ನಗರ ಸೇರಿದಂತೆ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಗುರುವಾರ ನಸುಕಿನ ವೇಳೆ ಕೆಲ ಸೆಕೆಂಡುಗಳ ಕಾಲ ಭೂಕಂಪದ ಅನುಭವವಾಗಿದ್ದು, ಆತಂಕಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.
ನಸುಕಿನ ಸುಮಾರು 1.30ರ ವೇಳೆಗೆ ಏಕಾಏಕಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಹಲವು ಮನೆಗಳ ಬಾಗಿಲು, ಕಿಟಕಿಗಳು ಗಡಗಡ ಶಬ್ದ ಮಾಡಿವೆ. ಮೇಲ್ಭಾಗದಲ್ಲಿ ಇಟ್ಟಿದ್ದ ಕೆಲವು ವಸ್ತುಗಳು ಕೆಳಗೆ ಬಿದ್ದ ಪರಿಣಾಮ ಜನರು ಭೂಕಂಪ ಸಂಭವಿಸಿರುವುದನ್ನು ಅರಿತು ಆತಂಕಕ್ಕೊಳಗಾದರು.
ಹರಿಕೃಷ್ಣ ನಗರ, ಮಹಾವೀರ ನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳ ನಿವಾಸಿಗಳು 4ರಿಂದ 5 ಸೆಕೆಂಡುಗಳ ಕಾಲ ಕಂಪನ ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆ ಕೇಂದ್ರವಾಗಿಸಿಕೊಂಡು ಭೂಕಂಪ ಸಂಭವಿಸಿದ್ದು, ಅದರ ಕಂಪನದ ಪರಿಣಾಮ ಕಲಬುರಗಿಯಲ್ಲೂ ಅನುಭವವಾಗಿದೆ ಎನ್ನಲಾಗಿದೆ. ಹಿಂಗೋಲಿಯಲ್ಲಿ ಸುಮಾರು 3.6 ತೀವ್ರತೆಯ ಭೂಕಂಪ 10 ಕಿ.ಮೀ. ಆಳದಲ್ಲಿ ದಾಖಲಾಗಿದ್ದು, ರಾತ್ರಿ ವಿವಿಧ ಸಮಯಗಳಲ್ಲಿ ಸಣ್ಣ ಪ್ರಮಾಣದ ಕಂಪನಗಳು ಸಂಭವಿಸಿವೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಕಲಬುರಗಿ | ವಸತಿ ನಿಲಯದಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಭೂಕಂಪದ ಕುರಿತು ಸಂಬಂಧಿತ ಇಲಾಖೆಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.





