“ಸಭಾಧ್ಯಕ್ಷರ ಸ್ವಂತ ತವರೂರಲ್ಲೇ ಇಂದು ಪದವಿ ಕಾಲೇಜು ಇಲ್ಲದಿರುವುದು ದುರಂತ. ಈ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ಕೊಡಬೇಕು. ಒತ್ತು ಕೊಡದಿದ್ದರೆ ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಳುತ್ತದೆ” ಎಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಡಣದದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ 6ನೇ ಗದಗ ಜಿಲ್ಲಾ ಸಮ್ಮೇಳನ ಎರಡನೇ ದಿನದಂದು ವಿದ್ಯಾರ್ಥಿಗಳ ಮೆರವಣಿಗೆ ನಗರದ ಪುರಸಭೆಯಿಂದ ಪ್ರಾರಂಭಗೊಂಡು ಕೆ ಕೆ ಸರ್ಕಲ್ ನಲ್ಲಿ ಸಮ್ಮೀಲನಗೊಂಡು ಬೃಹತ್ ಬಹಿರಂಗ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
“ಜಿಲ್ಲೆಯ ಉಸ್ತುವಾರಿ ಸಚಿವರು, ಉನ್ನತ ಶಿಕ್ಷಣ ಸಚಿವರು ಬಸವರಾಜ್ ರಾಯರೆಡ್ಡಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದು, ತಮ್ಮ ಕ್ಷೇತ್ರದಲ್ಲಿ ಹೇಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಪಿ ಜಿ ಸೆಂಟರ್ ಗಳನ್ನು ಆರಂಬಿಸಿದ್ದರೋ ಅದೇ ರೀತಿಯಲ್ಲಿ ಗಜೇಂದ್ರಗಡ, ಮತ್ತು ಗದಗ ಜಿಲ್ಲೆಗೆ ಸರ್ಕಾರಿ ಪಿಜಿ ಸೆಂಟರ್, ಸರ್ಕಾರಿ ನರ್ಸಿಂಗ್ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜ್ ಗಳು, ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಬೇಕು” ಎಂದು ಒತ್ತಾಯಿಸಿದರು.
“ಇಂದು ಸಮಾನ ಗುಣಮಟ್ಟದ ಶಿಕ್ಷಣ ಬಡಜನರಿಗೆ ಕನಸಾಗಿಯೇ ಉಳಿದಿದ್ದು, ಶಿಕ್ಷಣದ ಖಾಸಗೀಕರಣ, ವ್ಯಾಪಾರಿಕರಣ ತೀವ್ರಗೊಂಡಿದೆ. ಕೋಚಿಂಗ್ ಮಾಫಿಯಾ ನಾಯಿ ಕೊಡೆಗಳಂತೆ ಎದ್ದು ನಿಂತಿವೆ. ಬಡವರ ದುಡ್ಡನ್ನು ಲೂಟಿ ಮಾಡಲೆಂದೆ ಈ ಕೋಚಿಂಗ್ ಸೆಂಟರ್ ಗಳು ಕೆಲಸ ಮಾಡುತ್ತಿವೆ. ಸರ್ಕಾರಗಳು ತನಗೆ ಬೆಕಾದಂತೆ ಕೋಚಿಂಗ್ ಮಾಫಿಯಾಗಳಿಗೆ ಅವಕಾಶ ಕೊಟ್ಟು ಸರ್ಕಾರಿ ಶಾಲೆಗಳನ್ನ ಮುಚ್ಚುತ್ತಿದೆ. ಇದರ ವಿರುದ್ಧ ವಿದ್ಯಾರ್ಥಿ ಸಮುದಾಯ ಪ್ರತಿಭಟನೆಯನ್ನು ಮಾಡಬೇಕಾದ ಅನಿವಾರ್ಯತೆ ಇದೆ” ಎಂದರು.
“ವಿದ್ಯಾರ್ಥಿಗಳ ಮೇಲೆ ನಿರಂತರ ದಾಳಿ ದಬ್ಬಾಳಿಕೆಗಳು ನಡೆಯುತ್ತಿದೆ, ಉನ್ನತ ಶಿಕ್ಷಣ ಕಲಿಯುತ್ತಿರುವವರ ಮೇಲೆ ಅನ್ಯಾಯ ಮಾಡುತ್ತಿದೆ , ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನಗಳನ್ನು ನಡೆಸುವ ಕ್ರಿಯೆಗಳು ಹೆಚ್ಚಾಗುತ್ತಿವೆ ಇದರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳು ರಕ್ಷಣೆ ಮಾಡಬೇಕೆಂದು ಈ ಸಮ್ಮೇಳನ ಒತ್ತಾಯಿಸುತ್ತದೆ” ಎಂದರು.
“ಜಿಲ್ಲೆಯ ಸಮಗ್ರ ಅಭಿವೃದ್ಧಿ ಶಿಕ್ಷಣದ ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳನ್ನು, ಗಟಾರಗಳನ್ನು ಸ್ವಚ್ಛತೆ ಮಾಡುವುದು ಅಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಎಂದರೆ ನೀರಾವರಿ ಯೋಜನೆಗಳನ್ನು ಜಾರಿ ಮಾಡಬೇಕು. ಕೃಷ್ಣ ಬಿ ಸ್ಕೀಮ್ ಆಗಿರಬಹುದು, ಎತ್ತಿನಹೊಳೆ ನೀರಾವರಿ, ಮಹದಾಯಿ ನೀರಾವರಿ ಯೋಜನೆ ಇರಬಹುದು. ಇವುಗಳನ್ನ ಜಾರಿ ಮಾಡಿದರೆ ಇಲ್ಲಿಯ ರೈತರಿಗೆ ಅನುಕೂಲವಾಗಲಿದೆ” ಎಂದು ಹೇಳಿದರು.
“ಗಜೇಂದ್ರಗಡ ನಗರಕ್ಕೆ ಒಂದು ಸ್ನಾತಕೋತ್ತರ ಪದವಿ ಕೇಂದ್ರವನ್ನ ಪ್ರಾರಂಭಿಸಬೇಕೆಂಬ ಮುಖ್ಯ ಬೇಡಿಕೆ ಅಡಿಯಲ್ಲಿ ಒಂದು ನಿರ್ಣಯವನ್ನು ಈ ಸಮ್ಮೇಳನವು ತೆಗೆದುಕೊಂಡು ಹೋರಾಟವನ್ನು ರೂಪಿಸಲು ತೀರ್ಮಾನಿಸಿದ್ದು, ಗಜೇಂದ್ರಗಡ ನಗರಕ್ಕೆ ಸ್ನಾತಕೋತ್ತರ ಪದವಿ ಕೇಂದ್ರ ಆಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂಬ ನಿರ್ಣಯವನ್ನು ಈ ಸಮ್ಮೇಳನ ತೆಗೆದುಕೊಂಡಿದ್ದು” ಎಂದು ಹೇಳಿದರು.
ನಂತರದಲ್ಲಿ ಎಸ್ಎಫ್ಐ ಮಾಜಿ ಮುಖಂಡರು ವಕೀಲರು ಎಂ ಎಸ್ ಹಡಪದ ಅವರು ಮಾತನಾಡಿ, “ದೇಶ, ರಾಜ್ಯದಲ್ಲಿ ರೈತ ವಿರೋಧಿ, ವಿದ್ಯಾರ್ಥಿ ವಿರೋಧಿ ಸರ್ಕಾರಗಳು ಆಡಳಿತ ನಡೆಸುತ್ತಿದ್ದು, ರೈತ ವಿರೋಧಿ, ವಿದ್ಯಾರ್ಥಿ ವಿರೋಧಿ ಕಾಯ್ದೆಗಳು ಜಾರಿ ಮಾಡುತ್ತಿವೆ. ಇದರ ವಿರುದ್ಧ ವಿದ್ಯಾರ್ಥಿ ಸಮುದಾಯ ಸಂಘಟಿತವಾಗಬೇಕು. ಪ್ರಜಾಪ್ರಭುತ್ವ ರಕ್ಷಣೆ ಆಗಬೇಕೆಂದರೆ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ನ್ಯಾಯ ಪಡೆಯುವುದು ಅಗತ್ಯವಾಗಿದೆ” ಎಂದು ಹೇಳಿದರು.
ಕೃಷಿ ಕೂಲಿಕಾರ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಬಾಲು ರಾಠೋಡ ಮಾತನಾಡಿ, “ವಿದ್ಯಾರ್ಥಿಗಳು ಕೃಷಿ ಕೂಲಿಕಾರರು ಕಾರ್ಮಿಕರು ರೈತರು ಮಹಿಳೆಯರು ಐಕ್ಯಚಳುವಳಿಯ ಮೂಲಕವೇ ತಮ್ಮ ಹಕ್ಕುಗಳನ್ನ ರಕ್ಷಿಸಿಕೊಳ್ಳಲು ಸಾಧ್ಯ ಹಾಗಾಗಿ ಎಲ್ಲ ವರ್ಗಗಳು ಶೋಷಣೆ ವಿರುದ್ಧದ ಹೋರಾಟವನ್ನು ಬಲಗೊಳಿಸುತ್ತಾ ಐಕ್ಯತೆಯನ್ನು ಗಟ್ಟಿಗೊಳಿಸಿಕೊಂಡು ದೇಶದ ಅಭಿವೃದ್ಧಿಗೆ ಶೋಷಣೆ ಮುಕ್ತ ಸಮಾಜಕ್ಕಾಗಿ ಶ್ರಮಿಸಬೇಕಿದೆ” ಎಂದರು.
ನಂತರ ಎಸ್ಎಫ್ಐ ಮಾಜಿ ಜಿಲ್ಲಾಧ್ಯಕ್ಷರು ಪೀರು ರಾಠೋಡ ಮಾತನಾಡಿ ವಿದ್ಯಾರ್ಥಿಗಳು ದೇಶದ ಭವಿಷ್ಯ, ಆಸ್ತಿ ಅನ್ನುವುದು ವಾಸ್ತವ ಸತ್ಯ. ಭವಿಷ್ಯ ವಿದ್ಯಾರ್ಥಿಗಳ ಮೇಲೆ ಅವರ ಹಕ್ಕುಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದರ್ಪ ತೊರಿಸುತ್ತಿದೆ. ನೀಟ್ ಪರಿಕ್ಷೆ ಅವಾಂತರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳೆ ಕೇಂದ್ರ ಸರ್ಕಾರ ತನ್ನ ಅಧಿಕಾರದ ದರ್ಪ ತೋರಿಸಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದೆ ಆದ್ದರಿಂದ ವಿದ್ಯಾರ್ಥಿಗಳು ಪಾಲಕರು, ಯುವಕರು, ನಾವೆಲ್ಲರೂ ಕೂಡ ಜೋತೆಯಾಗಿ ಅನ್ಯಾಯದ ವಿರುದ್ಧ ನಿಲ್ಲಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಎಫ್.ಐ ಗದಗ ಜಿಲ್ಲಾಧ್ಯಕ್ಷರ ಚಂದ್ರು ರಾಠೋಡ ಮಾತನಾಡಿ, ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ ಸಂವಿಧಾನದ ಆಶಯ, ವ್ಯವಸ್ಥಿತವಾಗಿ ಕೇಂದ್ರ ಸರ್ಕಾರ ಶಿಕ್ಷಣವನ್ನು ಕೇಂದ್ರಿಕರಣ, ಕೇಸರಿಕರಣದ ಮಾಡಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಆದ್ದರಿಂದ ಅವುಗಳನ್ನು ಉಳಿಸುವ ಜವಾಬ್ದಾರಿ ಈ ದೇಶದ ವಿದ್ಯಾರ್ಥಿ ಸಮುದಾಯಕ್ಕೆ ಇದೆ” ಎಂದು ಹೇಳಿದರು.
ಎಸ್ಎಫ್ಐ ಸಮ್ಮೇಳನದ ಬಹಿರಂಗ ಸಭೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಮುಖಂಡರು ಹೋರಾಟಗಾರರು ಭಾಗಿ ಆಗಿದ್ದರು.




