ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಿತ್ತಾವರ ಗ್ರಾಮದ ಸುತ್ತಮುತ್ತ ಒಂಟಿ ಸಲಗದ ಪುಂಡಾಟಕ್ಕೆ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದು, ಕಾಡಾನೆಯು ಕಿತ್ತಾವರ ಗುಡ್ಡ ಹಾಗೂ ಕಿತ್ತಾವರ ಕಾಫಿ ಎಸ್ಟೇಟ್ ಪ್ರದೇಶದಲ್ಲಿ ಹಗಲು ವೇಳೆ ವಿಶ್ರಾಂತಿ ಪಡೆಯುತ್ತ, ರಾತ್ರಿಯಾಗುತ್ತಿದ್ದಂತೆ ಕಾಫಿ ತೋಟಗಳ ಮೂಲಕ ಗ್ರಾಮಗಳತ್ತ ನುಗ್ಗಿ ಪುಂಡಾಟ ಮೆರೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಯಾವುದೇ ಕಾಡಾನೆಗಳ ಗುಂಪಿಗೆ ಸೇರದೆ ಒಂಟಿಯಾಗಿ ಓಡಾಡುತ್ತಿರುವ ಸಲಗನ್ನು ಕೆ ಪಿ ಕಾಲರ್-2 ಎಂದು ಗುರುತಿಸಲಾಗಿದೆ. ಹಲವು ದಿನಗಳ ಹಿಂದೆ ಈ ಗಂಡಾನೆಯನ್ನು ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಇದೀಗ ರೇಡಿಯೋ ಕಾಲರ್ ಇಲ್ಲದಿರುವುದರಿಂದ ಕಾಡಾನೆ ಕಣ್ಣಿಗೆ ಬಿದ್ದಾಗ ಮಾತ್ರ ಅದರ ಲೊಕೇಶನ್ ಹಂಚಿಕೊಳ್ಳಲಾಗುತ್ತಿದೆ.
ಶೆಡ್ನಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ದಾಳಿ: ಅನುಘಟ್ಟ ಪಂಚಾಯಿತಿ ವ್ಯಾಪ್ತಿಯ ದೊಲಮನೆ ಗ್ರಾಮದ ಕಾಫಿ ಬೆಳೆಗಾರ ಮೊಹಮ್ಮದ್ ಝಾಯಿದ್ ಕುಟುಂಬ ಆಗಸ್ಟ್ 2ರಂದು ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಾರಿನಲ್ಲಿ ಸ್ವಗ್ರಾಮಕ್ಕೆ ಮರಳಿತ್ತು. ತಡರಾತ್ರಿ ಕಾರನ್ನು ಶೆಡ್ ಒಳಗೆ ನಿಲ್ಲಿಸಿ ಇಳಿಯಬೇಕೆನ್ನುವಷ್ಟರಲ್ಲಿ ಮನೆಯ ಬಳಿ ಅಡಗಿ ನಿಂತಿದ್ದ ಕಾಡಾನೆ ಏಕಾಏಕಿ ಕಾರಿನ ಹಿಂಭಾಗಕ್ಕೆ ದಾಳಿ ಮಾಡಿತ್ತು. ದಂತದಿಂದ ಚುಚ್ಚಿ ಕಾರನ್ನು ಎತ್ತಿ ಎಸೆಯಲು ಪ್ರಯತ್ನಿಸಿತ್ತು. ಇದರಿಂದ ಕಾರಿನಲ್ಲಿದ್ದ ಝಾಯಿದ್ ಅವರ ತಂದೆ, ತಾಯಿ, ಅಕ್ಕ ಹಾಗೂ ಮಕ್ಕಳು ಭಯಭೀತರಾಗಿ ಜೋರಾಗಿ ಕಿರುಚಾಡಿದ್ದಾರೆ. ಅದೃಷ್ಟವಶಾತ್ ಎರಡನೇ ಬಾರಿ ದಾಳಿ ಮಾಡದೆ ಕಾಡಾನೆ ತೋಟದೊಳಗೆ ತೆರಳಿದ ಬಳಿಕ ಕುಟುಂಬದ ಸದಸ್ಯರು ಎಚ್ಚರಿಕೆಯಿಂದ ಮನೆಯೊಳಗೆ ತೆರಳಿ ಬಚಾವಾಗಿದ್ದರು.
ಜುಲೈ 29ರಂದು ಕಣಗುಪ್ಪೆ ಗ್ರಾಮದ ರೈತ ಧರ್ಮರಾಜು ಅವರನ್ನು ಬಲಿಪಡೆದ ಕಾಡಾನೆಯೇ ಇದೀಗ ಕಿತ್ತಾವರ ಭಾಗದಲ್ಲಿ ಓಡಾಡುತ್ತಿರುವ ಒಂಟಿ ಕಾಡಾನೆಯಾಗಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಯ ಹೆಜ್ಜೆ ಗುರುತು, ಚಲನ-ವಲನ ಹಾಗೂ ಇತರೆ ಮಾಹಿತಿಯನ್ನು ಪರಿಶೀಲಿಸಿದ್ದಾರೆ. ಈಗಾಗಲೇ ಮಾನವ ಜೀವ ಬಲಿಯಾಗಿರುವ ಪ್ರದೇಶದಲ್ಲಿ ಮತ್ತೊಮ್ಮೆ ಅಪಾಯಕಾರಿ ಒಂಟಿ ಆನೆಯ ಓಡಾಟ ಹೆಚ್ಚಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಕಾಡಾನೆ ದಾಳಿ: ಅರಣ್ಯ ವೀಕ್ಷಕ ಮಹಾದೇವಸ್ವಾಮಿ ಬಲಿ
ಸಂಜೆಯಾದ ಬಳಿಕ ಮನೆಯಿಂದ ಹೊರಬರಲು ಭಯದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಶೀಘ್ರ ಕಾರ್ಯಾಚರಣೆ ಮೂಲಕ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು. ಗುಂಪಿನಿಂದ ಬೇರ್ಪಟ್ಟಿರುವ ಎಲ್ಲ ಒಂಟಿ ಕಾಡಾನೆಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಕೂಡಲೇ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.




