ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗೆ ಕಳೆದ ಹತ್ತು ವರ್ಷಗಳಿಂದ ಧಕ್ಕೆ ಉಂಟಾಗುತ್ತಿದ್ದು, ಪರಿಷತ್ತಿನೊಳಗೆ ಪಕ್ಷ ರಾಜಕಾರಣ ಪ್ರವೇಶಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ನಗರದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಅಧ್ಯಕ್ಷ ಮಹೇಶ್ ಜೋಶಿ ಅವರ ಅವಧಿಯಲ್ಲಿ ಪರಿಷತ್ತಿನ ಹೆಬ್ಬಾಗಿಲಿನಲ್ಲಿದ್ದ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಮಾನವೀಯ ಸಂದೇಶ ಸಾರುವ ಫಲಕವನ್ನು ಕಿತ್ತುಹಾಕಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಸ್ಥಳಾಂತರಿಸಿದ್ದು ಹಾಗೂ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಾಯಿಸಲು ಪ್ರಯತ್ನಿಸಿದ್ದು ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಮಾಡಿದ ದ್ರೋಹವಲ್ಲವೇ? ಎಂದು ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ರಾಜಕೀಯ ಪಕ್ಷದ ಹಿಡಿತಕ್ಕೆ ಒಳಗಾಗಬಾರದು. ಕಳೆದ ಚುನಾವಣೆಯಲ್ಲಿ ಪಕ್ಷವೊಂದರ ಪ್ರವೇಶದಿಂದ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆಯಾಗಿದೆ. ಪಕ್ಷಗಳ ಕೊಳಕು ರಾಜಕಾರಣಕ್ಕೆ ಪರಿಷತ್ತಿನಲ್ಲಿ ಅವಕಾಶ ನೀಡಬಾರದು. ಪರಿಷತ್ತು ರಾಜಕೀಯ ವೇದಿಕೆಯಲ್ಲ; ಅದು ಕನ್ನಡಿಗರ, ಜನಸಾಮಾನ್ಯರ ವೇದಿಕೆಯಾಗಿದೆ.ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಜನಪರ ಆಶಯಗಳ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ಸರ್ಕಾರದ ಪ್ರಯತ್ನ ಸರಿಯಲ್ಲ. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಆಶಯವನ್ನು ಜಾರಿಗೊಳಿಸಿದವರು ಯಾರು ಎಂಬುದನ್ನು ರಾಜ್ಯ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬದಲು ಖಾಸಗೀಕರಣದತ್ತ ಸಾಗುವುದು ಶಿಕ್ಷಣದ ಹಕ್ಕಿಗೆ ಧಕ್ಕೆ ಉಂಟುಮಾಡಲಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಕಳಂಕಿತ ಅಧಿಕಾರಿಗಳಿಗೆ ವೇದಿಕೆಯಾಗಬಾರದು.ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸುವ ನಿವೃತ್ತ ಅಧಿಕಾರಿಗಳು ತಮ್ಮ ಇಡೀ ಆಡಳಿತಾವಧಿಯ ಕಾರ್ಯವೈಖರಿ ಮತ್ತು ಪಾರದರ್ಶಕತೆಯ ವಿವರಗಳನ್ನು ಬಹಿರಂಗಪಡಿಸಬೇಕು. ಸಾರ್ವಜನಿಕ ಬದುಕಿನಲ್ಲಿ ಹೊಣೆಗಾರಿಕೆ ಮತ್ತು ನೈತಿಕತೆ ಮುಖ್ಯವಾಗಿದ್ದು, ಪರಿಷತ್ತಿನ ಘನತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡುವವರು ಅದರ ನೇತೃತ್ವ ವಹಿಸಬೇಕು ಎಂದು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯ, ಸ್ವಾಯತ್ತತೆ ಮತ್ತು ಜನಪರ ಸ್ವರೂಪವನ್ನು ಉಳಿಸಿಕೊಳ್ಳಲು ಪಕ್ಷ ರಾಜಕಾರಣದಿಂದ ಅದನ್ನು ಮುಕ್ತವಾಗಿಡುವುದು ಅತ್ಯಗತ್ಯ ಎಂಬುದು ಅವರ ಮಾತಿನ ಸಾರವಾಗಿತ್ತು.




