ಕೊಡಗು ಜಿಲ್ಲೆ, ಮಡಿಕೇರಿ ನಗರದ ನಗರಸಭೆ ಆವರಣದಲ್ಲಿರುವ ಕಾವೇರಿ ಕಲಾಕ್ಷೇತ್ರ(ಟೌನ್ ಹಾಲ್) ಕಟ್ಟಡವನ್ನು ತೆರವುಗೊಳಿಸಿ ಸುಸರ್ಜಿತವಾದ ಎರಡು ಅಂತಸ್ತಿನ ಕಲಾಭವನದಲ್ಲಿ 450 ಜನರಿಗೆ ಆಸನ ವ್ಯವಸ್ಥೆ ಹಾಗೂ ವಾಹನ ಪಾರ್ಕಿಂಗ್ ಒಳಗೊಂಡ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಡಾ. ಮಂತರ್ ಗೌಡ ಗುರುವಾರ ಚಾಲನೆ ನೀಡಿದರು.
₹9.50 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಡಿ ಕಾವೇರಿ ಕಲಾಕ್ಷೇತ್ರ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಸದರಿ ಕಟ್ಟಡ 1953ರಲ್ಲಿ ನಿರ್ಮಾಣವಾಗಿದ್ದು. ಹಿಂದೆಲ್ಲಾ ಮಡಿಕೇರಿ ದಸರಾ ಕಾರ್ಯಕ್ರಮಗಳನ್ನು ಕಾವೇರಿ ಕಲಾಕ್ಷೇತ್ರದಲ್ಲಿಯೇ ಆಯೋಜಿಸುತ್ತಿದ್ದರು. ನಂತರದ ದಿನಗಳಲ್ಲಿ ಗಾಂಧಿ ಮೈದಾನಕ್ಕೆ ಸ್ಥಳಾಂತರವಾಯಿತು. ಮಡಿಕೇರಿಗೆ ಹೆಚ್ಚಿನ ಪ್ರವಾಸಿಗರು ಬರುವುದನ್ನ ಗಮನದಲ್ಲಿಟ್ಟುಕೊಂಡು ವಾಹನದ ಪಾರ್ಕಿಂಗ್ ವ್ಯವಸ್ಥೆಯೊಡನೆ ನೂತನ ಕಟ್ಟಡ ನಿರ್ಮಾಣವಾಗಲಿದೆ. ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಎಲ್ಲರ ಸಹಕಾರ ಪಡೆದು ಕೆಲಸ ಮಾಡಲಾಗುತ್ತದೆ. ಎಲ್ಲರೂ ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಲ್ಲಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ, ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆ, ಸುಗಮ ಸಾರಿಗೆ ಸಂಚಾರ, ಮತ್ತಿತರ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಕಾವೇರಿ ಕಲಾಕ್ಷೇತ್ರ ಹಳೇ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಮಾಜಿ ಸಚಿವರಾದ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಕಾವೇರಿ ಕಲಾಕ್ಷೇತ್ರ ಹಳೇ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜು ಬೊಮ್ಮಾಯಿ ಅವರು 2023ರ ಮಾರ್ಚ್.18ರಂದು ಭೂಮಿ ಪೂಜೆ ನೆರವೇರಿಸಿದ್ದರು ಎಂದು ಸ್ಮರಿಸಿದರು.

ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಮಾತನಾಡಿ, 1952ರಲ್ಲಿ ಕೊಡಗು ರಾಜ್ಯವಾಗಿದ್ದಾಗ ಟೌನ್‍ಹಾಲ್‍ನ್ನು ನಿರ್ಮಿಸಲಾಗಿತ್ತು. 1963ರಲ್ಲಿ ಪುರಸಭೆ ಸದಸ್ಯನಾಗಿ, 1969ರಲ್ಲಿ ಪುರಸಭೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 1974ರಲ್ಲಿ ಟೌನ್‍ಹಾಲ್‍ನಲ್ಲಿಯೇ ನನ್ನ ಮದುವೆ ಆಗಿರುವುದು ವಿಶೇಷ ಎಂದು ಸ್ಮರಿಸಿಕೊಂಡರು. ಮಡಿಕೇರಿ ನಗರದಲ್ಲಿ 1952ರಲ್ಲಿ 13 ಸಾವಿರ ಜನಸಂಖ್ಯೆ ಇತ್ತು, ಇಂದು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಮಡಿಕೇರಿ ಪುರಸಭೆಯನ್ನು ನಗರಸಭೆಯನ್ನಾಗಿ ಸದನದಲ್ಲಿ ಚರ್ಚಿಸಿ ಮೇಲ್ದರ್ಜೆಗೇರಿಸಿದ್ದೇನೆ. ನಗರಸಭೆಗೆ 50 ಸಾವಿರ ಜನಸಂಖ್ಯೆ ಬೇಕಿದ್ದು, ಆದರೂ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ನಗರಸಭೆಯನ್ನಾಗಿ ಮಾಡಲು ಶ್ರಮಿಸಿದ್ದೇನೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ತಮಿಳುನಾಡಿನ ಊಟಿಯಲ್ಲಿ ಪ್ಲಾಸ್ಟಿಕ್‍ನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ. ಸ್ವಚ್ಛತೆಗೆ ಮತ್ತು ವಾಹನ ನಿಲುಗಡೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಊಟಿ ಮಾದರಿಯಲ್ಲಿ ಮಡಿಕೇರಿ ನಗರವನ್ನು ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಳೆಯ ದಿನಗಳನ್ನ ನೆನಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಹೆಚ್ ಡಿ ಕುಮಾರಸ್ವಾಮಿ
ಕಾರ್ಯಕ್ರಮದಲ್ಲಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಳಚಂಡ ಅಪ್ಪಣ್ಣ, ಎಸ್.ಸಿ. ಸತೀಶ್, ಅರುಣ್ ಶೆಟ್ಟಿ, ಶಾರದಾ ನಾಗರಾಜ್, ನಗರಸಭೆ ಸದಸ್ಯೆ ಅನಿತಾ ಪೂವಯ್ಯ, ಸವಿತಾ ರಾಕೇಶ್, ಉಮೇಶ್ ಸುಬ್ರಮಣಿ, ಚಂದ್ರಶೇಖರ್, ಸಬಿತಾ, ಶ್ವೇತಾ ಪ್ರಶಾಂತ್, ಚಿತ್ರಾವತಿ, ಅಮೀನ್ ಮೊಹಿಸಿನ್, ಬಶೀರ್ ಅಹ್ಮದ್, ಮನ್ಸೂರ್, ಮೇರಿ ವೇಗಸ್, ಮುತ್ತುರಾಜು, ಜಗದೀಶ್, ಜುಲೈಕಾಬಿ, ಸದಾ ಮುದ್ದಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಸಾಪ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್, ಜಾಪ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಶಾಂತೆಯಂಡ ರವಿ ಕುಶಾಲಪ್ಪ, ನಾಪಂಡ ರವಿ ಕಾಳಪ್ಪ, ಟಿ.ಪಿ. ರಮೇಶ್, ಕೆ.ಪಿ. ಚಂದ್ರಕಲಾ, ಚುಮ್ಮಿ ದೇವಯ್ಯ, ಎಚ್.ಎಂ. ನಂದಕುಮಾರ್, ಎಂ.ಪಿ. ಮುತ್ತಪ್ಪ, ಜಿ. ರಾಜೇಂದ್ರ, ಎಂ.ಎ. ನಿರಂಜನ, ಜಿ. ಚಿದ್ವಿಲಾಸ್, ಅಂಬೆಕಲ್ಲು ಕುಶಾಲಪ್ಪ, ನಗರಸಭಾ ಸದಸ್ಯರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಹಲವರು ಇದ್ದರು.




