ಭಾರತದಾದ್ಯಂತ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಅಪಘಾತಗಳಿಂದ ಸಂಭವಿಸುವ ಮರಣ ಪ್ರಮಾಣವನ್ನು ತಡೆಗಟ್ಟಲು ‘ರಾಷ್ಟ್ರೀಯ ಹೆದ್ದಾರಿ ಗಸ್ತು ಪಡೆ’ ರಚಿಸುವಂತೆ ಸರ್ಕಾರದ ಎದುರು ಸಂಸದೀಯ ಸಮಿತಿ ಪ್ರಸ್ತಾಪಿಸಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಮಾರಣಾಂತಿಕ ಅಪಘಾತಗಳ ಸಂಖ್ಯೆ ಆತಂಕಕಾರಿಯಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮೋಟಾರು ಚಾಲಕರಲ್ಲಿ ಉತ್ತಮ ಸಂಚಾರ ಶಿಸ್ತು ಮೂಡಿಸಲು, ಅಪಘಾತಗಳನ್ನು ಕಡಿಮೆ ಮಾಡಲು ಹಾಗೂ ಹೆದ್ದಾರಿ ಆಸ್ತಿಗಳನ್ನು ರಕ್ಷಿಸಲು ರೈಲ್ವೆ ರಕ್ಷಣಾ ಪಡೆಯ (RPF) ಮಾದರಿಯಲ್ಲೇ ಪ್ರತ್ಯೇಕ ಪಡೆಯನ್ನು ರಚಿಸಬೇಕೆಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (MoRTH) ಸಮಿತಿ ಒತ್ತಾಯಿಸಿದೆ.
ಹೆದ್ದಾರಿ ಸಚಿವಾಲಯದ ಸಾರಿಗೆ ಸಂಶೋಧನಾ ವಿಭಾಗದ ಅಂಕಿಅಂಶಗಳ ಪ್ರಕಾರ, 2024ರಲ್ಲಿ ದೇಶಾದ್ಯಂತ ಸುಮಾರು 4.73 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು, 1.70 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ರಾಷ್ಟ್ರೀಯ ಹೆದ್ದಾರಿಗಳಲ್ಲೇ 52,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಅಂಕಿಅಂಶಗಳು ಕಳವಳಕಾರಿ ಸಂಗತಿಯಾಗಿವೆ ಎಂದು ಸಮಿತಿ ಹೇಳಿದೆ.
ಇತ್ತೀಚೆಗೆ, ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಅದರಲ್ಲಿ, “ರೈಲ್ವೆ ಜಾಲದಲ್ಲಿ ಆಸ್ತಿ ರಕ್ಷಣೆ ಮತ್ತು ಪ್ರಯಾಣಿಕರ ಸುರಕ್ಷತೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆರ್‌ಪಿಎಫ್ ಮಾದರಿಯಲ್ಲೇ ರಾಷ್ಟ್ರೀಯ ಹೆದ್ದಾರಿ ಸುರಕ್ಷತಾ ಗಸ್ತು ಪಡೆಯನ್ನು ಸ್ಥಾಪಿಸುವ ಸಾಧ್ಯತೆಯನ್ನು ಸಚಿವಾಲಯವು ಪರಿಶೀಲಿಸಬೇಕು. ಆರಂಭಿಕ ಹಂತದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಕಾರಿಡಾರ್‌ಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಪ್ರಾಯೋಗಿಕವಾಗಿ ಈ ಪಡೆಯನ್ನು ನಿಯೋಜಿಸಬೇಕು. ಅದರಿಂದ, ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ‘ಗೋಲ್ಡರ್ ಹವರ್’ ಅವಧಿಯಲ್ಲಿ ತುರ್ತು ಸ್ಪಂದನೆ ನೀಡಲು ಮತ್ತು ವೇಗದ ಮಿತಿ ಹಾಗೂ ಲೇನ್ ಶಿಸ್ತನ್ನು ಜಾರಿಗೊಳಿಸಲು ಸಹಕಾರಿಯಾಗುತ್ತದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಚುನಾವಣೆ 2026 | ಹಿಮಂತ, ಮಮತಾ, ಸ್ಟಾಲಿನ್, ಪಿಣರಾಯಿ – ಯಾರಿಗೆ ಉಳಿಯಲಿದೆ ಅಧಿಕಾರ?
ಸಂಜಯ್ ಝಾ ನೇತೃತ್ವದ ಈ ಸಂಸದೀಯ ಸಮಿತಿಯು, “ಪ್ರಸ್ತುತ ಹೆದ್ದಾರಿ ಸುರಕ್ಷತೆಗಾಗಿ ರಾಜ್ಯ ಪೊಲೀಸ್ ಪಡೆಗಳ ಮೇಲಿನ ಅವಲಂಬನೆಯು ಸಾಕಾಗುತ್ತಿಲ್ಲ. ರಾಜ್ಯ ಪೊಲೀಸರಿಗೆ ಹೆದ್ದಾರಿ ಸುರಕ್ಷತೆಯ ಹೊರತಾಗಿ ಹತ್ತಾರು ಜವಾಬ್ದಾರಿಗಳಿರುವುದರಿಂದ, ವಿಸ್ತಾರವಾಗುತ್ತಿರುವ ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲದ ನಿರ್ವಹಣೆಗೆ ವಿಶೇಷ ಸಾಂಸ್ಥಿಕ ಕಾರ್ಯವಿಧಾನದ ಅಗತ್ಯವಿದೆ. ಈ ವಿಶೇಷ ಪಡೆಯು ಹೆದ್ದಾರಿ ಒತ್ತುವರಿ ತಡೆಗಟ್ಟಲು ಮತ್ತು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಡಿಯಲ್ಲಿ ಜಾರಿಗೆ ಬರುತ್ತಿರುವ ಡಿಜಿಟಲ್ ವ್ಯವಸ್ಥೆಗಳಿಗೆ ಪೂರಕವಾಗಿ ಕೆಲಸ ಮಾಡಲು ನೆರವಾಗಲಿದೆ” ಎಂದು ಹೇಳಿದೆ.
ರಸ್ತೆ ಸುರಕ್ಷತೆಯ ಪ್ರಮುಖ ಸವಾಲನ್ನು ಎತ್ತಿ ತೋರಿಸಿರುವ ಸಮಿತಿಯು, “ಮಿತಿಮೀರಿದ ವೇಗವೇ ಅಪಘಾತಗಳಿಗೆ ಪ್ರಮುಖ ಕಾರಣ. 2023ರ ವರದಿಯ ಪ್ರಕಾರ, ಆ ವರ್ಷ 68.4%ರಷ್ಟು ಅಪಘಾತಗಳು ವೇಗದ ಮಿತಿ ಮೀರಿದ ಕಾರಣಕ್ಕೇ ಸಂಭವಿಸಿವೆ. ಇದನ್ನು ತಡೆಗಟ್ಟಲು ಹಂತ ಹಂತವಾಗಿ ಸರಾಸರಿ ವೇಗವನ್ನು ಅಳೆಯುವ ಕ್ಯಾಮೆರಾ ಸಿಸ್ಟಮ್‌ಗಳನ್ನು ಅಳವಡಿಸಲು ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಯಂತಹ ಅಪಘಾತ ಪೀಡಿತ ಪ್ರದೇಶಗಳಲ್ಲಿ ‘ವೆಹಿಕಲ್-ಟು-ವೆಹಿಕಲ್’ (V2V) ಸಂವಹನ ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು. ವಿ2ವಿ ತಂತ್ರಜ್ಞಾನವು ವಾಹನಗಳ ನಡುವೆ ವೇಗ, ಸ್ಥಾನ ಹಾಗೂ ಬ್ರೇಕಿಂಗ್ ಸ್ಥಿತಿಯ ಬಗ್ಗೆ ನೈಜ ಸಮಯದ ಡೇಟಾವನ್ನು ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಸರಣಿ ಅಪಘಾತಗಳನ್ನು ತಪ್ಪಿಸಬಹುದು” ಎಂದು ಸಮಿತಿ ಹೇಳಿದೆ.



