ಉಡುಪಿ ಜಿಲ್ಲೆಯ ಕಾಪು ಮಲ್ಲಾರು ನಿವಾಸಿ, ‘ಉಸ್ತಾದ್’ ಎಂದೇ ಪರಿಚಿತರಾಗಿದ್ದ ಶಫಿ ಅಹಮದ್ (75) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಜಮಾಅತೆ ಇಸ್ಲಾಮಿ ಹಿಂದ್‌ನ ಸದಸ್ಯರಾಗಿದ್ದ ಅವರು ಕಾಪು ಶಾಖೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸರಕಾರಿ ಮಲ್ಲಾರು ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು, ಮಲ್ಲಾರು ಜನರಲ್ ಶಾಲೆ, ಕೈಪುಂಜಾಲ್ ಹಾಗೂ ತೊಟ್ಟಂನ ಶಾಲೆಗಳಲ್ಲಿಯೂ ಸೇವೆ ಸಲ್ಲಿಸಿದ್ದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾಗಿದ್ದ ಅವರು ಜಾಮಿಯಾ ಮಸ್ಜಿದ್ ಜದೀದ್ ಕಲಾನ್‌ನಲ್ಲಿ ಜೊತೆ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಸ್ಥಳೀಯ ಹಲವು ಸಂಘ-ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಸೇವೆ ಸಲ್ಲಿಸಿದ್ದರು. ಅವರ ಸುಂದರ ಕೈಬರಹವು ಸ್ಥಳೀಯವಾಗಿ ಜನಪ್ರಿಯವಾಗಿತ್ತು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.





