ನಗರದ ವಾರ್ಡ್ ನಂ.30ರ ಮಹಾತ್ಮ ಬಸವೇಶ್ವರ ಕಾಲೋನಿಯಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಕರವೇ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ್ ಬಾಲಾಜಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ‘ಸುಮಾರು 55 ವರ್ಷಗಳಷ್ಟು ಹಳೆಯದಾದ ಕಾಲೋನಿಯಲ್ಲಿ ಇಂದಿಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು, ಅದೂ ಕೆಲವೇ ಮನೆಗಳಿಗೆ ತಲುಪುತ್ತಿದೆ. ಉಳಿದ ನಿವಾಸಿಗಳು ಖಾಸಗಿ ಕೊಳವೆಬಾವಿಗಳನ್ನು ಅವಲಂಬಿಸಿದ್ದಾರೆ. ಈ ವರ್ಷ ಮಳೆಯ ಕೊರತೆಯಿಂದ ಕೊಳವೆಬಾವಿಗಳು ಬತ್ತಿಹೋಗಿದ್ದು, ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ’ ಎಂದು ದೂರಿದರು.
‘ಕಳೆದ ಎರಡು ವರ್ಷಗಳಿಂದ 24X7 ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಲೋನಿಯ ನಿವಾಸಿಗಳು ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದರೂ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ನೀರಿಗಾಗಿ ನಿವಾಸಿಗಳು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ, ಕಾಲೋನಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆಯೂ ಹದಗೆಟ್ಟಿದೆ. ವಾರದಲ್ಲಿ ಒಂದೆರಡು ಬಾರಿ ಮಾತ್ರ ಬರುವ ಕಸ ಸಂಗ್ರಹ ವಾಹನ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಮನೆಗಳ ಮುಂದೆ ದಿನಗಟ್ಟಲೆ ಕಸ ಸಂಗ್ರಹವಾಗುತ್ತಿದೆ. ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಹಾಗೂ ವಯೋವೃದ್ಧರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ನಾಯಿಗಳಿಂದ ತಪ್ಪಿಸಿಕೊಳ್ಳುವಾಗ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ’ ಎಂದು ತಿಳಿಸಿದರು.
‘ಕೂಡಲೇ ಕಾಲೋನಿಗೆ ಸಮರ್ಪಕ ಕುಡಿಯುವ ನೀರು ಪೂರೈಸಬೇಕು, ಬಾಕಿ ಉಳಿದಿರುವ 24X7 ನೀರು ಸರಬರಾಜು ಕಾಮಗಾರಿ ಪೂರ್ಣಗೊಳಿಸಬೇಕು, ನಿಯಮಿತ ಕಸ ವಿಲೇವಾರಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಮಸ್ಯೆಗಳನ್ನು ಶೀಘ್ರ ಬಗೆಹರಿಸದಿದ್ದರೆ ಕಾಲೋನಿಯ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ನೋಟ್‌ಬುಕ್, ಪೆನ್ನು ವಿತರಿಸುವ ಮೂಲಕ ಜನ್ಮದಿನವನ್ನು ಆಚರಿಸಿಕೊಂಡ ಸ್ನೇಹ ಹಡಪದ
ಈ ಸಂದರ್ಭದಲ್ಲಿ ಪೂರ್ಣಿಮಾ ರಾಘವೇಂದ್ರ ಕುಳಗೇರಿ, ದಿವ್ಯಾ ಪಡ್ನಾವೀಸ್, ಸಂಗೀತಾ ಬುರ್ಲಿ, ವಿದ್ಯಾವತಿ ಶೆಟ್ಟಿ, ಶೋಭಾ ಗಡ್ಡದ, ಜ್ಯೋತಿ ಕಾಶೀನಾಥ, ಲಕ್ಷ್ಮೀ ಖಾನಾಪೂರ, ಭಾಗ್ಯಶ್ರೀ ಸೂರ್ಯವಂಶಿ, ಪ್ರಾಣೇಶ ಮಸ್ಕಿ, ಸುಮಂಗಲ ಯಾದಗಿರಿ, ಜಗದೇವಿ ನೂಲ, ಮಹಾನಂದ ಹಾಗರಗಿ ಸೇರಿದಂತೆ ಹಲವರು ಇದ್ದರು.




