ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ ಹಾಗೂ ಸಮಾಜಮುಖಿ ವ್ಯಕ್ತಿತ್ವ ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಮಹತ್ವದ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಎನ್‌ಎಸ್‌ಎಸ್ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸಿರುವ ಡಾ. ಎಂ.ಬಿ. ದಿಲ್‌ಶಾದ್ ಅವರ ಸೇವೆ ಶ್ಲಾಘನೀಯ ಎಂದು ಅಂಜುಮನ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಬಿ. ನಾಲತವಾಡ ಹೇಳಿದರು.
ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಭವನದಲ್ಲಿ ಶುಕ್ರವಾರ ನಡೆದ ಎನ್‌ಎಸ್‌ಎಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಗಾಂಧೀ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ಎನ್‌ಎಸ್‌ಎಸ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ವಿದ್ಯಾರ್ಥಿಗಳಿಗಿಂತ ವಿಭಿನ್ನವಾದ ಸಾಮಾಜಿಕ ಅರಿವು ಮತ್ತು ನಾಯಕತ್ವದ ಗುಣಗಳು ರೂಪುಗೊಳ್ಳುತ್ತವೆ. ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮೊಳಗಿನ ಸಾಮರ್ಥ್ಯವನ್ನು ಗುರುತಿಸಿಕೊಂಡು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆಯಲು ಅಗತ್ಯವಾದ ಆತ್ಮವಿಶ್ವಾಸ, ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ರೂಪಿಸುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸುವ ವೇದಿಕೆಯಾಗಿ ಎನ್‌ಎಸ್‌ಎಸ್ ಕಾರ್ಯನಿರ್ವಹಿಸುತ್ತಿದೆ ಎಂದು ನಾಲತವಾಡ ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಸಲೀಮಾ ಕೋಳೋರು, ಪ್ರೊ. ನಾಗಾರ್ಜುನ ದೊಡಮನಿ, ಡಾ. ಸಯ್ಯದ್ ತಾಜುನೀಸಾ ಹಾಗೂ ಪ್ರೊ. ನಾಗರಾಜ ಕನಕನೆ ವೇದಿಕೆಯಲ್ಲಿದ್ದರು.
ಡಾ. ಸುಜಾತ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಎಸ್.ಜಿ. ಪೂಜಾರ ವಂದಿಸಿದರು.




