ಸ್ನೇಹಿತನ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಟಿದ್ದ ಯುವಕ ಸೇರಿದಂತೆ ಮೂವರು ಸ್ನೇಹಿತರ ಬದುಕು ರಸ್ತೆ ಅಪಘಾತದಲ್ಲಿ ದುರಂತವಾಗಿ ಅಂತ್ಯಗೊಂಡಿದೆ. ಆಳಂದ ಪಟ್ಟಣದ ಹಳೆ ಆರ್‌ಟಿಒ ಕಚೇರಿ ಸಮೀಪ ಬುಧವಾರ ರಾತ್ರಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಮೂವರು ಯುವಕರು ಮೃತಪಟ್ಟಿದ್ದಾರೆ.
ಶರಣನಗರದ ನಿವಾಸಿಗಳಾದ ಶ್ರೀಕಾಂತ ದಯಾನಂದ ಜಗದೆ (19), ಗುರುನಾಥ ಮಲ್ಲಿನಾಥ ಮಾಶಾಳ (25) ಹಾಗೂ ಶಶಿಕಾಂತ ಬಸವರಾಜ ಇಟಾಮಳೆ (30) ಮೃತ ದುರ್ದೈವಿಗಳು.
ಕೆಲಸ ಮುಗಿಸಿ ಮನೆಗೆ ಮರಳಿದ್ದ ಶ್ರೀಕಾಂತ, ಸ್ನೇಹಿತ ದರ್ಶನನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ವಿಂಡ್ ಕಂಪನಿಯ ಕಚೇರಿಗೆ ಕೆಲವು ದಾಖಲೆಗಳನ್ನು ತಲುಪಿಸುವುದಾಗಿ ಮನೆಯವರಿಗೆ ತಿಳಿಸಿ ಹೊರಟಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ತಾಯಿ ಬಸಮ್ಮ ಊಟಕ್ಕೆ ಮನೆಗೆ ಬರುವಂತೆ ದೂರವಾಣಿ ಮೂಲಕ ಕರೆ ಮಾಡಿದಾಗ, ಹೊರಗಡೆಯೇ ಊಟ ಮಾಡುವುದಾಗಿ ಹೇಳಿದ್ದರು. ಆದರೆ, ಅದೇ ಅವರ ಕೊನೆಯ ಮಾತಾಗಬಹುದು ಎಂದು ಕುಟುಂಬದವರು ಊಹಿಸಿರಲಿಲ್ಲ.
ರಾತ್ರಿ ಸುಮಾರು 10.40ರ ವೇಳೆಗೆ ಮೂವರು ಯುವಕರು ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮೂವರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ನಡೆದ ಬಳಿಕ ರಾತ್ರಿ 11.15ರ ಸುಮಾರಿಗೆ ಪಕ್ಕದ ಮನೆಯ ಮಹೇಶ ಪಾಟೀಲ್ ಅವರು ಶ್ರೀಕಾಂತನ ತಂದೆ ದಯಾನಂದ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ದಯಾನಂದ ಅವರು ಸಹೋದರ ರಾಮಚಂದ್ರ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಶ್ರೀಕಾಂತನ ತಲೆಗೆ ಗಂಭೀರ ಗಾಯಗಳಾಗಿದ್ದು, ಬಲಗೈ ಹಾಗೂ ಬಲಗಾಲು ಮುರಿದಿದ್ದವು. ಗುರುನಾಥ ಅವರ ತೊಡೆಗೆ ತೀವ್ರ ಪೆಟ್ಟಾಗಿದ್ದು, ಬಲಗಾಲು ಮುರಿದಿತ್ತು. ಶಶಿಕಾಂತ ಅವರ ಬಲಗಾಲು ಮುರಿದು, ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು.
ಸ್ಥಳೀಯರ ನೆರವಿನಿಂದ ಮೂವರನ್ನೂ ಆಳಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಶ್ರೀಕಾಂತ ಮತ್ತು ಗುರುನಾಥ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಶಶಿಕಾಂತ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ರವಾನಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | 11.32 ಟನ್ ಪಡಿತರ ಅಕ್ಕಿ ಜಪ್ತಿ; ಇಬ್ಬರ ವಿರುದ್ಧ ಪ್ರಕರಣ ದಾಖಲು
ಈ ಘಟನೆಗೆ ಸಂಬಂಧಿಸಿದಂತೆ ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




