ಯಡ್ರಾಮಿ ತಾಲೂಕಿನ ಯತ್ನಾಳ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸ್ಮಶಾನಭೂಮಿ ಇಲ್ಲದಿರುವುದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಬುಧವಾರ ಶವವನ್ನು ರಸ್ತೆ ಮೇಲೆ ಇಟ್ಟು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ನಿರ್ದಿಷ್ಟ ಜಾಗ ಇಲ್ಲದ ಕಾರಣ, ಜಮೀನು ಹೊಂದಿರುವವರು ತಮ್ಮ ಜಮೀನಿನಲ್ಲಿ ಶವಸಂಸ್ಕಾರ ಮಾಡುತ್ತಿದ್ದು, ಜಮೀನು ಇಲ್ಲದ ಬಡವರು ಇತರರ ಹೊಲಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಈ ವೇಳೆ ಗ್ರಾಮದ ನಿವಾಸಿ ಚಂದಪ್ಪ ಬಡಿಗೇರ ನಿಧನರಾದ ಹಿನ್ನೆಲೆಯಲ್ಲಿ, ಗ್ರಾಮಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲು ಮುಂದಾದಾಗ ಜಮೀನು ಮಾಲೀಕರು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹವನ್ನು ರಸ್ತೆ ಮೇಲೆ ಇಟ್ಟು ಪ್ರತಿಭಟನೆ ನಡೆಸಿ, ಸ್ಮಶಾನಭೂಮಿಗೆ ತಕ್ಷಣ ಜಾಗ ಮೀಸಲು ಮಾಡುವಂತೆ ಆಗ್ರಹಿಸಿದರು.
ಸ್ಮಶಾನಭೂಮಿ ಇಲ್ಲದ ಕಾರಣ ಯಾರೇ ಮೃತಪಟ್ಟರೂ ಸಂಕಷ್ಟ ಎದುರಾಗುತ್ತಿದೆ. ಈ ಕುರಿತು ಹಲವಾರು ಬಾರಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.
ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಆದರೂ ಸ್ಮಶಾನಭೂಮಿಗೆ ಜಾಗ ನೀಡುವವರೆಗೆ ಅಂತ್ಯಸಂಸ್ಕಾರ ನಡೆಸುವುದಿಲ್ಲವೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಬಳಿಕ ಯಮನಗೌಡ ಮಾಲಿಪಾಟೀಲ ಅವರು ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಸ್ಮಶಾನಭೂಮಿಗೆ ಶೀಘ್ರದಲ್ಲೇ ಜಾಗ ಮೀಸಲು ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಮೃತದೇಹ ಇಟ್ಟು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | “ಮಹಾತ್ಮ ಫುಲೆ ಕ್ರಾಂತಿಜ್ಯೋತಿ ಪ್ರಶಸ್ತಿಗೆ” ಎ ಬಿ ಹೊಸಮನಿ ಆಯ್ಕೆ
ಈ ಸಂದರ್ಭದಲ್ಲಿ ಶರಣಗೌಡ ಪೊಲೀಸ್ ಪಾಟೀಲ, ಬಸವರಾಜಗೌಡ ಗೊಲ್ಲಾಳಪ್ಪ ಕೋಣಸಿರಸಗಿ, ಸೋಮಪ್ಪ ಬಡಗೇರ, ನಿಂಗಪ್ಪ ಮಹಾಂತಪ್ಪ ಕಾಂಬಳೆ, ಕೆಂಚಪ್ಪ ಪೂಜಾರಿ, ದೇವಾನಂದ ಶಿರಗುಂಡ, ಮಹಾಂತಗೌಡ ಸಂಗಪ್ಪ ನಾಗನೂರ, ಭೀಮನಗೌಡ ಶಿವಶರಣಪ್ಪ ಕೂಡಲಿ, ಕರೆಪ್ಪ ಮೇಲಿನಮನಿ, ಮಲ್ಲಿಕಾರ್ಜುನ ದೇಸಾಯಿ, ಶರಣಬಸಪ್ಪ ಯಮನಪ್ಪ ನಕ್ಕೋಡಿ, ಗೊಲ್ಲಾಳಪ್ಪ, ಮಾಂತಪ್ಪ ಶರಣಪ್ಪ ದೊಡಮನಿ, ಈರಪ್ಪ ಸಂಗಪ್ಪ ಬಡಗೇರ, ನಾಗಪ್ಪ ಸೋಮಪ್ಪ ಬಡಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





