- 2,300 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದ ಪೊಲೀಸರು
- ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದ ವಿವಾದಗಳೇ ಹತ್ಯೆಗೆ ಕಾರಣ
ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಗುಪ್ತಚರ ದಳದ ನಿವೃತ್ತ ಅಧಿಕಾರಿ ಆರ್.ಎನ್ ಕುಲಕರ್ಣಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮನು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ ತನಿಖೆ ನಡೆಸಿದ್ದ ಮೈಸೂರು ನಗರ ಪೊಲೀಸರು ಈ ತಿಂಗಳ ಆರಂಭದಲ್ಲಿ 2,300 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದರಲ್ಲಿ ಫೋಟೋಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಹೇಳಿಕೆಗಳನ್ನು ಒಳಪಡಿಸಿದ್ದಾರೆ.
“ಪ್ರಸ್ತುತದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಮುಖ ಆರೋಪಿ ಜಾಮೀನು ಕೋರಿದ್ದಾರೆ. ವಾದ-ಪ್ರತಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅರ್ಜಿ ವಜಾಗೊಳಿಸಿದೆ” ಎಂದು ಕುಲಕರ್ಣಿ ಪರ ವಕೀಲ ನರೇಂದ್ರ ಗೌಡ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿ 2022ರ ನವೆಂಬರ್ 4ರಂದು ಸಂಜೆ ವಾಕಿಂಗ್ ಮಾಡುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕುಲಕರ್ಣಿ ಸಾವನ್ನಪ್ಪಿದ್ದರು.
ಘಟನೆ ನಡೆದ ಮೂರು ದಿನಗಳಲ್ಲಿ ಕೊಲೆ ಆರೋಪದ ಮೇಲೆ ನಗರ ಪೊಲೀಸರು ಮನು ಮತ್ತು ಆತನ ಸ್ನೇಹಿತ ವರುಣನನ್ನು ಬಂಧಿಸಿದ್ದರು.
ಪಶ್ಚಿಮ ಮೈಸೂರಿನ ಟಿ ಕೆ ಲೇಔಟ್‌ನಲ್ಲಿರುವ ಕುಲಕರ್ಣಿ ಅವರ ನಿವಾಸದ ಹಿಂಭಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ವಿವಾದಗಳು ನಡೆದಿದ್ದವು. ಎನ್ ಆರ್ ಉಪವಿಭಾಗದ ಮಾಜಿ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಈ ಕುರಿತು ತನಿಖೆ ನಡೆಸಿದ ಪೊಲೀಸರು, “ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದ ವಿವಾದಗಳೇ ಹತ್ಯೆಗೆ ಕಾರಣವಾಗಿದೆ” ಎಂದು ಹೇಳಿದ್ದಾರೆ.