ಸಮಾಜ ಸೇವೆ ಮಾಡಲು ಮನಸ್ಸು ಮುಖ್ಯ. ಹಿರೇಮುಗದೂರು ಗ್ರಾಮದ ಅಮ್ಮಾ ಸಂಸ್ಥೆಯ ಪದಾಧಿಕಾರಿಗಳು ನಿಸ್ವಾರ್ಥವಾಗಿ ಶಿಕ್ಷಣ ಹಾಗೂ ಸಮಾಜ ಸೇವೆ ಮಾಡಲು ಬದ್ಧರಾಗಿದ್ದಾರೆ. ಅಮ್ಮಾ ಸಂಸ್ಥೆ ಸ್ಥಾಪನೆಯಾದ ದಿನ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಿದ್ದು, ಅಮ್ಮಾ ಸಂಸ್ಥೆಯ ಸಾಮಾಜಿಕ ಕೆಲಸಕ್ಕೆ ಎಲ್ಲರೂ ಸಹಕಾರ ನೀಡುವಂತಾಗಲಿ ಎಂದು ಹಾವೇರಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಜಿ.ಎಸ್. ನದಾಫ್ ಹೇಳಿದರು.
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮ್ಮಾ ಸಂಸ್ಥೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯವನ್ನು ಅಮ್ಮಾ ಸಂಸ್ಥೆ (ರಿ) ನಿರಂತರವಾಗಿ ಮಾಡುತ್ತಿದೆ” ಎಂದರು.
ಶಾಲೆಯ ಶಿಕ್ಷಕರಾದ ಕೆ.ಆರ್. ಕರಿಬಸವರಾಜ ಮಾತನಾಡಿ, “ಅಮ್ಮಾ ಸಂಸ್ಥೆ ತಾಲ್ಲೂಕಿನ ಕಟ್ಟಕಡೆಯ ಶಾಲೆಗೆ ಆಗಮಿಸಿ ನಮ್ಮ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದ್ದು, ಅಮ್ಮಾ ಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಅಮ್ಮಾ ಸಂಸ್ಥೆಯ ಸಂಸ್ಥಾಪಕರಾದ ನಿಂಗಪ್ಪ ಆರೇರ, ಅಂಗನವಾಡಿ ಕೇಂದ್ರ ಶಿಕ್ಷಕಿಯರಾದ ದೀಪಾ ಕುಲಕರ್ಣಿ, ಸಾವಕ್ಕ ಪುಟ್ಟಿಯವರು, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.




