ಜಿಲ್ಲಾ ಪೊಲೀಸ್ ಕಚೇರಿಯ ಅಪರಾಧ ದಾಖಲೆ ವಿಭಾಗ (ಡಿಸಿಆರ್‌ಬಿ)ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಬಸವರಾಜ ಹೇರೂರ ಅವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
2014ನೇ ಬ್ಯಾಚ್‌ನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಬಸವರಾಜ ಹೇರೂರ ಅವರು ನಗರದ ಗಂಗಾ ನಗರದಲ್ಲಿರುವ ತಮ್ಮ ಮನೆಯಲ್ಲಿ ಸೀರೆಯಿಂದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕಳೆದ ಎರಡು ವರ್ಷಗಳಿಂದ ಕಲಬುರಗಿ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್‌ಬಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಾಹಿತಿಯ ಪ್ರಕಾರ, ಆತ್ಮಹತ್ಯೆಗೂ ಮುನ್ನ ಬಸವರಾಜ ಅವರು ತಮ್ಮ ಕೆಲ ಆಪ್ತ ಸ್ನೇಹಿತರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಬಳಿಕ ಸ್ನೇಹಿತರು ಕುಟುಂಬದವರಿಗೆ ಮಾಹಿತಿ ನೀಡಿದ್ದು, ಮನೆಯವರು ತಕ್ಷಣ ಕೊಠಡಿಯ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ರಾಘವೇಂದ್ರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಬಸವರಾಜ ಹೇರೂರ ಅವರ ತಂದೆ ನಿವೃತ್ತ ಸರ್ಕಾರಿ ನೌಕರರಾಗಿದ್ದು, ಪತ್ನಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಮೂವರು ಪುತ್ರಿಯರಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಕುಟುಂಬಸ್ಥರು, ಬಸವರಾಜ ಅವರಿಗೆ ಕೆಲ ದಿನಗಳಿಂದ ಹೊಟ್ಟೆ ನೋವಿನ ಸಮಸ್ಯೆ ಇತ್ತು. ಆದರೆ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಕೆಲಸದ ಒತ್ತಡ ಅಥವಾ ಬೇರೆ ಯಾವುದೇ ಸಮಸ್ಯೆ ಬಗ್ಗೆ ಅವರು ಮನೆಯಲ್ಲಿ ಪ್ರಸ್ತಾಪಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ನೀಟ್ ಮರು ಪರೀಕ್ಷೆಗೆ ಸಕಲ ಸಿದ್ಧತೆ; ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕಟ್ಟುನಿಟ್ಟಿನ ಸೂಚನೆ
ಪೊಲೀಸ್ ಅಧಿಕಾರಿಯ ಅಕಾಲಿಕ ನಿಧನದಿಂದ ಪೊಲೀಸ್ ಇಲಾಖೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಸಾವಿನ ನಿಖರ ಕಾರಣ ತನಿಖೆಯ ಬಳಿಕವೇ ತಿಳಿಯಬೇಕಿದೆ.





