ವಿವಾಹಿತ ಮಹಿಳೆಯೊಬ್ಬರ ಮನೆಗೆ ತಡರಾತ್ರಿ ನುಗ್ಗಿ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಕೇಳಿಬಂದಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಕಲಬುರಗಿಯ ಮಹಿಳಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಉಮರ್ ಕಾಲೋನಿ ನಿವಾಸಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಎಂಎಸ್‌ಕೆ ಮಿಲ್ ಪ್ರದೇಶದ ಗಾಲಿಬ್ ಕಾಲೋನಿ ನಿವಾಸಿ ಪೊಲೀಸ್ ಕಾನ್‌ಸ್ಟೇಬಲ್ ಸೈಯದ್ ತೌಸಿಫ್ ಹುಸೇನ್ (41) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆ ಸಾಮಾಜಿಕ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಕಾನ್‌ಸ್ಟೇಬಲ್ ಪರಿಚಯವಾಗಿದ್ದ ಎನ್ನಲಾಗಿದೆ. 2024ರಿಂದ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ ಆರೋಪಿ, ಸ್ನೇಹ ಬೆಳೆಸುವಂತೆ ಹಾಗೂ ಪ್ರೀತಿಸುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ. ಇದಕ್ಕೆ ಮಹಿಳೆ ಒಪ್ಪದಿದ್ದರೂ ಒತ್ತಡ ಹೇರುತ್ತಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಆಗಸ್ಟ್ 7ರಂದು ರಾತ್ರಿ ಸುಮಾರು 12.30ರ ವೇಳೆಗೆ ಮಹಿಳೆಯ ಮನೆಗೆ ನುಗ್ಗಿದ ಆರೋಪಿ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಅಡುಗೆಮನೆಯಿಂದ ಚಾಕು ತಂದು ಜೀವ ಬೆದರಿಕೆ ಹಾಕಿದ್ದಾನೆ. ನಂತರ ಮಹಿಳೆಯ ಕಾಲು ಹಿಡಿದು ತನ್ನೊಂದಿಗೆ ಸಹಕರಿಸುವಂತೆ ಬೇಡಿಕೊಂಡು, ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ದೌರ್ಜನ್ಯದ ವೇಳೆ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡಿದ್ದು, ಬಳಿಕ ಮಹಿಳೆಯ ಬಟ್ಟೆಗಳನ್ನು ತೆಗೆಸಿ ಒಗೆಯುವಂತೆ ಮಾಡಿದ್ದಾನೆ. ಈ ಮೂಲಕ ಘಟನೆಯ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಲಾರಿ, ಬೈಕ್ ಡಿಕ್ಕಿ; ಮೂವರು ಯುವಕರ ದಾರುಣ ಸಾವು!
ಘಟನೆ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ಮಹಿಳಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಕ್ಕೆ ಸಂಬಂಧಿಸಿದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.




