“ಈಗಾಗಲೇ ಹಾಲಿನ ಬೆಲೆ ಏರಿಕೆ, ಅಕ್ಕಿ ಬೆಳೆ ಮತ್ತಿತರ ಜೀವನಾಗತ್ಯ ಸಾಮಗ್ರಿಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದ್ದು, ದುಡಿದು ಬದುಕುವ ಜನ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಹೈನುಗಾರಿಕೆಯ ರೈತರ ಕಷ್ಟಕ್ಕೆ ಸಬ್ಸಿಡಿ ಹೆಚ್ಚಿಸುವ ಮೂಲಕ ನೆರವಾಗುವ ಬದಲು, ಹಾಲಿನ ದರ ಹೆಚ್ಚಿಸಿ ಗ್ರಾಹಕರು ಮತ್ತು ಉತ್ಪಾದಕರ ಮಧ್ಯೆ ವೈರತ್ವ ತರುವ ಕೆಲಸ ಮಾಡಲಾಗಿದೆ. ಜೊತೆಗೆ ಸಾರಿಗೆ ಬಸ್ ದರ ಹೆಚ್ಚಳ ಮಾಡಿದ್ದು ಖಂಡನೀಯ” ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ್ ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಗಾಯದ ಮೇಲೆ ಬರೆ ಎಳೆದು ಉಪ್ಪು ಸವರಿದಂತೆ ಈಗ ಸಾರಿಗೆ ದರ ಹೆಚ್ಚಾಗಲಿದ್ದು ಕೆ.ಎಸ್.ಆರ್.ಟಿ.ಸಿ. ದರದಲ್ಲಿ ಕನಿಷ್ಟ ರೂ.9 ರಂತೆ ಇಂದು ಮಧ್ಯ ರಾತ್ರಿಯಿಂದ ಹೆಚ್ಚಳವಾಗಲಿದೆ” ಎಂದು ಸಾರಿಗೆ ಸಚಿವರು ಹೇಳಿದ್ದಾರೆ.
“ದೂರದ ಊರುಗಳಿಗೆ ಇನ್ನಷ್ಟು ಹೆಚ್ಚಳವಾಗುತ್ತದೆ. ಜಿಲ್ಲೆಯಿಂದ ನಗರಗಳಿಗೆ ನಗರಗಳಿಂದ ಗ್ರಾಮಗಳಿಗೆ ಹಾಗೂ ಬೆಂಗಳೂರು ನಗರದಲ್ಲಿ ಸಂಚರಿಸುವ ಬಿ.ಎಂ.ಟಿ.ಸಿ. ದರವನ್ನು ಕನಿಷ್ಟ ದರ ರೂ.6 ರಿಂದ 10ಕ್ಕೆ ಹೆಚ್ಚಿಸಿದ್ದು, ಕೆಲವು ಹಂತಗಳಲ್ಲಿ ಗರಿಷ್ಟ ದರ 10-12 ರೂ. ಜಾಸ್ತಿಯಾಗಿದೆ. ಮಹಿಳೆಯರಿಗೆ ರಿಯಾಯಿತಿ ಇಲ್ಲದ ವಜ್ರ ಬಸ್ ದರವನ್ನು ಸಹ ಹೆಚ್ಚಳ ಮಾಡಲಾಗಿದೆ” ಎಂದು ಅಸಮಾಧಾನ ವ್ತಕ್ತಪಡಿಸಿದ್ದಾರೆ.
“ರಾಜ್ಯವು ಭೀಕರ ಬರ ಎದುರಿಸುತ್ತಿದ್ದು ಅದರಿಂದ ಜನರು ಈಗಾಗಲೇ ತತ್ತರಿಸುತ್ತಿದ್ದಾರೆ. ಇದರ ಜೊತೆಗೆ ಸರಕಾರವೇ ಸಾರಿಗೆ ದರಗಳನ್ನು ಏರಿಸಿ ನಡು ಮುರಿಯುವ ಕೆಲಸಕ್ಕೆ ಕೈಹಾಕಿದೆ. ಇದು ಜನರನ್ನು ಸುಲಿಗೆ ಮಾಡುವ ಕ್ರಮವಾಗಿದ್ದು ರಾಜ್ಯ ಕಾಂಗ್ರೆಸ್ ಸರಕಾರ ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಮೂರು ಜನ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯ ಶಿಫಾರಸು ಇದಾಗಿದ್ದು ಈ ಸಮಿತಿ ದಂತ ಗೋಪುರದ ಒಳಗೆ ಕುಳಿತು ಯೋಚಿಸುವ ವಲಯಕ್ಕೆ ಸೇರಿದವರೇ ಆಗಿದ್ದಾರೆ. ಇದರಿಂದ ಬಡವರು ದುಡಿದು ಬದುಕುವ ಜನರ ಬದುಕಿನ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂಬುದು ಸಾಬೀತಾಗಿದೆ” ಎಂದು ಹೇಳಿದ್ದಾರೆ.
“ನಿಗಮಗಳಲ್ಲಿ ನಡೆಯುವ ಭ್ರಷ್ಟಾಚಾರ, ಸೋರಿಕೆ, ಅವ್ಯವಹಾರಗಳನ್ನು ತಡೆಯುವಂತಹ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳಬೇಕು. ಅದು ಬಿಟ್ಟು ಹೀಗೆ ಜನರ ಮೇಲೆ ಹೊರಿಸುವ ಹೊರೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ರಾಜ್ಯ ಕಾಂಗ್ರೆಸ್ ಸರಕಾರ ಈ ಯದ್ವಾತದ್ವಾ ದರ ಪರಿಷ್ಕರಣೆ ಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.




