2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹4,270 ದರ ಘೋಷಿಸಿದೆ. ಇದರಲ್ಲಿ ₹3,770 ಮೊದಲ ಕಂತಾಗಿ ಪಾವತಿಸಲಾಗುವುದು ಎಂದು ಕಾರ್ಖಾನೆಯ ಮಾರ್ಗದರ್ಶಕ ಹಾಗೂ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕ್ಕರೆ ಇಳುವರಿ ಶೇ.11.50 ಅಥವಾ ಅದಕ್ಕಿಂತ ಹೆಚ್ಚಾದರೆ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ₹100 ನೀಡಲಾಗುವುದು. ಅಲ್ಲದೆ, ಸಕ್ಕರೆಯ ಮಾರಾಟ ದರಕ್ಕೆ ಅನುಗುಣವಾಗಿ ಪ್ರತಿ ಟನ್‌ಗೆ ₹200ರಿಂದ ₹600ರವರೆಗೆ ಹೆಚ್ಚುವರಿ ಮೊತ್ತವನ್ನು ಮುಂದಿನ ಹಂಗಾಮು ಆರಂಭಕ್ಕೂ ಮುನ್ನ ಪಾವತಿಸಲಾಗುವುದು ಎಂದರು.
ಕಾರ್ಖಾನೆಯ ಅಧ್ಯಕ್ಷ ಜಯಕುಮಾರ ಖೋತೆ ಮಾತನಾಡಿ, ರೈತರು ತಾವು ಬೆಳೆದ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಪೂರೈಸದೆ ಹಾಲಸಿದ್ಧನಾಥ ಕಾರ್ಖಾನೆಗೆ ನೀಡುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿ ಹಾಗೂ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.




