ಉಪ ಲೋಕಾಯುಕ್ತ ನ್ಯಾಯಮೂರ್ತಿ ನ್ಯಾ. ಕೆ ಎನ್ ಫಣೀಂದ್ರ ಅವರು ಶುಕ್ರವಾರ ಗದಗ ಪಟ್ಟಣದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಚೇರಿಯಲ್ಲಿನ ರೆಜಿಸ್ಟರ್‌ಗಳನ್ನು ಪರಿಶೀಲಿಸಿದ ಅವರು ಜಪ್ತಿ ಮಾಡಿದ ವಾಹನಗಳ ವಿವರ, ಶಾಲಾ ವಾಹನಗಳ ವಿವರ ಪಡೆದು ಅವುಗಳ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ತೆರಿಗೆ ಪಾವತಿಸದೆ ಇರುವಂತಹ ವಾಹನಗಳ ವಿವರ ಪಡೆದುಕೊಂಡು, ತೆರಿಗೆ ಪಾವತಿಸದೆ ಹಾಗೂ ಇತರೆ ದಾಖಲೆಗಳನ್ನು ಹೊಂದಿರದೆ ಸಂಚರಿಸುವ ಶಾಲಾ ವಾಹನಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ಕಚೇರಿಯ ಸಿಬ್ಬಂದಿಗಳ ಹಾಜರಾತಿ ವಹಿಗಳನ್ನು ಪರಿಶೀಲಿಸಿ ಸಿಬ್ಬಂದಿಗಳ ಮಾಹಿತಿ ಪಡೆದರು. ಸಿಬ್ಬಂದಿಗಳ ನಗದು ವಹಿ, ಚಲನ ವಲನ ವಹಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಚಲನ ವಲನ ವಹಿ, ನಗದು ವಹಿಗಳಲ್ಲಿ ನಿಯಮಿತವಾಗಿ ನಮೂದಿಸದೇ ಇರುವ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ವಹಿಗಳಲ್ಲಿ ನಿಯಮಿತವಾಗಿ ನಮೂದಿಸದೆ ಇರುವ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಲು ತಿಳಿಸಿ ಕಚೇರಿಯ ಎಲ್ಲ ಸಿಬ್ಬಂದಿಗಳ ಮೊಬೈಲ್‌ಗಳನ್ನು ಪರಿಶೀಲಿಸಲು ಸೂಚಿಸಿದರು.
“ಕಚೇರಿಯ ಎಲ್ಲ ಸಿಬ್ಬಂದಿಗಳು ಪ್ರತಿದಿನ ಕಡ್ಡಾಯವಾಗಿ ಹಾಜರಾತಿ, ಚಲನ ವಲನ, ನಗದು ವಹಿಗಳಲ್ಲಿ ನಮೂದಿಸಬೇಕು. ಸಿಬ್ಬಂದಿಗಳು ವಹಿಗಳಲ್ಲಿ ವಿವರಗಳನ್ನು ದಾಖಲಿಸಿರುವ ನಮೂದಿಸಿರುವ ಕುರಿತು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು. ಸರ್ಕಾರಿ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಈ ಕಚೇರಿಯ ಎಲ್ಲ ಕಾರ್ಯಗಳು ಆನಲೈನ್ ಮೂಲಕ ಜರಗುತ್ತಿದ್ದರೂ ಸಹ ಮಧ್ಯವರ್ತಿಗಳು ಸಾರ್ವಜನಿಕರಿಂದ ದುಡ್ಡು ಪಡೆದುಕೊಳ್ಳುವ ಕುರಿತು ದೂರುಗಳು ಬಂದಿರುತ್ತವೆ. ಈ ತಪ್ಪುಗಳು ಮರುಕಳಿಸಿದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿದ್ದೀರಾ? ʼನಗರದಲ್ಲಿದ್ದರೂ 12 ವರ್ಷಗಳಿಂದ ಮೂಲಸೌಲಭ್ಯವಿಲ್ಲʼ: ಕಲಬುರಗಿ ಬುಡ್ಗ ಜಂಗಮರ ಕಣ್ಣೀರಿನ ಕಥೆ
ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ ಎಂ ಪಾಟೀಲ್, ಸುನೀಲಕುಮಾರ್ ಆರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ ಎಸ್ ಶಿವನಗೌಡ್ರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ ಪಿ ಸೇರಿದಂತೆ ಇತರೆ ಸಿಬ್ಬಂದಿಗಳು ಇದ್ದರು.




