ಗದಗ ಪಟ್ಟಣದಲ್ಲಿ ಕಳೆದ ೨೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರೌಢ ಶಾಲಾ ಹಾಲಿ ಮತ್ತು ನಿವೃತ್ತ ನೌಕರರ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿಪಥದಲ್ಲಿ ದಾಪುಗಾಲು ಹಾಕುತ್ತಿದೆ. ಸಂಸ್ಥೆಯ ನಿವೇಶನದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡುವುದು ನಮ್ಮ ಮುಂದಿರುವ ಪ್ರಥಮ ಆದ್ಯತೆಯಾಗಿದೆ” ಎಂದು ಸಹಕಾರ ಸಂಘದ ವಾರ್ಷಿಕ ಸರ್ವ ಸಭೆಯಲ್ಲಿ ಅಧ್ಯಕ್ಷರು ಬಿ.ಎಫ್. ಪೂಜಾರ ತಿಳಿಸಿದರು.
ಗದಗ ಪಟ್ಟಣದ ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯ ಬಸವರಾಜ ಹೊರಟ್ಟಿ ಸಭಾಭವನದಲ್ಲಿ ಸಹಕಾರಿ ಸಂಘದ ೨೧ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸಂಘವು ೦೫ ಕೋಟಿ ೧೫ ಲಕ್ಷ ರೂಪಾಯಿ ಟರ್ನಓವರ್ ಬಂಡವಾಳ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ೦೨ ಕೋಟಿ ೧೪ ಲಕ್ಷ ರೂಪಾಯಿಗಳ ಸಾಲವನ್ನು ವಿತರಣೆ ಮಾಡಲಾಗಿದೆ. ಒಟ್ಟು ೨೨ ಲಕ್ಷ ೭೮ ಸಾವಿರ ರೂ.ಗಳ ನಿವ್ಹಳ ಲಾಭ ಗಳಿಸಿದೆ. ಹಾಗೂ ಪ್ರತಿಯೊಬ್ಬ ಶೇರುದಾರರಿಗೆ ಶೇ. ೮.೫ ಲಾಭಾಂಶ ವಿತರಿಸಲಾಗಿದೆ. ಸಂಘದಲ್ಲಿ ಯಾವುದೇ ಕಟ್ ಬಾಕಿದಾರರು ಇರುವುದಿಲ್ಲ” ಎಂದು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಮೂರು ಪ್ರಮುಖ ವಿಷಯಗಳನ್ನು ಚರ್ಚಿಸಿ ಒಮ್ಮತದಿಂದ ಠರಾವು ಸ್ವೀಕರಿಸಲಾಯಿತು. ಸ್ವಂತ ಕಟ್ಟಡ ನಿರ್ಮಾಣದ ಅವಶ್ಯಕತೆಯನ್ನು ಗಮನಿಸಿ ಶೇರುದಾರರು ತಮ್ಮ ೦೬ ತಿಂಗಳ ಶೇರನ್ನು ಸಂಘದ ಕಟ್ಟಡ ಖಾತೆಗೆ ವರ್ಗಾಹಿಸಲು ಸಭೆ ಒಕ್ಕೊರಲ ನಿರ್ಣಯವನ್ನು ಮಾಡಿತು. ಸಾಲದ ಮೊತ್ತವನ್ನು ೭ ಲಕ್ಷದಿಂದ ೮ ಲಕ್ಷಕ್ಕೆ ಏರಿಕೆ ಮಾಡುವುದು, ಶೇರು ಹಣವನ್ನು ೧೫೦೦ ರೂ.ಗಳಿಂದ ೨೦೦೦ಕ್ಕೆ ಏರಿಕೆ ಮಾಡುವುದು ಹಾಗೂ ನೂತನವಾಗಿ ಸದಸ್ಯತ್ವದ ಹಣವನ್ನು ಏರಿಕೆ ಮಾಡಲು ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಎಸ್. ಬುರಡಿ ಮಾತನಾಡಿ, “ಸಂಘದ ಬೆಳೆವಣೆಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿ, ಸಂಘ ಬೆಳೆದು ಬಂದ ದಾರಿಯನ್ನು ಸ್ಮರಿಸಿದರು. ನೂತನ ಸ್ವಂತ ಕಟ್ಟಡ ತುಂಬಾ ಅವಶ್ಯಕತೆಯಾಗಿದ್ದು ಸಂಘದ ಕಟ್ಟಡ ನಿರ್ಮಾಣಕ್ಕೆ ೨೫ ಸಾವಿರ ರೂಪಾಯಿಗಳ ದೇಣಿಗೆಯನ್ನು ಘೋಷಿಸಿದರು.
ಅಭಿವೃದ್ಧಿ ಉಪನಿರ್ದೇಶಕರಾದ ಕೆ.ಡಿ. ಬಡಿಗೇರ ಮಾತನಾಡಿ, ಪರಸ್ಪರ ಸಹಕಾರ ಹಾಗೂ ನಂಬಿಕೆಯ ತಳಹದಿಯ ಮೇಲೆ ಪತ್ತಿನ ಸಹಕಾರ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದು ತಿಳಿಸಿ ನೂತನ ಕಟ್ಟಡಕ್ಕೆ ೨೫ ಸಾವಿರ ರೂಪಾಯಿಗಳ ದೇಣಿಗೆಯನ್ನು ಘೋಷಿಸಿದರು.
ನಿವೃತ್ತರ ಪರವಾಗಿ ಮಾತನಾಡಿದ ಶೆಟ್ಟಿ ನಾಯ್ಕರ ಗುರುಗಳು ಸಂಘದ ಆರ್ಥಿಕ ಸಹಾಯವನ್ನು ಸ್ಮರಿಸಿ ನೂತನ ಕಟ್ಟಡಕ್ಕೆ ೨೫ ಸಾವಿರ ರೂಪಾಯಿಗಳ ದೇಣಿಗೆಯನ್ನು ಘೋಷಿಸಿದರು. ಸಂಗೀತ ಶಿಕ್ಷಕರಿಂದ ಶಿರೋಳ ಇವರು ೫ ಸಾವಿರ ರೂ.ಗಳನ್ನು ಘೋಷಿಸಿದರು.
ನಿವೃತ್ತ ಶಿಕ್ಷಕ ಸಹಕಾರಿಗಳಿಗೆ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯ ಮಕ್ಕಳಿಗೆ ಸನ್ಮಾನಿಸಲಾಯಿತು. ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವಿ. ನಡುವಿನಮನಿ, ಅಕ್ಷರ ದಾಸೋಹ ಅಧಿಕಾರಿಗಳಾದ ಶಂಕರ ಹಡಗಲಿ, ಡಿ.ವೈ.ಪಿ.ಸಿ. ಎಂ.ಎಚ್. ಕಂಬಳಿ ಹಾಗೂ ಎ.ಪಿ.ಸಿ.ಓ. ಎಸ್.ಎಸ್. ಕುರಿಯವರ ಎ.ಪಿ.ಸಿ.ಓ. ಡಾ. ಶರಣು ಗೊಗೇರಿ ಸಂದೋರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಶಹರ ಘಟಕದ ಅಧ್ಯಕ್ಷರಾದ ಶರಣಪ್ಪ ನಾಗರಳ್ಳಿ, ಗ್ರಾಮೀಣ ಘಟಕದ ಅಧ್ಯಕ್ಷರಾದ ರವಿರಾಜ ಕೆ. ಪವಾರ, ಜಿಲ್ಲಾ ಕಾರ್ಯದರ್ಶಿಗಳಾದ ಮುತ್ತು ಗಾರವಾಡ ಉಪಸ್ಥಿತರಿದ್ದರು. ಆರಂಭದಲ್ಲಿ ರೇಣುಕಾ ನಾಯ್ಕರ ಪ್ರಾರ್ಥಿಸಿದರು. ಕೆ.ಎ. ಉಪ್ಪಿನ ಸ್ವಾಗತಿಸಿದರೆ. ಕೊನೆಯಲ್ಲಿ ಆನಂದ ಮೇಗಡಿ ವಂದಿಸಿದರು. ಶ್ರೀ ಎಂ.ಎಸ್. ಕುಚಬಾಳ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಬಿ.ಪಿ. ಪೊಲೀಸಪಾಟೀಲ ವರದಿ ವಾಚಿಸಿದರು. ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀಮತಿ ಎ.ಜಿ. ಅಳವಂಡಿ, ಶ್ರೀಕಾಂತ ಬಡ್ಡೂರ, ಎಂ.ಎಫ್. ಪಾಟೀಲ, ಎಂ.ಎಂ. ಹಳಪೇಟಿ, ಬಿ.ಎಚ್. ಯಲ್ಲಪ್ಪಗೌಡರ ಹಾಗೂ ಶಿವನಗೌಡರ ಉಪಸ್ಥಿತರಿದ್ದರು. ಸುಮಾರು ೨೦೦ ಜನ ಸಹಕಾರಿ ಸದಸ್ಯರು ಹಾಜರಿದ್ದರು.




