ಜೈಲಿನಲ್ಲಿರುವ ತಮ್ಮ ಸಂಬಂಧಿಕನಿಗೆ ನ್ಯಾಯಾಲಯದಿಂದ ಜಾಮೀನು ಕೊಡಿಸಲು ವ್ಯಕ್ತಿಯೊಬ್ಬ ಛತ್ತೀಸ್‌ಗಢ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ (Chief Justice) ಭಾವಚಿತ್ರವನ್ನು ಇಟ್ಟುಕೊಂಡು ಸ್ಮಶಾನದಲ್ಲಿ ‘ತಾಂತ್ರಿಕ ಪೂಜೆ’ (ಮಾಟ-ಮಂತ್ರ) ನಡೆಸಿದ ವಿಲಕ್ಷಣ ಹಾಗೂ ಆಘಾತಕಾರಿ ಘಟನೆ ಛತ್ತೀಸ್‌ಗಢ ಬಿಲಾಸ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯ ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬಿಲಾಸ್‌ಪುರ ಪೊಲೀಸರು, ಸ್ಥಳದಲ್ಲಿದ್ದ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಸಿಪತ್ ಪೊಲೀಸ್ ಠಾಣೆ ವ್ಯಾಪ್ತಿಯ ‘ದೇವರಿ’ ಗ್ರಾಮದ ಮುಕ್ತಿಧಾಮ (ಸ್ಮಶಾನ) ಒಂದರಲ್ಲಿ ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ ನಾಲ್ವರು ವ್ಯಕ್ತಿಗಳು ಶಂಕಾಸ್ಪದ ಚಟುವಟಿಕೆಯಲ್ಲಿ ತೊಡಗಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಅನುಮಾನಗೊಂಡು ಗ್ರಾಮಸ್ಥರು ಸ್ಮಶಾನಕ್ಕೆ ತೆರಳಿ ತಪಾಸಣೆ ನಡೆಸಿದಾಗ ನಾಲ್ವರೂ ಓಡಿಹೋಗಲು ಯತ್ನಿಸಿದ್ದಾರೆ. ಈ ಪೈಕಿ ಋಷಿಕೇಶ್ ಕುಮಾರ್ ಎಂಬಾತನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನುಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಮೌಢ್ಯ | ‘ಪೂರ್ವಜರ ಮೋಕ್ಷ’ಕ್ಕಾಗಿ ಇಬ್ಬರು ಮಕ್ಕಳನ್ನು ಬಲಿಕೊಟ್ಟ ತಾಯಿ
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಪೂಜೆಗೆ ಬಳಸಲಾದ ವಸ್ತುಗಳು ಪತ್ತೆಯಾಗಿವೆ. ಇದರಲ್ಲಿ ಮೀನು, ನಿಂಬೆಹಣ್ಣು, ಸಿಂಧೂರ, ತೆಂಗಿನಕಾಯಿ ಹಾಗೂ ಪೂಜಾ ಸಾಮಗ್ರಿಗಳ ಜೊತೆಗೆ ಛತ್ತೀಸ್‌ಗಢ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ, ಪ್ರಕರಣದ ಆರೋಪಿ ಪ್ರಿಯಾಂಶು ಬೋಲೆ ಹಾಗೂ ಹಲ್ಲೆಗೊಳಗಾದ ಸಂತ್ರಸ್ತ ವ್ಯಕ್ತಿಯ ಭಾವಚಿತ್ರಗಳು ಪತ್ತೆಯಾಗಿವೆ.
ಪೋಲಿಸ್ ವಿಚಾರಣೆ ವೇಳೆ ಆರೋಪಿ ಋಷಿಕೇಶ್ ಕುಮಾರ್, ತನ್ನ ಸಂಬಂಧಿ ಪ್ರಿಯಾಂಶು ಬೋಲೆ ಚಾಕು ಇರಿತ ಪ್ರಕರಣ ಒಂದರಲ್ಲಿ ಜೈಲು ಪಾಲಾಗಿದ್ದ. ಆತನ ಜಾಮೀನು ಅರ್ಜಿ ಕೋರ್ಟ್‌ನಲ್ಲಿ ಬಾಕಿ ಇತ್ತು. ಸಾಮಾಜಿಕ ಜಾಲತಾಣದಲ್ಲಿ ತಾಂತ್ರಿಕನೊಬ್ಬನ ವಿಡಿಯೋ ನೋಡಿದ್ದ ಋಷಿಕೇಶ್, ಸ್ಮಶಾನದಲ್ಲಿ ಈ ರೀತಿಯ ತಾಂತ್ರಿಕ ಪೂಜೆ ಮಾಡಿದರೆ ಶೀಘ್ರವೇ ಜಾಮೀನು ಸಿಗುತ್ತದೆ ಎಂದು ನಂಬಿ ತನ್ನ ಮೂವರು ಗೆಳೆಯರೊಂದಿಗೆ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ (SP) ರಜನೀಶ್ ಸಿಂಗ್, “ಜಾಮೀನು ಅಥವಾ ನ್ಯಾಯಾಂಗ ಪ್ರಕ್ರಿಯೆಗಳು ಕಾನೂನು ವ್ಯಾಪ್ತಿಯಲ್ಲಿ ನಿರ್ಧಾರವಾಗುತ್ತವೆಯೇ ಹೊರತು ಇಂತಹ ಅಂಧವಿಶ್ವಾಸ ಅಥವಾ ಮಾಟ-ಮಂತ್ರಗಳಿಂದಲ್ಲ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.




