ಗುಲಬರ್ಗಾ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರು ಕಳೆದ 24 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಕಲಬುರಗಿ ಜಿಲ್ಲಾ ಸಮಿತಿಯು ಬೆಂಬಲ ಸೂಚಿಸಿದೆ.
ನೌಕರರ ಹೋರಾಟವು ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹದ ಹಂತ ತಲುಪಿದ್ದು, ‘ವೇತನ ಹೆಚ್ಚಳ’ ಹಾಗೂ ‘ಮಧ್ಯವರ್ತಿಗಳಿಲ್ಲದೆ ವಿಶ್ವವಿದ್ಯಾಲಯವೇ ನೇರವಾಗಿ ಸಂಚಿತ ವೇತನ ಪಾವತಿಸಬೇಕು’ ಎಂಬ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಎಂದು ಸಂಘಟನೆ ತಿಳಿಸಿದೆ. ನೌಕರರ ಬೇಡಿಕೆಗಳನ್ನು ವಿಶ್ವವಿದ್ಯಾಲಯ ಆಡಳಿತ ನಿರ್ಲಕ್ಷಿಸುತ್ತಿರುವುದು ಕಾರ್ಮಿಕ ವಿರೋಧಿ ಧೋರಣೆಯಾಗಿದೆ ಎಂದು ಎಐಕೆಕೆಎಂಎಸ್ ಜಿಲ್ಲಾ ಸಮಿತಿಯು ಖಂಡಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್. ಬಿ. ಅವರು ಧರಣಿ ನಿರತ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, “ಕಾರ್ಮಿಕರು ಮತ್ತು ರೈತರ ಒಗ್ಗಟ್ಟು ಇನ್ನಷ್ಟು ಬಲವಾಗಬೇಕು. ಈ ಹೋರಾಟದಲ್ಲಿ ಎಐಕೆಕೆಎಂಎಸ್ ಸಂಪೂರ್ಣವಾಗಿ ನಿಮ್ಮೊಂದಿಗಿದೆ. ಹೋರಾಟವನ್ನು ರಾಜೀರಹಿತವಾಗಿ ಮುಂದುವರಿಸಿ” ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ನೂತನ ಜಿಲ್ಲಾಧಿಕಾರಿಯಾಗಿ ರಾಹುಲ್ ಪಾಂಡೈ ಅಧಿಕಾರ ಸ್ವೀಕಾರ
This video cannot be played in your browser. Open the video directly

ಸರ್ಕಾರ ಹಾಗೂ ವಿಶ್ವವಿದ್ಯಾಲಯ ಆಡಳಿತವು ಗುತ್ತಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಎಐಕೆಕೆಎಂಎಸ್ ಗುತ್ತಿಗೆ ಕಾರ್ಮಿಕರ ಪರವಾಗಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.





