“ಇತ್ತೀಚೆಗೆ ರವಿ ಹಂಜ್ ಎಂಬ ಎನ್‌ಆರ್‌ಐ ವ್ಯಕ್ತಿಯು ಬಸವಣ್ಣನವರ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಬರೆದು ಅದನ್ನೇ ಪುಸ್ತಕವನ್ನಾಗಿ ಪ್ರಕಟಿಸುವ ಮೂಲಕ ಬಸವಣ್ಣ ಮತ್ತು ಕಾಯಕ ಶರಣರಿಗೆ ಮಾಡಿದ ದ್ರೋಹ ಮಾಡಿದ್ದಾರೆ. ರವಿ ಹಂಜ್ ಅವರಿಗೆ ವಿಶ್ವೇಶ್ವರ ಭಟ್ಟ ಮಾಡಿದ ಸಂದರ್ಶನದಲ್ಲಿ ಬಸವಣ್ಣನವರನ್ನು ಕೊಲೆಗಾರ, ಮೋಸಗಾರ ಎಂದೆಲ್ಲ ಪ್ರಚೋದನಾಕಾರಿ ಹೇಳಿಕೆ ನೀಡಿರುವುದನ್ನು ಸಿಪಿಐಎಂ ಪಕ್ಷವು ತೀವ್ರವಾಗಿ ಖಂಡಿಸುತ್ತದೆ” ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೇಳಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದು, “ರವಿ ಹಂಜ್ ಬರಹವು ವಚನ ತತ್ವ ವಿರೋಧಿಸಬೇಕೆಂಬ ಒಳಸಂಚನ್ನು ಹೊಂದಿದೆ. ಬಸವ ತತ್ವದ ಜೀವಪರ ಮೌಲ್ಯಗಳನ್ನು ತಿರಸ್ಕರಿಸುವ ಷಡ್ಯಂತ್ರ ಹೊಂದಿದೆ. ಅನೇಕ ವರ್ಷಗಳಿಂದ ಕೋಮುವಾದಿ ನೆಲೆಯ ಬುದ್ದಿಜೀವಿಗಳು ವಚನ ಚಳುವಳಿಯನ್ನು ಅಪ್ರಸ್ತುತಗೊಳಿಸುವ ಸಲುವಾಗಿ ನಿರಂತರ ಪ್ರಯತ್ನ ನಡೆಸಿದ್ದು, ಈಗಾಗಲೆ ಜನತೆಯ ಗಮನದಲ್ಲಿದೆ” ಎಂದಿದ್ದಾರೆ.
“ಬಸವಣ್ಣನವರನ್ನು ಕರ್ನಾಟಕದಲ್ಲಿ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದರಿಂದ ಕೋಮುವಾದಿಗಳಿಗೆ ಇದು ನುಂಗಲಾರದ ತುತ್ತಾಗಿದ್ದು, ನಿರಂತರವಾಗಿ ವಚನ ಸಾಹಿತ್ಯದ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಮನುಸ್ಮೃತಿಯ ಮೌಲ್ಯಗಳ ಹೇರುವಿಕೆಗಾಗಿ ಕೋಮುವಾದಿಗಳು ಸಂವಿಧಾನವನ್ನು ಮತ್ತು ವಚನ ತತ್ವವನ್ನು ತಿರುಚಲು ಹೊರಟಿದ್ದಾರೆ. ಇತ್ತೀಚೆಗೆ ಕನ್ನೇರಿ ಸ್ವಾಮಿಯ ಮೂಲಕ ವಚನ ತತ್ವವನ್ನು ತಿರುಚುವ ಮನುವಾದೀಕರಣಗೊಳಿಸುವ ಹುನ್ನಾರವನ್ನು ರಾಜ್ಯದ ಜನತೆಯು ತೀವ್ರವಾಗಿ ವಿರೋಧಿಸಿದ್ದಾರೆ. ವರ್ಗ, ವರ್ಣ ಲಿಂಗ, ಜಾತಿ ತಾರತಮ್ಯವನ್ನು ಕಿತ್ತು ಹಾಕಿ ಸಮತೆಯ ನಾಡು ಕಟ್ಟುವ ಉದ್ದೇಶದೊಂದಿಗೆ ನಡೆದ ಚಳುವಳಿಯನ್ನೇ ಇಲ್ಲವಾಗಿಸುವ ಕುತಂತ್ರ ನಡೆದಿದೆ. ಇದಕ್ಕೆ ಕೋಮುವಾದಿ ಬಿಜೆಪಿಯ ರಾಜಕೀಯ ಕೈವಾಡವೂ ಇರುವುದು ಈಗಾಗಲೆ ಸಾಬೀತಾಗಿದೆ” ಎಂದು ಕಿಡಿಕಾರಿದ್ದಾರೆ.
“ಕನ್ನೇರಿ ಸ್ವಾಮಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದು ಮತ್ತು “ವಚನ ದರ್ಶನ” ಎಂಬ ವಚನ ತತ್ವ ವಿರೋಧಿ ಕೃತಿಯ ಬಿಡುಗಡೆಗೆ ಬಿಜೆಪಿಯ ರಾಜ್ಯದ ಅಧ್ಯಕ್ಷ ಮತ್ತು ಅದರ ನಾಯಕರು ಭಾಗವಹಿಸಿದ್ದಾರೆ. ವಚನ ತತ್ವದ ಮೇಲಿನ ದಾಳಿಯ ಹಿಂದೆ ಬಿಜೆಪಿಯ ಮತ್ತು ಆರ್.ಎಸ್.ಎಸ್. ಕೈವಾಡ ಇದೆ ಎಂಬುದು ಈಗಾಗಲೆ ಜಗಜ್ಜಾಹೀರಾಗಿದೆ” ಎಂದಿದ್ದಾರೆ.
“ಬಸವಣ್ಣ ಮತ್ತು ವಚನ ತತ್ವದ ಮೇಲೆ ದಾಳಿ ಮಾಡುತ್ತಿರುವ ಎಲ್ಲ ಶಕ್ತಿಗಳನ್ನು ಸರಕಾರವು ಮಟ್ಟ ಹಾಕಲು ಸಾಧ್ಯವಾಗಬೇಕು. ರವಿ ಹಂಜ್ ಬಂಧನದೊಂದಿಗೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇದಕ್ಕೆ ಕಾರಣೀಭೂತರಾಗಿರುವ ಮಾದ್ಯಮದ ಮೂಲಕ ಸುಳ್ಳನ್ನು ಬರೆಯಿಸಿ ನಾಡಿನ ಶಾಂತಿ ಸುವ್ಯವಸ್ಥೆಗೆ ಭಂಗ ಬರಲು ಕಾರಣವಾಗಿರುವ ವಿಶ್ವೇಶ್ವರ ಭಟ್ಟ ಅವರ ಮೇಲೂ ಕಾನೂನು ಕ್ರಮ ಜರುಗಿಸಬೇಕು” ಎಂದು ಸಿಪಿಐಎಂ ಪಕ್ಷವು ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.



