ಸಮಾಜ ಸೇವೆ, ಆರೋಗ್ಯ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ವೃದ್ಧಿಗೆ ಐದು ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಕ್ಲಬ್ ಹಾಸನ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ಹಲವು ಜನೋಪಯೋಗಿ ಯೋಜನೆಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿತು.
ನಗರದ ಕುವೆಂಪು ರಸ್ತೆಯಲ್ಲಿರುವ ಹಾಸನ ಜಿಲ್ಲಾ ಲಯನ್ಸ್ ಕ್ಲಬ್ ಕಟ್ಟಡದ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನೂತನ ಲಿಫ್ಟ್ ಅನ್ನು ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಆರ್ ಜಿಲ್ಲಾ ಗವರ್ನರ್ ಲೆ. ಕುಡ್ಲಿ ಅರವಿಂದ್ ಶೆಣೈ ಉದ್ಘಾಟಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಿದರು. ಇದೇ ವೇಳೆ ಕಟ್ಟಡದಲ್ಲಿ ನಿರ್ಮಿಸಿರುವ ಎರಡು ನೂತನ ಶೌಚಾಲಯಗಳನ್ನೂ ಉದ್ಘಾಟಿಸಲಾಯಿತು. ಇದಾದ ಬಳಿಕ ನಗರದ ಸಮೀಪ ಅರಸೀಕೆರೆ ರಸ್ತೆಯ ಎಸ್.ಎಂ. ಕೃಷ್ಣ ನಗರದ ಬಳಿ ನಿರ್ಮಿಸಿರುವ ಸುಸಜ್ಜಿತ ಪ್ರಯಾಣಿಕರ ತಂಗುದಾಣಕ್ಕೂ ಚಾಲನೆ ನೀಡಲಾಯಿತು. ಈ ತಂಗುದಾಣವು ಸಾರ್ವಜನಿಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಜೊತೆಗೆ ಸುರಕ್ಷಿತವಾಗಿ ಬಸ್ಗಾಗಿ ಕಾಯಲು ಅನುಕೂಲವಾಗಲಿದೆ.
ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ ಕುಡ್ಲಿ ಅರವಿಂದ್ ಶೆಣೈ, ಹಾಸನ ಲಯನ್ಸ್ ಕ್ಲಬ್ ಎಂದರೇ ರಾಜ್ಯದ ಇತರ ಕ್ಲಬ್ ಗಳಿಗೆ ಮಾದರಿಯಾಗಿದ್ದು, ಅಧ್ಯಕ್ಷ ಹೆಚ್. ರಮೇಶ್ ಅವರ ನೇತೃತ್ವದಲ್ಲಿ ಕೈಗೊಂಡಿರುವ ಅಭಿವೃದ್ಧಿ ಮತ್ತು ಸೇವಾ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರ ಸ್ವೀಕರಿಸುವಾಗ ಘೋಷಿಸಿದ್ದ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿರುವುದು ಅವರ ಸಮರ್ಪಿತ ಕಾರ್ಯಶೈಲಿಗೆ ಸಾಕ್ಷಿಯಾಗಿದೆ ಎಂದರು. ಅಧ್ಯಕ್ಷ ಹೆಚ್. ರಮೇಶ್ ಅವರ ಅವಧಿಯಲ್ಲಿ ಲಯನ್ಸ್ ಭವನಕ್ಕೆ ನೂತನ ಲಿಫ್ಟ್, ಎರಡು ಶೌಚಾಲಯಗಳ ನಿರ್ಮಾಣ, ಕಟ್ಟಡದ ಸೌಂದರ್ಯವರ್ಧನೆ ಹಾಗೂ ಎಸ್.ಎಂ. ಕೃಷ್ಣ ನಗರದ ಬಳಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಸೇರಿದಂತೆ ಅನೇಕ ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಇವು ಕ್ಲಬ್ನ ಸೇವಾ ಮನೋಭಾವಕ್ಕೆ ಹೊಸ ಆಯಾಮ ನೀಡಿದ್ದು, ಸುವರ್ಣ ಮಹೋತ್ಸವದ ನೆನಪಿನ ಕೊಡುಗೆಯಾಗಿ ಉಳಿಯಲಿವೆ ಎಂದು ಶೆಣೈ ಅಭಿಪ್ರಾಯಪಟ್ಟರು.
ಇದನ್ನೂ ಓದಿದ್ದೀರಾ?ಹಾಸನ | ರಸಗೊಬ್ಬರ ದರ ಏರಿಕೆ, ಕೊರತೆ ವಿರೋಧಿಸಿ ರೈತರಿಂದ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್. ರಮೇಶ್, ಕಾರ್ಯದರ್ಶಿ ಸಿ. ಶಿವಸ್ವಾಮಿ, ಖಜಾಂಚಿ ಹೆಚ್.ಆರ್. ಚನ್ನೇಗೌಡ, ಮಾಜಿ ಜಿಲ್ಲಾ ಗವರ್ನರ್ ಬಿ.ವಿ. ಹೆಗ್ಗಡೆ, ಜಿಲ್ಲಾ ಸಹಾಯಕ ಗವರ್ನರ್ ವೆಂಕಟೇಶ್ ಹೆಬ್ಬಾರ್, ಗೋಲ್ಡನ್ ಜ್ಯೂಬಿ ಸಮಿತಿ ಅಧ್ಯಕ್ಷ ಕೆ.ಆರ್. ಮಲ್ಲೇಶ್ ಗೌಡ, ಕಾರ್ಯದರ್ಶಿ ಹೆಚ್.ಪಿ. ಅಶೋಕ್ ಕುಮಾರ್, ಖಜಾಂಚಿ ಹೆಚ್.ಆರ್. ಚಂದ್ರೇಗೌಡ, ಸತ್ಯನಾರಾಯಣ್, ವಲಯ ಅಧ್ಯಕ್ಷ ಹೆಚ್.ಕೆ. ನಾಗೇಶ್, ನೂತನ ಅಧ್ಯಕ್ಷ ವೆಂಕಟೇಶ್ ಜವರಪ್ಪ, ಕಾರ್ಯದರ್ಶಿ ಸಿ.ಬಿ. ನಾಗರಾಜು, ಖಜಾಂಚಿ ಪಂಚಾಕ್ಷರಿ, ಮಾಲತಿ ಹೆಗ್ಗಡೆ, ಐ.ಜಿ. ರಮೇಶ್, ರೂಪ ಆನಂದ್, ನರಸಿಂಹ, ಕೆ.ಎಂ. ಮಂಜುನಾಥ್, ಸಿ.ಕೆ. ಕಿರಣ್ ಕುಮಾರ್, ಲಯನ್ಸ್ ಕ್ಲಬ್ ಹಾಸನಾಂಬ ಖಜಾಂಚಿ ಎಂ. ಹರೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಮತ್ತು ಸದಸ್ಯರು ಉಪಸ್ಥಿತರಿದ್ದರು.




