಟಿಬದ್ಧರಾಗಿ ಅವರು ಕೆಲಸ ಮಾಡಿದರು. ಆ ಕಾಲದ ಇತರ ರಾಜ್ಯಗಳ ಮುಖ್ಯಮಂತ್ರಿಗಳ ಬಗ್ಗೆ ಹೀಗೆ ಹೇಳಲು ಸಾಧ್ಯವಿಲ್ಲ.

ಉದಾಹರಣೆಗೆ ಒಮ್ಮೆ ಪಶ್ಚಿಮ ಬಂಗಾಲದಲ್ಲಿ ಓರ್ವ ಹಿರಿಯ ಐಎಎಸ್ ಅಧಿಕಾರಿ ನನ್ನ ಬಳಿ ಮಾತನಾಡುತ್ತಾ ಭೂಸುಧಾರಣೆಯ ಬಗ್ಗೆ ಅಸಹಜವಾದ ಅಂಕೆ ಸಂಖ್ಯೆಗಳನ್ನು ನೀಡುವಂತೆ ನಮಗೆ ಅಲ್ಲಿನ ಮುಖ್ಯಮಂತ್ರಿಯಾದ ಸಿದ್ದಾರ್ಥ್ ಸಂಕರ್ ರೇ ಒತ್ತಾಯಿಸುತ್ತಿದ್ದರು ಎನ್ನುವ ವಿಷಯ ತಿಳಿಸಿದ್ದರು. ಮುಖ್ಯಮಂತ್ರಿ ಹೇಳಿದಂತೆ ಅಲ್ಲಿನ ಅಧಿಕಾರಿಗಳು ಮಾಡುತಿದ್ದರು.

ಕರ್ನಾಟಕದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ಕರ್ನಾಟಕದಲ್ಲಿ ನಿಜಕ್ಕೂ ಭೂಸುಧಾರಣೆ ಜಾರಿಯಾಗುತಿತ್ತು. ಭೂಸುಧಾರಣೆಗಳ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಬಹುದು. ಭೂಸುಧಾರಣೆಯಿಂದಾಗಿ ಎಲ್ಲವೂ ಆಗಿ ಬಿಟ್ಟಿತು ಎಂದು ಹೇಳುವ ಹಾಗಿಲ್ಲ. ಆದರೂ, ಆಗಿನ ಕಾಲಕ್ಕೆ ಅದೊಂದು ಮಹತ್ವದ ಹೆಜ್ಜೆ ಆಗಿತ್ತು.

ದೇವರಾಜ ಅರಸು ಅವರ ಸುಧಾರಣೆಗಳು ಇಷ್ಟಕ್ಕೆ ಸೀಮಿತವಾಗಿರಲಿಲ್ಲ. ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಇನ್ನೊಂದು ಮಹತ್ವದ ಕಾರ್ಯಕ್ರಮವನ್ನು ಜಾರಿಗೆ ತಂದರು.

ಹಿಂದುಳಿದ ಸಂದಾಯಗಳಿಗೆ ಸೇರಿದವರ ಸಂಖ್ಯೆ ಉಳಿದ ಎಲ್ಲ ಸಮುದಾಯಗಳ ಸಂಖ್ಯೆಗಿಂತ ಹೆಚ್ಚಿದ್ದ ಕಾರಣ ಈ ಸಮುದಾಯಗಳ ಬೆಂಬಲ ರಾಜಕೀಯವಾಗಿಯೂ ಅರಸು ಅವರಿಗೆ ಬೇಕಿತ್ತು.

ಅವರು ಹಾವನೂರು ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿದರು. ಆಯೋಗ ತನ್ನ ವರದಿಯಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳನ್ನು ಮೀಸಲಾತಿಯ ವ್ಯಾಪ್ತಿಗಿಂತ ಹೊರಗಿಟ್ಟಿತು. ಈ ಶಿಫಾರಸ್ಸು ಜಾರಿಗೊಳಿಸಿದರೆ ಅದಕ್ಕೆ ರಾಜಕೀಯವಾಗಿ ದೊಡ್ಡ ಬೆಲೆ ತೆರಬೇಕಾದೀತು ಎನ್ನುವ ಸತ್ಯ ಅರಸು ಅವರಿಗೆ ತಿಳಿದಿತ್ತು.

ಅವರು ದಾರ್ಶನಿಕ ನಾಯಕ ಮಾತ್ರವಾಗಿರಲಿಲ್ಲ. ಅವರು ಒಬ್ಬ ಪ್ರಾಯೋಗಿಕ ರಾಜಕಾರಣಿಯೂ ಆಗಿದ್ದರು. ಹಾಗಾಗಿ ಒಕ್ಕಲಿಗ ಮತ್ತು ಲಿಂಗಾಯತರನ್ನು ಹಿಂದುಳಿದವರ ಪಟ್ಟಿಗೆ ಸೇರಿಸುವ ನಿರ್ಣಯ ಕೈಗೊಂಡರು.

ರಾಜಕಾರಣಕ್ಕೆ ಸಂಬಂಧಿಸಿದ ಕಾರಣಗಳಾಚೆಗೆ, ಈ ಎರಡೂ ಪ್ರಬಲ ಜಾತಿಗಳಲ್ಲಿ ಎಲ್ಲರೂ ಭೂಮಾಲೀಕರಾಗಿರಲಿಲ್ಲ, ಎರಡೂ ಸಮುದಾಯಗಳಲ್ಲೂ ದೊಡ್ಡ ಸಂಖ್ಯೆಯ ಬಡವರು ಇದ್ದರು ಎನ್ನುವ ಅವರ ಸಾಮಾಜಿಕ ಕಳಕಳಿಯೂ ಇಲ್ಲಿ ಕೆಲಸ ಮಾಡಿತ್ತು. ತನ್ನ ಬಾಲ್ಯ ಮತ್ತು ಯೌವನದಲ್ಲಿ ತನ್ನ ಹಲವಾರು ಓರಗೆಯವರು ಈ ಸಮುದಾಯಕ್ಕೆ ಸೇರಿದ್ದರೂ ಆರ್ಥಿಕವಾಗಿ ಅಶಕ್ತರಾಗಿದ್ದರು ಎಂದು ಅವರು ನನ್ನ ಬಳಿ ಒಮ್ಮೆ ಹೇಳಿಕೊಂಡಿದ್ದರು.

ಹಿಂದುಳಿದವರ ಜತೆ ಜತೆಗೆ ಪ್ರಬಲ ವರ್ಗಗಳಲ್ಲಿ ಇರುವ ಅಶಕ್ತರನ್ನು ಗುರುತಿಸಿ ಅವರಿಗೆ ನೆರವಾಗುವ ಅರಸು ಅವರ ತಂತ್ರ ಕೆಲಸ ಮಾಡಿತು. ಅವರಿಗೆ ಪ್ರಬಲ ವರ್ಗಗಳ ಬೆಂಬಲವೂ ನಿಧಾನವಾಗಿ ಹರಿದು ಬಂತು.

ಈ ಕಾರಣದಿಂದಲೇ 1978ರ ಚುನಾವಣೆಯಲ್ಲಿ, ಇಡೀ ದೇಶದೆಲ್ಲೆಡೆ ಕಾಂಗ್ರೆಸ್ ನೆಲ ಕಚ್ಚಿದಾಗಲೂ, ಕರ್ನಾಟಕದಲ್ಲಿ ಮಾತ್ರ ಅದು ಜಯಭೇರಿ ಗಳಿಸಲು ಸಾಧ್ಯವಾದದ್ದು. ಅರಸು ಎರಡನೆಯ ಬಾರಿಗೆ ಮುಖ್ಯಮಂತ್ರಿ ಆದದ್ದು.

ಈ ಹೊತ್ತಿಗೆ, ಅರಸು ಕರ್ನಾಟಕ ರಾಜಕಾರಣದ ಗತಿಯನ್ನೇ ಬದಲಿಸಿ ಬಿಟ್ಟಿದ್ದರು. ಮುಂದೆ ಎಂದೆಂದಿಗೂ ರಾಜ್ಯದಲ್ಲಿ ಪ್ರಬಲ ಜಾತಿಗಳ ಬೆಂಬಲದ ಜತೆಗೆ ಹಿಂದುಳಿದ ವರ್ಗ ಮತ್ತು ಇತರ ಅವಕಾಶ ವಂಚಿತ ಸಮುದಾಯಗಳ ಬೆಂಬಲ ಇಲ್ಲದೆ ಯಾವ ಪಕ್ಷವೂ ಚುನಾವಣೆ ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವಂತೆ ಅವರು ಕರ್ನಾಟಕದ ರಾಜಕಾರಣದ ಚಿತ್ರಣವನ್ನು ಬದಲಿಸಿ ಬಿಟ್ಟಿದ್ದರು.

1978 ರಲ್ಲಿ ಅರಸು ಮತ್ತೊಮ್ಮೆ ಗೆಲ್ಲುವುದಕ್ಕೆ ಇನ್ನೊಂದು ಕಾರಣವೂ ಇದೆ. 1975-77 ರ ನಡುವೆ ತುರ್ತು ಪರಿಸ್ಥಿತಿ ಇದ್ದಾಗ, ಉಳಿದೆಡೆ ನಡೆದಂತೆ ತುರ್ತು ಪರಿಸ್ಥಿತಿಯ ಅತಿರೇಕಗಳು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೆ ನಡೆಯದಂತೆ ಅರಸು ನೋಡಿಕೊಂಡಿದ್ದರು. ಬದಲಿಗೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರಿಗೆ ಸಿಕ್ಕ ಹೆಚ್ಚಿನ ಅಧಿಕಾರವನ್ನು ಅವರು ಭೂಸುಧಾರಣೆಯ ಕಟ್ಟುನಿಟ್ಟಿನ ಜಾರಿಗಾಗಿ ಬಳಸಿಕೊಂಡಿದ್ದರು.

ತನ್ನ ಅಧಿಕಾರವಧಿಯುದ್ದಕ್ಕೂ ಅರಸು ಅಂತರಗಳನ್ನು ತಗ್ಗಿಸಿ ಸಮುದಾಯಗಳನ್ನು ಬೆಸೆಯುವ ಕೆಲಸ ಮಾಡಿದ್ದರು. ಅದು ಜಾತಿಯ ಕಂದಕವಿರಲಿ, ವರ್ಗದ ಕಂದಕವಿರಲಿ ಅಥವಾ ಧರ್ಮ ಧರ್ಮಗಳ ನಡುವಣ ಕಂದಕವಿರಲಿ. ಅರಸು ರಾಜಕಾರಣ ಕಂದಕಗಳನ್ನು ಸೃಷ್ಟಿಸುವ ರಾಜಕಾರಣವಾಗಿರಲಿಲ್ಲ. ಸಮುದಾಯಗಳನ್ನು ಬೆಸೆಯುವ ರಾಜಕಾರಣವಾಗಿತ್ತು.

ಒಂದು ರೀತಿಯಲ್ಲಿ, ಅರಸು ಅವರು ಅಂದು ಮಾಡಿದ್ದನ್ನೇ, ಈಗಿನ ಕಾಂಗ್ರೆಸ್ ಸರಕಾರವೂ ಮಾಡುತ್ತಿದೆ. 2023 ರ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ಅಂತರಗಳನ್ನು ನಿವಾರಿಸುವ ಕೆಲಸ ಮಾಡುತ್ತಿದೆ.

ಸಿಎಂ ಸಿದ್ದರಾಮಯ್ಯ

ಅರಸು ರಾಜಕಾರಣ ವಿವಿಧ ವರ್ಗಗಳನ್ನು ರಾಜಕೀಯದಲ್ಲಿ ಬೆಸೆದಂತೆ, ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣವೂ ಇದೆ. ಅರಸು ಅವರು ಅಹಿಂದ ವರ್ಗಗಳ ಜತೆಗೆ ಬಲಿಷ್ಠ ಸಮುದಾಯಗಳ ಒಲವನ್ನೂ ಸಂಪಾದಿಸಿದ ಹಾಗೆ, ಈಗ ಕಾಂಗ್ರೆಸ್, ಡಿ.ಕೆ. ಶಿವಕುಮಾರ್ ಮೂಲಕ ಪ್ರಬಲ ವರ್ಗಗಳನ್ನು ಸೆಳೆದುಕೊಳ್ಳುವ ಕೆಲಸ ಮಾಡುತ್ತಿದೆ.

ಅರಸು ಅಂದು ಪ್ರಾರಂಭಿಸಿದ ಈ ಬೆಸೆಯುವ ರಾಜಕಾರಣ ಈಗ ಕರ್ನಾಟಕದ ರಾಜಕಾರಣದಲ್ಲಿ ಯಶಸ್ಸು ಗಳಿಸಲು ಬೇಕಿರುವ ಒಂದು ಅನಿವಾರ್ಯ ಅಂಶವಾಗಿದೆ.

ಅರಸು ನಗುಮೊಗದ ರಾಜಕಾರಣಿ. ಸಿಟ್ಟು, ಸಿಡುಕುಗಳಿಲ್ಲದೆ ಜನಸಮೂಹದ ಜತೆ ಬೆರೆಯುವ ಗುಣ ಅವರದ್ದಾಗಿತ್ತು. ಇದು ಅವರ ಜತೆಗಿನ ನನ್ನ ಸ್ವಂತ ಅನುಭವ ಕೂಡಾ. ನಾನು ಅವರನ್ನು ಭೇಟಿ ಮಾಡಿದಾಗಲೆಲ್ಲಾ ಅವರು ಏನೋ ಒಂದು ಚಟಾಕಿ ಹಾರಿಸಿ ನನ್ನನ್ನು ನಗಿಸುತ್ತಿದ್ದರು.

ನಾನು ಈ ದೇಶದಲ್ಲಿ ಹಲವಾರು ರಾಜಕಾರಣಿಗಳ ಜತೆ ಸಮಯ ಕಳೆದಿದ್ದೇನೆ. ಆದರೆ ಅವರ್ಯಾರೂ ನನ್ನನ್ನು ನಗಿಸುತ್ತಿರಲಿಲ್ಲ. ದೇವರಾಜ ಅರಸು ಅವರನ್ನು ನಾನು ಭೇಟಿಯಾದಾಗಲೆಲ್ಲಾ ನಾನು ಅವರಿಂದ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸುತಿದ್ದೆ. ಅದರ ಜತೆ ತುಂಬಾ ಮನರಂಜನೆಯನ್ನೂ ಪಡೆಯುತಿದ್ದೆ.

ಅರಸು ಜನರೊಂದಿಗೆ ವ್ಯವಹರಿಸುವಾಗಲೂ ಹೀಗೆ ಇರುತ್ತಿದ್ದರು. ಅವರು ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುವಾಗಲೂ ಇದೇ ರೀತಿಯಲ್ಲಿ ಜನರನ್ನು ರಂಜಿಸುತಿದ್ದರು ಎನ್ನುವುದನ್ನು ನಾನೇ ಹಲವಾರು ಸಭೆಗಳಲ್ಲಿ ನೋಡಿದ್ದೇನೆ. ಅಧಿಕಾರದ ಹಮ್ಮು, ಬಿಮ್ಮುಗಳನ್ನು ಬದಿಗಿಟ್ಟು ಜನರೊಂದಿಗೆ ಬೆರೆತು, ಅವರೊಂದಿಗೆ ನಕ್ಕು ನಲಿದು ಅವರ ಪ್ರೀತಿಯನ್ನು ಸಂಪಾದಿಸುವ ವಿಶಿಷ್ಟ ಗುಣ ಅವರದ್ದಾಗಿತ್ತು.

ಇದನ್ನು ಓದಿ ಸ್ಮರಣೆ | ಅರಸು ಅವರ ʼಸಾಂಸ್ಕೃತಿಕ ಒಗ್ಗೂಡುವಿಕೆʼ ಕಲ್ಪನೆಯ ಕೊಡುಗೆ ಅನನ್ಯ

ಅವರ ಈ ಗುಣದಿಂದಾಗಿ ಅವರು ಜನರಿಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಲೇ ಹೋಗುತಿದ್ದರು. ಮಾನವರ ನಡುವಿನ ಎಲ್ಲಾ ರೀತಿಯ ವ್ಯವಹಾರಗಳಲ್ಲೂ ಮಾನವೀಯತೆಯೇ ಪ್ರಧಾನವಾಗಿರಬೇಕೆಂಬ ಗಾಂಧೀಜಿಯವರ ತತ್ವವನ್ನು ದೇವರಾಜ ಅರಸು ಅವರು ಅನುಸರಿಸುತ್ತಿದ್ದರು. ಅರಸು ಅವರ ಕಾಲದಲ್ಲಿ ಕರ್ನಾಟಕದ ರಾಜ್ಯಪಾಲರಾಗಿದ್ದ ಒಬ್ಬರು ಕೂಡಾ ಈ ಅಂಶವನ್ನು ನನ್ನ ಜತೆ ಆ ನಂತರ ಒಮ್ಮೆ ಹೇಳಿಕೊಂಡಿದ್ದರು. ಅರಸು ಅವರ ಅಪಾರ ಜನಪ್ರಿಯತೆಗೆ ಅವರ ಈ ಗುಣವೂ ಕಾರಣ ಅಂತ ಆ ರಾಜ್ಯಪಾಲರು ಹೇಳಿದ್ದರು.

ಇದನ್ನು ಓದಿ ನನ್ನ ಹೋರಾಟಕ್ಕೆ ಮುಕ್ತಿ ತಂದುಕೊಟ್ಟವರು ಅರಸು ಎಂದ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ

ಈಗ ಅರಸು ನಮ್ಮ ಜತೆಗಿಲ್ಲ ಎನ್ನುವ ಭಾವನೆ ನಮ್ಮನ್ನು ಕಾಡುತ್ತದೆ. ಆದರೂ ನಾವು ಅವರನ್ನು ನೆನೆನೆನೆದು ಸಂಭ್ರಮಿಸುತ್ತೇವೆ. ಅವರ ಜನ್ಮದಿನವನ್ನು ನಾವು ಇಂದೂ ಆಚರಿಸುತ್ತಿದ್ದರೆ ಅದಕ್ಕೆ ಕಾರಣ ಅರಸು ಅವರಲ್ಲಿ ಮನೆ ಮಾಡಿದ್ದ ಉದಾತ್ತ ಮಾನವೀಯ ಗುಣಗಳು. ಆ ಗುಣಗಳಿಂದಾಗಿ ಅವರ ನೆನಪು ಸದಾ ನಮ್ಮೊಂದಿರುತ್ತದೆ”.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಟ್ ಕಾಯಿನ್ ಹಗರಣ​ | ಸೈಬರ್ ಕ್ರೈಂ ಠಾಣೆ ಇನ್ಸ್​ಪೆಕ್ಟರ್ ಚಂದ್ರಾಧರ್​ ಬಂಧನ

ಬಿಟ್‌ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ಸ್‌ಪೆಕ್ಟರ್ ಚಂದ್ರಾಧರ್ ಎಂಬುವವರನ್ನು ಸಿಐಡಿ ಪೊಲೀಸರು...

ಹಿಂದುತ್ವ | ಭಾರತೀಯ ಸಮಾಜವನ್ನು ಒಳಗಿನಿಂದಲೇ ವಂಚಿಸುವ ‘ಗೋಮುಖ ವ್ಯಾಘ್ರ’

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಭಾರತದ ಅತಿದೊಡ್ಡ ರಾಜಕೀಯ ಶಕ್ತಿಯಾಗಿದೆ. ಆದರೆ,...

ಸಂತ್ರಸ್ತೆ ಅಪಹರಣ ಪ್ರಕರಣ | ಮೇ 31ಕ್ಕೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ತೀರ್ಪು

ಕೆ ಆರ್‌ ನಗರ ಮಹಿಳೆ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ...