ತಳವಾರ ಸಮುದಾಯದ ಅರ್ಹ ಜನರಿಗೆ ಪರಿಶಿಷ್ಟ ಪಂಗಡ (ಎಸ್.ಟಿ.) ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಸಂತೋಷ ತಳವಾರ ಮಾತನಾಡಿ, ‘ತಳವಾರ ಸಮುದಾಯಕ್ಕೆ ಸೇರಿದವರ ಶಾಲಾ ದಾಖಲಾತಿ, ಗ್ರಾಮ ಲೆಕ್ಕಿಗ ಹಾಗೂ ಕಂದಾಯ ಇಲಾಖೆಯ ಪಂಚನಾಮೆ ವರದಿಗಳಲ್ಲಿ ಸಮುದಾಯದ ವಿವರಗಳು ಸ್ಪಷ್ಟವಾಗಿದ್ದರೂ, ಅಫಜಲಪುರ ತಾಲೂಕಿನ ಅನೇಕ ಅರ್ಹರಿಗೆ ಇನ್ನೂ ಎಸ್.ಟಿ. ಜಾತಿ ಪ್ರಮಾಣ ಪತ್ರಗಳು ದೊರೆಯುತ್ತಿಲ್ಲ’ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಮೇ 7ರಂದು ಜಿಲ್ಲೆಯ ಎಲ್ಲಾ ಗ್ರೇಡ್-2 ತಹಶೀಲ್ದಾರರಿಗೆ ತಳವಾರ ಸಮುದಾಯದವರಿಗೆ ಎಸ್.ಟಿ. ಜಾತಿ ಪ್ರಮಾಣ ಪತ್ರ ವಿತರಿಸುವ ಕುರಿತು ನಿರ್ದೇಶನ ನೀಡಿದ್ದರೂ, ಅಫಜಲಪುರ ತಾಲೂಕಿನಲ್ಲಿ ಅದರ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿ ಹೋರಾಟ ನಡೆಸಿದ್ದರೂ ಸಮಸ್ಯೆ ಬಗೆಹರಿಯದಿರುವುದರಿಂದ ಸಮುದಾಯದ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಸರ್ಕಾರದ ಆದೇಶ ಹಾಗೂ ಕಾನೂನು ನಿಯಮಗಳ ಪ್ರಕಾರ ಅರ್ಹರಿಗೆ ತಕ್ಷಣ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಗುಲಬರ್ಗಾ ವಿ ವಿ ಗುತ್ತಿಗೆ ನೌಕರರ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ
ಈ ಸಂದರ್ಭದಲ್ಲಿ ದೇಸಾಯಿ ಕಲ್ಲೂರ್, ರಾಮು ಉಮರ್ಗಿ, ಬೋಗೆಶ್ ಜಮಾದಾರ್, ಗುರುನಾಥ್ ಹಾವನೂರ್ ಸೇರಿದಂತೆ ಇನ್ನಿತರರು ಇದ್ದರು.





