ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಲಕ್ಷ್ಮೀಪುರ-ಬಿಡಾರದ ವಿಶ್ವ ಮಿತ್ರ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಸ್ವಯಂಪ್ರೇರಿತರಾಗಿ ರಸ್ತೆಗಿಳಿದು, ತಮ್ಮ ಸ್ವಂತ ಖರ್ಚಿನಲ್ಲಿ ಶ್ರಮದಾನ ಮಾಡಿ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಕೇಂದ್ರವನ್ನು ಸಂಪರ್ಕಿಸುವ ಈ ರಸ್ತೆಯು ಸಾರ್ವಜನಿಕರ ನಿತ್ಯದ ಓಡಾಟಕ್ಕೆ ಅತ್ಯಂತ ಅವಶ್ಯಕವಾಗಿದೆ. ದಿನವೂ ನೂರಾರು ವಾಹನಗಳು ಇಲ್ಲಿಂದಲೇ ಸಂಚರಿಸುತ್ತವೆ. ಆದರೆ ರಸ್ತೆಯ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದರಿಂದ ಶ್ರಮದಾನದ ಮೂಲಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಹಾವೇರಿ ಜಿಲ್ಲಾ ಯಾದವರ ಸಂಘದ ನಿರ್ದೇಶಕ ಬಾಬಣ್ಣ ಗೊಲ್ಲರ ತಿಳಿಸಿದ್ದಾರೆ.
“ದಾಸನಕೊಪ್ಪ ಮೂಲಕ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕನ್ನು ಸಂಪರ್ಕಿಸುವ ಸುಮಾರು 2 ಕಿ.ಮೀ. ಈ ರಸ್ತೆಯು ಸ್ಥಳೀಯರಿಗೆ ಅತಿ ಸಮೀಪದ ಮಾರ್ಗವಾಗಿದೆ. ಆದರೆ, ದೀರ್ಘಕಾಲದಿಂದ ಸೂಕ್ತ ನಿರ್ವಹಣೆ ಇಲ್ಲದೆ ಹಾಗೂ ಮಳೆಯ ಕಾರಣದಿಂದ ರಸ್ತೆಯುದ್ದಕ್ಕೂ ಬೃಹತ್ ಹೊಂಡ-ಗುಂಡಿಗಳು ಬಿದ್ದಿದ್ದವು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಸಂಚರಿಸಲು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ರಸ್ತೆಯ ಸರಿಪಡಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ” ಎಂದು ಹೇಳಿದರು.
ಈ ಶ್ರಮದಾನದಲ್ಲಿ ಪ್ರಮುಖರಾದ ಮಾರುತಿ ಪುರ್ಲಿ, ಮಾರುತಿ ಕಮಾಟಿ, ಬಸವರಾಜ ಹಿರೂರು, ಬಂಗಾರಪ್ಪ ಹೊನ್ನಳ್ಳಿ, ಆನಂದ ನೆಗೂರು, ಸಿದ್ದಪ್ಪ ಆಲದಕಟ್ಟಿ, ಸತೀಶ ಅಣಜಿ, ಬಸವರಾಜ ಆಲೂರು, ಫಕಿರೇಶ ಗೌಡಳ್ಳಿ ಸೇರಿದಂತೆ ನೂರಾರು ಯುವಕರು ಭಾಗವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.




