ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಪಟ್ಟಂತೆ, ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿಯ ಬಿ.ಬಿ. ಮಾಮ್ಲದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಕೇಂದ್ರದಲ್ಲಿ ಅಕ್ಟೋಬರ 4ರಂದು ಅಭ್ಯರ್ಥಿ ಶಂಕರ ಬನ್ನೂರು, ಮೊಬೈಲ್ ಬಳಸಿ ಅಕ್ರಮ ಎಸಗಿದ್ದ ಬಗ್ಗೆ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಶಂಕರ ಅವರನ್ನು ಪೊಲೀಸರು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
“ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ಶೋಧ ಹಾಗೂ ಭದ್ರತೆ ಕೆಲಸಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆಲಸದಲ್ಲಿ ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ಕಾನ್‌ಸ್ಟೆಬಲ್‌ಗಳಾದ ಶಿಗ್ಗಾವಿ ಠಾಣೆಯ ಸಿ.ಎ. ಮರೆಣ್ಣನವರ, ಪಿ.ಸಿ. ಹೊನ್ನಾಳಿ, ಸವಣೂರು ಠಾಣೆಯ ಆರ್.ಎಂ. ಮಣಕವಾಡ ಹಾಗೂ ಆಡೂರು ಠಾಣೆಯ ಎಸ್.ಆರ್. ನಾಗನೂರು ಅವರನ್ನು ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಿಗ್ಗಾವಿ ಠಾಣೆಯ ಇನ್‌ಸ್ಪೆಕ್ಟರ್ ವಿ.ಎಸ್. ಹಿರೇಮಠ ಹಾಗೂ ಪಿಎಸ್‌ಐ ಉಮಾ ಪಾಟೀಲ ಅವರಿಗೂ ಭದ್ರತೆ ಕೆಲಸದ ಹೊಣೆ ಇತ್ತು. ಅವರು ಕರ್ತವ್ಯದಲ್ಲಿ ಲೋಪ ಎಸಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ವಿರುದ್ಧವೂ ಶಿಸ್ತುಕ್ರಮಕ್ಕಾಗಿ ಶಿಫಾರಸು ಮಾಡಲಾಗಿದೆ’ ಎಂದು ಹೇಳಿದರು.




