ನೀಟ್ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯೊಬ್ಬರು ಕಲಬುರಗಿ ನಗರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ತಂದೆ ಭಾನುವಾರ ತಿಳಿಸಿದ್ದಾರೆ.
ಭಾಗ್ಯಶ್ರೀ (18) ಮೃತ ನೀಟ್ ಅಭ್ಯರ್ಥಿ ಗುರುತಿಸಲಾಗಿದ್ದು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದ ಈಕೆ ಪಿಯುಸಿ ಪರೀಕ್ಷೆಯಲ್ಲಿ ಶೇ.92ರಷ್ಟು ಅಂಕಗಳನ್ನು ಗಳಿಸಿದ್ದುದ್ದಾಗಿ ತಂದೆ ರಾಜಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಮ್ಮ ಕುಟುಂಬದಲ್ಲಿ ಯಾವುದೇ ತೊಂದರೆ ಅಥವಾ ಸಮಸ್ಯೆ ಇರಲಿಲ್ಲ. ನಾವು ಸಂತೋಷದಿಂದ ಬದುಕುತ್ತಿದ್ದೆವು. ಅವಳು(ನೀಟ್‌ನಲ್ಲಿ) ಉತ್ತಮ ಸಾಧನೆ ಮಾಡಿದ್ದಳು, ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಬಹುಶಃ ಅವಳ ಮನಸ್ಸಿನಲ್ಲಿ ನೀಟ್ ಪರೀಕ್ಷೆ ಮತ್ತೆ ಬರೆಯುವ ಬಗ್ಗೆ ಕೆಲವು ಭಾವನೆಗಳು ಇದ್ದಿರಬಹುದು. ನಾನು ಯಾರನ್ನೂ ದೂಷಿಸುವುದಿಲ್ಲ. ಅವಳ ನೋವು ಅಥವಾ ಸಂಕಟ ನಮಗೆ ತಿಳಿದಿಲ್ಲ. ನಾನು ಏನು ಹೇಳಲಿ?” ಎಂದು ರಾಜಶೇಖರ್ ಕಣ್ಣೀರು ಸುರಿಸಿದರು.
ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, “ಆಕೆ ಸಾವಿಗೂ ಮುನ್ನ ಯಾವುದೇ ಡೆತ್ ನೋಟ್ ಬರೆದಿಲ್ಲ ಅಥವಾ ಯಾವುದೇ ಕಾರಣವನ್ನು ನೀಡಿಲ್ಲ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿದ್ದೀರಾ? ರಾಯಚೂರು | ಸಿಡಿಲು ಬಡಿದು ಮೂರು ಎತ್ತು, ಆಕಳು, ಎಮ್ಮೆ ಸಾವು; ಅಧಿಕಾರಿಗಳ ಭೇಟಿ
ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ನಂತರ ಮೇ 3ರಂದು ನಡೆದ NEET-UG ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಒತ್ತಡದಿಂದಾಗಿ ದೇಶಾದ್ಯಂತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಇದೀಗ NTA ಜೂನ್ 21ರಂದು ಮರು ಪರೀಕ್ಷೆಯನ್ನು ನಿಗದಿಪಡಿಸಿದೆ.






