ರೈತರಿಗೆ ನ್ಯಾಯ ದೊರೆಯುವವರೆಗೆ ಸಕ್ಕರೆ ಸೇವಿಸುವುದಿಲ್ಲ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ ಶ್ರೀಗಳು ಸಂಕಲ್ಪ ಮಾಡಿದ್ದಾರೆ. ರೈತರ ಹೋರಾಟಕ್ಕೆ ನೇರ ಬೆಂಬಲ ಘೋಷಿಸಿರುವ ಅವರು, ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ರೈತರು ಬಿಸಿಲಿನಲ್ಲಿ ರಸ್ತೆಯ ಮೇಲೆ ಕುಳಿತು, ರಾತ್ರಿ ಅಲ್ಲಿಯೇ ಮಲಗಿ ಹೋರಾಟ ನಡೆಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ ಎಂದರು.
ಮಠದ ಜಮೀನಿನಲ್ಲಿ ಸುಮಾರು 15 ವರ್ಷ ಕಬ್ಬು ಬೆಳೆದ ಅನುಭವವಿರುವುದರಿಂದ ಕಬ್ಬು ಬೆಳೆಗಾರರ ಸಂಕಷ್ಟ ತಮಗೆ ತಿಳಿದಿದೆ ಎಂದು ಹೇಳಿದ ಶ್ರೀಗಳು, ರೈತರ ಸಮಸ್ಯೆಗಳಿಗೆ ಹೊಸ ಸಮಿತಿಗಳನ್ನು ರಚಿಸುವ ಬದಲು ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತಂದು ನ್ಯಾಯಯುತ ಬೆಲೆ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು. ಮಠಾಧೀಶರು, ಸಾಹಿತಿಗಳು, ಕಲಾವಿದರು ಮತ್ತು ಮಾಧ್ಯಮಗಳು ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.
ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ರೈತರು ಆತ್ಮಹತ್ಯೆಗೆ ಮುಂದಾಗದೆ ಧೈರ್ಯದಿಂದ ಹೋರಾಟ ಮುಂದುವರಿಸಬೇಕು ಎಂದು ಮನವಿ ಮಾಡಿದರು. ರೈತರ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ, ಅವರ ಸಮಸ್ಯೆಗಳಿಗೆ ಸರ್ಕಾರಗಳು ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.




