ಗ್ರಾಮ ಪಂಚಾಯಿತಿ ಮೀಸಲಾತಿ ವಿಚಾರವಾಗಿ ನಾಲಗೆ ಹರಿಬಿಟ್ಟಿದ್ದ ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ಕೆ ಎಸ್ ಲತಾಕುಮಾರಿ ತಿರುಗೇಟು ನೀಡಿದ್ದು, ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಹಾಗೂ ಸಂಬಂಧಿತ ನಿಯಮಗಳ ಪ್ರಕಾರ ಗ್ರಾಮ ಪಂಚಾಯಿತಿಗಳ ಮೀಸಲಾತಿ ನಿಗದಿಪಡಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇದೆ. ತಹಶಿಲ್ದಾರ್‌ಗಳು ಜನಸಂಖ್ಯೆ ಮತ್ತು ಪ್ರವರ್ಗವಾರು ಮಾಹಿತಿ ಆಧರಿಸಿ ಪ್ರಸ್ತಾವನೆ ಸಲ್ಲಿಸುತ್ತಾರೆ. ಅಂತಿಮವಾಗಿ ನಿಯಮಾನುಸಾರ ಮೀಸಲಾತಿ ನಿಗದಿಪಡಿಸುವುದು ಜಿಲ್ಲಾಧಿಕಾರಿ ಜವಾಬ್ದಾರಿ” ಎಂದು ವಿವರಿಸಿದರು.
“ತಹಶೀಲ್ದಾರ್‌ಗಳು ನೀಡಿದ ಪ್ರಸ್ತಾವನೆಯನ್ನೇ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಸರಿಯಲ್ಲ. ಕಾಯ್ದೆಯ ಪ್ರಕಾರ ಮೀಸಲಾತಿ ಅಂತಿಮಗೊಳಿಸುವ ಅಧಿಕಾರ ತಹಶೀಲ್ದಾರ್‌ಗಳಿಗೆ ಇಲ್ಲ” ಎಂದರು.
“ರೇವಣ್ಣ ಅವರಿಗೆ ಯಾವುದೇ ಆಕ್ಷೇಪಣೆಗಳಿದ್ದರೆ ನನಗೆ ಲಿಖಿತವಾಗಿ ನೀಡಬಹುದಿತ್ತು. ಈವರೆಗೆ ಈ ಸಂಬಂಧ ಯಾವುದೇ ಮನವಿ ಅಥವಾ ದೂರು ಬಂದಿಲ್ಲ. ಆರ್‌ಟಿಐ ಅಡಿ ಕೆಲವು ಅರ್ಜಿಗಳು ಬಂದಿದ್ದು, ಅವುಗಳಿಗೆ ನಿಯಮಾನುಸಾರ ಉತ್ತರ ನೀಡಲಾಗುತ್ತಿದೆ” ಎಂದು ಹೇಳಿದರು.
“ಕಡತಗಳು ಬಾಕಿ ಇವೆ ಎಂಬ ಸಾಮಾನ್ಯ ಆರೋಪ ಮಾಡುವ ಬದಲು ಯಾವ ಕಡತ ಬಾಕಿ ಇದೆ? ಎಷ್ಟು ದಿನದಿಂದ ಬಾಕಿ ಇದೆ? ಯಾರ ಬಳಿ ಇದೆ? ಯಾವ ಇಲಾಖೆಯಲ್ಲಿ ಇದೆ? ಯಾವ ಕಾರಣಕ್ಕೆ ಬಾಕಿ ಇದೆ ಎಂಬ ಪಟ್ಟಿಯನ್ನು ನೀಡಲಿ. ಅದಕ್ಕೆ ಸಂಪೂರ್ಣ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದರು.
“ಹಿರಿಯ ಜನಪ್ರತಿನಿಧಿಗಳು ಹಾಗೂ ಅನುಭವಿಗಳಿಂದ ಇನ್ನಷ್ಟು ಉತ್ತಮ ಆಡಳಿತ ನೀಡುವ ಬಗ್ಗೆ ಸಲಹೆ ಬಂದರೆ ಸ್ವೀಕರಿಸುತ್ತೇವೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಸದಾ ಪ್ರಯತ್ನಿಸುತ್ತೇವೆ. ಆದರೆ ಅಧಿಕಾರಿಗಳ ವಿರುದ್ಧ ವೈಯಕ್ತಿಕವಾಗಿ ಹಾಗೂ ಕೀಳುಮಟ್ಟದ ಭಾಷೆ ಬಳಸಿ ಮಾತನಾಡುವುದು ಸೂಕ್ತವಲ್ಲ’ ಎಂದರು.
“ಮೀಸಲಾತಿ ನಿಗದಿಪಡಿಸುವಾಗ ನಿರ್ದಿಷ್ಟ ಕ್ಷೇತ್ರದ ಜನಸಂಖ್ಯೆಯನ್ನು ಮಾತ್ರ ಪರಿಗಣಿಸುವುದಿಲ್ಲ. ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಒಂದು ಕ್ಷೇತ್ರದಲ್ಲಿ ಎಸ್‌ಟಿ ಜನಸಂಖ್ಯೆ ಇಲ್ಲದಿದ್ದರೂ ಇಡೀ ಗ್ರಾಮ ಪಂಚಾಯಿತಿಯಲ್ಲಿ ಎಸ್‌ಟಿ ಜನಸಂಖ್ಯೆ ಇದ್ದರೆ, ಆ ಪಂಚಾಯಿತಿ ವ್ಯಾಪ್ತಿಯ ಯಾವುದೇ ಕ್ಷೇತ್ರದಿಂದ ಅರ್ಹ ಅಭ್ಯರ್ಥಿ ಸ್ಪರ್ಧಿಸಬಹುದು” ಎಂದು ಸ್ಪಷ್ಟಪಡಿಸಿದರು.
“ಅದೇ ರೀತಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಮಹಿಳಾ ಮೀಸಲಾತಿಯನ್ನು ನಿಯಮಾನುಸಾರ ರೊಟೇಷನ್ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಹಿಂದಿನ ಬಾರಿ ಯಾವ ಸ್ಥಾನಕ್ಕೆ ಮೀಸಲಾತಿ ನೀಡಲಾಗಿತ್ತೋ ಅದೇ ಸ್ಥಾನಕ್ಕೆ ಪುನಃ ಅದೇ ಮೀಸಲಾತಿ ನೀಡದಂತೆ ನಿಯಮ ಪಾಲಿಸಲಾಗುತ್ತದೆ” ಎಂದರು.
“ಮಹಿಳಾ ಮೀಸಲಾತಿಯೂ ಹಿಂದಿನ ಮೀಸಲಾತಿಯನ್ನು ಪರಿಗಣಿಸಿ ನಿಗದಿಪಡಿಸಲಾಗುತ್ತದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನ ಸಾಮಾನ್ಯವಾಗಿಯೇ ಇರುತ್ತದೆ” ಎಂದು ಹೇಳಿದರು.
“ಕೆಲವು ಗ್ರಾಮಗಳಲ್ಲಿ ಎಸ್‌ಸಿ ಅಥವಾ ಎಸ್‌ಟಿ ಜನಸಂಖ್ಯೆ ಶೂನ್ಯವಿದ್ದರೂ ಆ ಗ್ರಾಮ ಪಂಚಾಯಿತಿಯಲ್ಲಿ ಆ ವರ್ಗದ ಜನಸಂಖ್ಯೆ ಇರಬಹುದು. ಹೀಗಾಗಿ, ಮೀಸಲಾತಿ ನೀಡಿದ ಸ್ಥಾನದಲ್ಲಿ ಅಭ್ಯರ್ಥಿ ಸಿಗುವುದಿಲ್ಲ ಎಂಬ ಆರೋಪ ಸರಿಯಲ್ಲ. ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಅಭ್ಯರ್ಥಿಗಳು, ಮೀಸಲಾತಿ ನೀಡಿರುವ ಕ್ಷೇತ್ರದಿಂದ ಸ್ಪರ್ಧಿಸಬಹುದು” ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಅಧಿಸೂಚನೆ ಈಗಾಗಲೇ ಪ್ರಕಟ: “ನಿಯಮಾನುಸಾರ ಮೀಸಲಾತಿ ನಿಗದಿಪಡಿಸಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಆರ್‌ಡಿಪಿಆರ್ ಇಲಾಖೆಯಿಂದ ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶನ ಬಂದಿತ್ತು. ಅದರಂತೆ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ” ಎಂದು ಜಿಲ್ಲಾಧಿಕಾರಿ ಹೇಳಿದರು.
“ನಾವು ನಿಯಮಾನುಸಾರ ಶಾಂತಿಯುತವಾಗಿ ಕೆಲಸ ಮಾಡಿದ್ದೇವೆ. ಯಾರಿಗಾದರೂ ಹಿಂದಿನ ಬಾರಿಯೂ ಇದೇ ಸ್ಥಾನಕ್ಕೆ ಇದೇ ಮೀಸಲಾತಿ ಇತ್ತು, ಈ ಬಾರಿಯೂ ಅದೇ ರೀತಿಯಾಗಿದೆ ಎಂಬ ನಿರ್ದಿಷ್ಟ ಆಕ್ಷೇಪಣೆ ಇದ್ದಲ್ಲಿ ಲಿಖಿತವಾಗಿ ಸಲ್ಲಿಸಲಿ. ಅದನ್ನು ಪರಿಶೀಲಿಸಲಾಗುವುದು” ಎಂದರು.
“ನಮ್ಮನ್ನು ಯಾರೋ ಎಲ್ಲಿಂದಲೋ ಹಿಡಿದು ತಂದು ಈ ಸ್ಥಾನದಲ್ಲಿ ಕೂರಿಸಿಲ್ಲ. ನಾವೆಲ್ಲರೂ ಕಷ್ಟಪಟ್ಟು ಓದಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಈ ಹುದ್ದೆಗೆ ಬಂದಿದ್ದೇವೆ. ಅಧಿಕಾರಿಗಳ ವಿರುದ್ಧ ವೈಯಕ್ತಿಕವಾಗಿ ಹಾಗೂ ಕೀಳು ಪದ ಬಳಸುವುದು ಸರಿಯಲ್ಲ. ಶಾಸಕರು ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಒಬ್ಬ ಅಧಿಕಾರಿ ಕಾನೂನು ಮೀರಿ ಕೆಲಸ ಮಾಡಿದ್ದರೆ ಅಥವಾ ಕರ್ತವ್ಯಲೋಪ ಎಸಗಿದ್ದರೆ ನಿಯಮಾನುಸಾರ ಅದನ್ನು ಪ್ರಶ್ನಿಸುವ ಅಧಿಕಾರ ಶಾಸಕರಿಗಿದೆ. ಆದರೆ, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ವೈಯಕ್ತಿಕ ಗೌರವ ನೀಡದೆ ನಿಂದಿಸುವುದು ಸರಿಯಲ್ಲ. ಇಂತಹ ಹೇಳಿಕೆಗಳಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಮೊದಲೆಲ್ಲ ಹೆಣ್ಣುಮಕ್ಕಳು ಓದಿದರೆ ಸಮಾಜದಲ್ಲಿ ಗೌರವ ಸಿಗುತ್ತದೆಂದು ಹೇಳಲಾಗುತ್ತಿತ್ತು, ಓದಿದ ಬಳಿಕ ಉನ್ನತ ಹುದ್ದೆಯಲ್ಲಿದ್ದರೆ ಗೌರವ ಎನ್ನಲಾಗುತ್ತಿತ್ತು. ಡಿಸಿಯಂಥ ಹುದ್ದೆಯಲ್ಲಿದ್ದರೂ ಸಮಾಜದಲ್ಲಿ ಹೆಣ್ಣಿಗೆ ಗೌರವ ಇಲ್ಲವೆಂದರೆ ಇನ್ನೆಂಥ ಹುದ್ದೆಯಲ್ಲಿರಬೇಕು. ಇನ್ಯಾವ ನಮಗೆ ಗೌರವ ಸಿಗುತ್ತದೆ. ಅಧಿಕಾರಿಗಳ ವಿರುದ್ಧ ಅಗೌರವವಾಗಿ ಮಾತನಾಡುವುದು ಅವರ ಘನತೆಗೆ ತಕ್ಕುದಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾನೂನಿನ ಚೌಕಟ್ಟನ್ನು ಮೀರಿ ಕೆಲಸ ಮಾಡಲು ನಮಗೆ ಯಾವುದೇ ಅಧಿಕಾರವಿಲ್ಲ. ಏಕೆಂದರೆ ಅದಕ್ಕೆ ನಾವು ಉತ್ತರವನ್ನು ಕೊಡಬೇಕಾಗುತ್ತದೆ. ಹಾಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತೇವೆ” ಎಂದು ರೇವಣ್ಣಗೆ ತಿರುಗೇಟು ನೀಡಿದ್ದಾರೆ.
ನಾನು 30 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ: ರೇವಣ್ಣ
ಜಿಲ್ಲಾಧಿಕಾರಿಯಾಗಿ ಬಂದಿರುವ ಅವರು ಒಂದೂವರೆ ವರ್ಷದಿಂದ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೋಡಿದ್ದೇನೆ. ಅದಕ್ಕಾಗಿಯೇ ಅವರ ಕಚೇರಿಗೆ ಹೋಗಿಲ್ಲ. ಜಿಲ್ಲಾಧಿಕಾರಿಯಾಗಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ಗಮನಿಸಬೇಕು ಎಂದರು.
ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರ, ಸಾರ್ವಜನಿಕ ಆರೋಗ್ಯ ಮತ್ತು ಸಚಿವ ಖಾದರ್
ಜಿಲ್ಲಾಧಿಕಾರಿಯನ್ನು ವೈಯಕ್ತಿಕವಾಗಿ ಟೀಕಿಸುವ ಉದ್ದೇಶ ಹೊಂದಿಲ್ಲ. ಅವರಿಗೆ ಒಳ್ಳೆಯದಾಗಲಿ. ನನ್ನಿಂದ ಅವರಿಗೆ ನೋವಾಗಿದ್ದರೆ ಮುಂದೆ ನೋವಾಗದಂತೆ ನಡೆದುಕೊಳ್ಳುತ್ತೇನೆ. ಆದರೆ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಕಂಡುಬಂದಾಗ ನಾನು ಸುಮ್ಮನಿರಲು ಸಾಧ್ಯವಿಲ್ಲ. ಎರಡು ವರ್ಷಗಳಿಂದ ರೈತರಿಗೆ ಬೆಳೆ ವಿಮೆ ಹಣ ಬಂದಿಲ್ಲ. ಬೆಳೆ ನಷ್ಟವಾಗಿರುವ ಪ್ರದೇಶಗಳಿಗೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯಿತಿ ಕಾರ್ಯದರ್ಶಿಗಳು ತೆರಳಿ ಪರಿಶೀಲಿಸಬೇಕು. ಹಿಂದಿನ ಸರ್ಕಾರ ನೀಡಿರುವ ಮಾರ್ಗಸೂಚಿಗಳಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಘಟನೆ ಹಿನ್ನೆಲೆ
ಗ್ರಾ.ಪಂ. ಎಸ್‌ಸಿ/ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ನಿಗದಿ ಕುರಿತು ಶಾಸಕ ರೇವಣ್ಣ, ʼಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೀ ಇವರನ್ನು. ಇಂಥ ಡಿಸಿಯನ್ನು ಎಲ್ಲೂ ನೋಡಲಿಲ್ಲʼವೆಂದು ನಾಲಗೆ ಹರಿಬಿಟ್ಟಿದ್ದರು.




