ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಕ್ರೋ, ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್‌ಪ್ರೈಸಸ್ (ಎನ್ಐ-ಎಂಎಸ್ಎಂಇ)ನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ತಾಲೂಕಿನ ಕಲ್ಲಂಡೂರು ಗ್ರಾಮದ ಡಾ. ಕೆ. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ.
ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಾ. ಕೆ. ನಾಗರಾಜ್ ಅವರು ಕಲ್ಲಂಡೂರು ಗ್ರಾಮದಲ್ಲಿ ಪ್ಲಾಟರಿ ಕ್ಲಸ್ಟರ್ ಮೂಲಕ ಉದ್ಯಮಶೀಲರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಉದ್ಯಮ ಚಟುವಟಿಕೆಗಳನ್ನು ಬೆಳೆಸುವುದರ ಜೊತೆಗೆ ಯುವಕರು ಹಾಗೂ ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಗೆ ಸಂಬಂಧಿಸಿದ ನೀತಿ ರೂಪಿಸುವಿಕೆ, ಉದ್ಯಮಿಗಳಿಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗವರ್ನಿಂಗ್ ಕೌನ್ಸಿಲ್‌ನಲ್ಲಿ ಡಾ. ನಾಗರಾಜ್ ಅವರ ಅನುಭವ ಸಹಕಾರಿಯಾಗಲಿದೆ.
ಇದನ್ನು ಓದಿದ್ದೀರಾ..?ಕೋಲಾರ | ವೇಮಗಲ್‌ನಲ್ಲಿ ಕ್ರೋನ್ಸ್ ಉತ್ಪಾದನಾ ಘಟಕಕ್ಕೆ ಚಾಲನೆ
ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಯ ಗವರ್ನಿಂಗ್ ಕೌನ್ಸಿಲ್‌ಗೆ ಕೋಲಾರ ತಾಲೂಕಿನ ಗ್ರಾಮೀಣ ಭಾಗದ ಉದ್ಯಮಿಯನ್ನು ಸದಸ್ಯರಾಗಿ ನೇಮಕ ಮಾಡಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.




