ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗಿರುವ ಈ ಸಂದರ್ಭದಲ್ಲಿ ರಸಗೊಬ್ಬರ ದರ ಏರಿಕೆ ಹಾಗೂ ಸರಬರಾಜಿನಲ್ಲಿ ಉಂಟಾಗಿರುವ ಕೊರತೆಯನ್ನು ತಕ್ಷಣ ನಿವಾರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ರೈತ ಪರ್ವ)ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಸಂಚಾಲಕ ಮೀಸೆ ಮಂಜಣ್ಣ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಸಗೊಬ್ಬರ ದರ ಏರಿಕೆಯನ್ನು ತಕ್ಷಣ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು. ಎಲ್ಲಾ ವಿಧದ ರಸಗೊಬ್ಬರಗಳ ಬೆಲೆ ಗಗನಕ್ಕೇರಿದ್ದು ರೈತರಿಗೆ ದೊಡ್ಡ ಹೊರೆ ಉಂಟಾಗಿದೆ.ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
ರೈತರು ಬಿತ್ತನೆ ಹಂಗಾಮಿಗಾಗಿ ತಮ್ಮ ಒಡವೆಗಳನ್ನು ಗಿರವಿ ಇಟ್ಟು ಹಾಗೂ ಸಾಲ ಪಡೆದು ಬೀಜ ಮತ್ತು ಗೊಬ್ಬರ ಖರೀದಿಸುತ್ತಿದ್ದಾರೆ. ಆದರೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ಲಭ್ಯವಾಗದಿರುವುದರಿಂದ ಕೃಷಿ ಚಟುವಟಿಕೆ ಗಳು ತೀವ್ರವಾಗಿ ಅಡಚಣೆಗೆ ಒಳಗಾಗಿವೆ. ಪ್ರಸ್ತುತ ಒಂದು ಎಕರೆಗೆ ಕೇವಲ ಒಂದು ಚೀಲ ಗೊಬ್ಬರ ಮಾತ್ರ ವಿತರಿಸಲಾಗುತ್ತಿದ್ದು, ಇದು ಬೆಳೆಗಳಿಗೆ ಸಾಕಾಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಸರ್ಕಾರ ಛಾಯಗ್ರಾಹಕರ ಕುಟುಂಬಗಳಿಗೆ ‘ಆಸರೆ ಯೋಜನೆ’
ಸರ್ಕಾರ ರೈತರ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಪ್ರತಿಭಟನೆಯಲ್ಲಿ ನಂಜೇಗೌಡ, ವಿಜಯ್, ರಾಮಚಂದ್ರ, ಪ್ರಕಾಶ್, ಸುರೇಶ್, ರಘು, ಮಂಜೇಗೌಡ, ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು




