“ರಾಜ್ಯ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ಒಂದೇ ಒಂದು ನಿಮಿಷವೂ ರಾಜ್ಯಪಾಲರಾಗಿ ಉಳಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ” ಎಂದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ಪಟ್ಟಣದ ಜಿಲ್ಲಾಧಿಕಾರಿ ಕಛೇರಿ ಎದುರು ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ಎಡಿಸಿ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷರು ಗಿರಿಶ ಬಾರ್ಕಿ ಮಾತನಾಡಿ, “ರಾಜ್ಯಪಾಲರು ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಮೂಗು ತೂರಿಸುವುದು ಅತ್ಯಂತ ಆಕ್ಷೇಪಾರ್ಹವಾದ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು, ಬೇಡಗಳನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಹೀಗಿರುವಾಗ ಸರ್ಕಾರದ ಮುಖ್ಯಸ್ಥರಾಗಿ ಸರ್ಕಾರದ ನಾಡಪರ ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಹಿಂದಿ ಮಾಫಿಯಾ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತದೆ. ಹೀಗಾಗಿ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.
“ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ’ ಎಂಬ ಅನಾಮಧೇಯ ಸಂಘಟನೆಯ ಮನವಿಗೆ ತುರ್ತಾಗಿ ರಾಜ್ಯಪಾಲರು ಪ್ರತಿಕ್ರಿಯಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದೇ ಒಂದು ದೊಡ್ಡ ದುಷ್ಟ ಹುನ್ನಾರವಾಗಿದೆ. ಕರ್ನಾಟಕವನ್ನು ವಲಸೆ ಬರುತ್ತಿರುವ ಹಿಂದಿ ಭಾಷಿಕರಿಗಾಗಿ ‘ಸುರಕ್ಷಿತ ಸ್ವರ್ಗ’ವನ್ನಾಗಿಸುವ ದೂರಗಾಮಿ ಉದ್ದೇಶಗಳು ಹಿಂದಿ ಮಾಫಿಯಾಗೆ ಇದೆ. ಅದರ ಭಾಗವಾಗಿಯೇ ರಾಜ್ಯಪಾಲರು ಈ ಪತ್ರ ಬರೆದಿದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದರು.
“ಕರ್ನಾಟಕದ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ರಾಜ್ಯ ಸರ್ಕಾರವನ್ನು ಇದಕ್ಕಾಗಿಯೇ ನಾವು ಆಯ್ಕೆ ಮಾಡಿ ಕಳಿಸಿದ್ದೇವೆ. ಇದನ್ನು ಪ್ರಶ್ನಿಸಲು ರಾಜ್ಯಪಾಲರು ಯಾರು? ಅವರಿಗೆ ಸಂವಿಧಾನ ಈ ಅವಕಾಶ ನೀಡಿಲ್ಲ. ಹಿಂದಿ ಮಾಫಿಯಾ ಎಷ್ಟು ಬಲಶಾಲಿಯಾಗಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಹುತ್ತದ ಒಳಗೆ ಇನ್ನೆಷ್ಟು ಹಾವುಗಳು ಇವೆಯೋ ಗೊತ್ತಿಲ್ಲ. ಎಲ್ಲವೂ ಹೊರಬರಲಿ ಎಂದು ನಾವು ಕಾಯುತ್ತಿದ್ದೇವೆ” ಎಂದರು.
“ರಾಜ್ಯಪಾಲರ ಈ ಪತ್ರವನ್ನು ರಾಜ್ಯ ಸರ್ಕಾರ ಕಸದ ಬುಟ್ಟಿಗೆ ಎಸೆಯಬೇಕು. ಕನ್ನಡಿಗರ ಹಿತದೃಷ್ಟಿಗೆ ವಿರುದ್ಧವಾಗಿ ಯಾರೇ ಏನೇ ಹೇಳಿದರೂ ಅದನ್ನು ರಾಜ್ಯ ಸರ್ಕಾರ ಪರಿಗಣಿಸಬೇಕಿಲ್ಲ. ನಾವು ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿ ನಮ್ಮನ್ನು ಆಳಲು ಯತ್ನಿಸುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ನಮ್ಮ ಪ್ರಾಣ ಹೋದರೂ ನಮ್ಮ ನೆಲದ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತೇವೆ” ಎಂದು ಕಿಡಿ ಕಾರಿದರು.
“ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯ ನಿರ್ಧಾರ ಸರ್ಕಾರ ಕೈಗೊಂಡಿದೆ. ಇದನ್ನು ಬದಲಿಸುವ ಪ್ರಯತ್ನ ಯಾರೇ ಮಾಡಿದರೂ ರಕ್ತಕ್ರಾಂತಿಯಾಗುತ್ತದೆ. ರಾಜ್ಯಪಾಲ ಗೆಹ್ಲೋಟ್ ಹಿಂದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಲ್ಲೆಲ್ಲಾ ತೃತೀಯ ಭಾಷೆಯಾಗಿ ಕನ್ನಡ ಕಲಿಸಲು ತಾಕೀತು ಮಾಡಲಿ. ಅಷ್ಟೇಕೆ ಅವರ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಈಗಲೂ ಎರಡೇ ಭಾಷೆಗಳನ್ನು ಕಲಿಸಲಾಗುತ್ತಿದೆ. ಮೂರನೇ ಭಾಷೆಯನ್ನಾಗಿ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಅಲ್ಲಿನ ಸರ್ಕಾರದ ಮೇಲೆ ಅವರು ಒತ್ತಡ ಹೇರಲಿ. ಅದು ಸಾಧ್ಯವಿಲ್ಲದಿದ್ದರೆ ಕನ್ನಡಿಗರ ಮೇಲೆ ಯಾಕೆ ಹಿಂದಿ ಹೇರಲು ಯತ್ನಿಸುತ್ತಾರೆ. ಇಂಥ ನಾಡದ್ರೋಹಿ ರಾಜ್ಯಪಾಲ ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಯಿಸಿಕೊಳ್ಳಲಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರವೇ ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ, ರಾಜ್ಯ ಸಂ, ಕಾರ್ಯದರ್ಶಿ ಸತೀಶ್ ಗೌಡ ಮುದಿಗೌಡ್ರ, ಜಿಲ್ಲಾ ಉಪಾಧ್ಯಕ್ಷರು ನಂದೀಶ್ ಗೊಡ್ಡೆಮ್ಮಿ, ಹಾವೇರಿ ತಾಲೂಕ ಅಧ್ಯಕ್ಷ ಹಾಲೇಶ್ ಹಾಲಣ್ಣನವರ್, ನಾಗರಾಜ್ ಪೂಜಾರ, ರಮೇಶ್ ಅರಗೊಳ, ಮಾರುತಿ ಪೂಜಾರ, ಹಸನಸಾಬ ಹತ್ತಿಮತ್ತೂರ, ಕೊಟ್ರೇಶ್ ಗುತ್ತುರ, ಚನ್ನಪ್ಪ ಹೊನ್ನಮ್ಮನವರ, ಶಿವಾನಂದ ಪೂಜಾರ, ರಾಮಣ್ಣ ಅಗಸರ, ಸತ್ಯವತಿ ಕಡೇರ, ಈರಮ್ಮ ಕಾಡಸಾಲಿ, ಗೌಸಪಾಕ್ ಬಾಲೆಬಾಯಿ, ಫಕ್ರುದ್ಧೀನ ಅಂಗಡಿಕಾರ, ಕರಬಸ್ಸು ಕುರಬಗೇರಿ, ಕುಮಾರ ಕುಪ್ಪೆಲ್ಲೂರು, ಯಲ್ಲಪ್ಪ ಪೊಟೇರ್, ಪ್ರವೀಣ್ ಗೌಡ್ರ, ಹರೀಶ್ ಕೋಳೆಪ್ಪನವರ, ಇನ್ನೂ ಹಲವಾರು ಕಾರ್ಯಕರ್ತರು ಹಾಜರಿದ್ದರು.




