- ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿ ಮರೀಚಿಕೆ
- ಶಾಸಕ, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಎಸ್‌ಸಿಪಿ/ಟಿಎಸ್‌ಪಿ ಯೋಜನೆಗೆ ಹಲವು ಇಲಾಖೆಗಳಿಂದ ಅನುದಾನ ಬಿಡುಗಡೆಯಾಗುತ್ತದೆ. ಈ ಅನುದಾನವನ್ನು ಪರಿಶಿಷ್ಟ ಸಮುದಾಯಗಳಿಗೆ ಖರ್ಚು ಮಾಡುವ ನಿಯಮವಿದ್ದರೂ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್ ಬಾಲಕೃಷ್ಣ ಸಮುದಾಯಕ್ಕೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಸಮುದಾಯಗಳಿಗೆ ವಂಚಿಸಿದ್ದಾರೆ ಎಂದು ದಲಿತ ಸಂಘಟನೆಗಳು ಆರೋಪಿಸಿ, ಪ್ರತಿಭಟನೆ ನಡೆಸಿವೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ದಲಿತಪರ, ರೈತಪರ ಸಂಗಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. “ಸರ್ಕಾರದಿಂದ ದಲಿತ ಅಭಿವೃದ್ಧಿಗೆ ಮಂಜೂರಾಗಿರುವ ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಕಬಳಿಸಿರುವ ಶಾಸಕರು ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಬಾಲಕೃಷ್ಣ, ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನವನ್ನು ಇತರೆ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಸಮುದಾಯಗಳ ಅಭಿವೃದ್ಧಿಗೆ ಕಾಮಗಾರಿ ನಡೆಸುತ್ತಿದ್ದೇವೆಂದು ಕ್ರಿಯಾಯೋಜನೆ ರೂಪಿಸಿ, ಬಿಲ್ ಪಡೆದುಕೊಂಡಿದ್ದಾರೆ. ಆದರೆ, ಪರಿಶಿಷ್ಟ ಸಮುದಾಯ ವಾಸವಿರುವ ಕಾಲೋನಿಗಳಲ್ಲಿ ಯಾವುದೇ ಕಾಮಗಾರಿ ನಡೆಸಿಲ್ಲ” ಎಂದು ಆರೋಪಿಸಿದರು.
“2013-14ರಿಂದ 2023ರವರೆಗೆ ಹಲವು ಇಲಾಖೆಗಳಿಂದ ಬಿಡುಗಡೆಯಾಗಿರುವ ಅನುದಾನವನ್ನು ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ನಯಾಪೈಸೆ ಬಳಕೆ ಮಾಡಿಲ್ಲ. ಆದರೂ ಅನುದಾನಗಳು ಪಾವತಿಯಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ವಿವರಿಸಿರುವ ಹಲವು ಇಲಾಖೆಗಳಿಂದ ಬಿಡುಗಡೆಯಾಗಿರುವ ಅನುದಾನ ಮತ್ತು ಅದರ ಖರ್ಚು
- ಶಾಸಕರ ಕ್ಷೇತ್ರ ಅಭಿವೃದ್ಧಿ ಅನುದಾನ 25-30 ಕೋಟಿ ಅನುದಾನದಲ್ಲಿ ಶೇ.25ರಷ್ಟು ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಖರ್ಚಾಗಿಲ್ಲ
- ಪಿಡಬ್ಲ್ಯೂಡಿ ಲೊಕೋಪಯೋಗಿ ಇಲಾಖೆಯ 50-60 ಕೋಟಿ ರೂ. ಅನುದಾನ ಲೂಟಿ
- ಸಮಾಜ ಕಲ್ಯಾಣ ಇಲಾಖೆಯ 150 ಕೋಟಿ ರೂ. ಅನುದಾನ ಲೂಟಿ
- ಕಾವೇರಿ ನೀರಾವರಿ ನಿಗಮದ 80-90 ಕೋಟಿ ಲೂಟಿ
- ಸಣ್ಣ ನೀರಾವರಿ ಇಲಾಖೆ 90-100 ಕೋಟಿ ರೂ. ಲೂಟಿ
- ಗ್ರಾಮೀಣ ಪಂಚಾಯತ್ ರಾಜ್ ಇಲಾಖೆಯ 40-50 ಕೋಟಿ ರೂ ಲೂಟಿ
- ಗ್ರಾಮೀಣ ನೀರು ನೈರ್ಮಲ್ಯ ಸರಬರಾಜು ಇಲಾಖೆ 70-80 ಕೋಟಿ ಲೂಟಿ
- ಹಾಸನಾ ಜಿಲ್ಲಾ ಪಂಚಾಯತಿ ಅನುದಾನ 25-30 ಕೋಟಿ ರೂ. ಅನುದಾನ ಲೂಟಿ
- ಪುರಸಭೆ ಎಸ್‌ಸಿಪಿ/ಟಿಎಸ್‌ಪಿ 10-12 ಕೋಟಿ ರೂ. ಲೂಟಿ
- ತಾಲೂಕು ಪಂಚಾಯಿತಿ 20 ಕೋಟಿ ರೂ. ಶೇ. ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಖರ್ಚು
“ಹಲವು ಇಲಾಖೆಗಳಿಂದ ಸಾಕಷ್ಟು ಅನುದಾನ ನೀಡಿದ್ದರೂ ಕೂಡ ಎಸ್‌ಸಿ ಎಸ್‌ಟಿ ಸಮುದಾಯಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಹಾಗಾಗಿ ಈ ಬಾರಿ ಇಂತಹ ಶಾಸಕರನ್ನು ಮತದಾರರು ಆಯ್ಕೆ ಮಾಡುವ ಮುನ್ನ ಒಮ್ಮೆ ಯೋಚಿಸಬೇಕಾಗಿರುವುದು ಅನಿವಾರ್ಯವಾಗಿದೆ” ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ಮಾನವ ಬಂಧುತ್ವ ತಾಲೂಕು ಅಧ್ಯಕ್ಷ ಸತೀಶ್, ಅಂಬೇಡ್ಕರ್ ವಾದ ರಂಗಪ್ಪ, ಮಧುಸೂದನ್, ಮಂಜ, ಶಿವಣ್ಣ, ರೈತ ಮುಖಂಡ ತಾಲೂಕು ಅಧ್ಯಕ್ಷ ರವಿ, ಕಾರ್ಯದರ್ಶಿ ಕುಮಾರ್, ಶ್ರೀನಿವಾಸ್, ದಸಂಸ ಸ್ವಾಮಿ ಇದ್ದರು.
ಗುರುವಾರದಂದು ಆರಂಭವಾದ ಪ್ರತಿಭಟನೆ, ತಮಟೆ ಚಳುವಳಿ ಶುಕ್ರವಾರವೂ ಮುಂದುವರೆದಿದೆ.