ಪ್ರೀಮಿಯಂ ಲೇಖನ | ಜೀವ-ಜೀವನ, ಎರಡಕ್ಕೂ ಬೆಂಕಿ ಹಚ್ಚಿತು ಕೊಲ್ಲಿಯುದ್ಧ!

Date:

ʼಒನ್ ಅರ್ಥ್ ಜರ್ನಲ್‍ʼನಲ್ಲಿ ಪ್ರಕಟವಾದ ವರದಿಯಂತೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಸುಮಾರು 33 ಮಿಲಿಯನ್‍ ಟನ್ ಇಂಗಾಲದ ಡೈಆಕ್ಸೈಡ್‍ನ್ನು ಹೊರಸೂಸುತ್ತಿದೆ. ಇದು 7.6 ಮಿಲಿಯನ್ ಗ್ಯಾಸೋಲಿನ್ ಚಾಲಿತ ವಾಹನಗಳ ಹೊರಸೂಸುವಿಕೆಗೆ ಸಮಾನವಾಗಿದೆ. ಹೀಗೆ ವಿದ್ಯುತ್ ಸ್ಥಾವರ, ತೈಲ ಟ್ಯಾಂಕರ್ ಮತ್ತು ಮಿಲಿಟರಿ ನೆಲೆಗಳ ಮೇಲೆ ನಡೆಯುತ್ತಿರುವ ದಾಳಿಯಿಂದ ಗಾಳಿ ಮತ್ತು ನೀರು ಮಾತ್ರವಲ್ಲದೆ ಸಕಲವೂ ಕಲುಷಿತಗೊಳ್ಳುತ್ತಿದೆ.

- Advertisement -

ಇಸ್ರೇಲ್ ಮತ್ತು ಇರಾನ್ ನಡುವೆ ಜರುಗುತ್ತಿರುವ ಯುದ್ಧವು ಕಳೆದ ವರ್ಷ ನಡೆದ ಯುದ್ಧಕ್ಕಿಂತ ತೀವ್ರವಾಗಿದೆ. ಇರಾನ್‍ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಹಲವು ಹಿರಿಯ ಅಧಿಕಾರಿಗಳು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಹೀಗಾಗಿಯೇ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಜಿದ್ದಿಗೆ ಬಿದ್ದಿದೆ. ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಶಾಹಿದ್ ಡ್ರೋನ್ ಮೂಲಕ ಹಲವು ದೇಶಗಳ ಮೇಲೆ ದಾಳಿ ಎಸಗಿದೆ. ಇವುಗಳಲ್ಲಿ ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್, ಕತಾರ್, ಒಮನ್, ಇರಾಕ್, ಟರ್ಕಿ, ಅಜೆರ್ಬೈಜಾನ್ ಮತ್ತು ಸೈಪ್ರಸ್ ಸೇರಿವೆ. ಇಲ್ಲಿನ ಮಿಲಿಟರಿ ನೆಲೆ, ತೈಲ ಸಂಬಂಧಿತ ಮೂಲಸೌಕರ್ಯ ಮತ್ತು ನಾಗರಿಕ ವಸಾಹತುಗಳ ನಾದಗೊಳಿಸಲು ಪ್ರಯತ್ನಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇಲ್ಲಿಯವರೆಗೂ 20 ದೇಶಗಳು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿವೆ. ಕೆಲವು ದೇಶಗಳು ಯುದ್ಧದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಗುಪ್ತಚರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಇಂತಹ ದೇಶಗಳಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ರಷ್ಯಾದಂತಹ ಯುರೋಪಿಯನ್ ದೇಶಗಳಿವೆ. ಒಂದೊಮ್ಮೆ ಚೀನಾ ಯುದ್ಧದಲ್ಲಿ ನೇರವಾಗಿ ಧುಮುಕಿದರೆ, ಮೂರನೇ ಮಹಾಯುದ್ಧ ಖಚಿತ ಎಂದೇ ಅಂದಾಜಿಸಲಾಗುತ್ತಿದೆ. ಇದರ ನಡುವೆ, ಚೀನಾ ಇಲ್ಲಿಯವರೆಗೂ ನೀಡುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸಿದರೆ, ಮೂರನೇ ಮಹಾಯುದ್ಧದ ಸಾಧ್ಯತೆಯ ಬಗ್ಗೆ ತಳ್ಳಿಹಾಕಲು ಸಾಧ್ಯವಿಲ್ಲ.

ಇನ್ನಿಲ್ಲಿ ಪ್ರತಿಯೊಬ್ಬರ ವೃತ್ತಿ ಜೀವನದಲ್ಲಿಯೂ ಅಜಾಗರೂಕ ಮತ್ತು ಬೇಜವಾಬ್ದಾರಿ ತೀರ್ಮಾನಗಳಿಂದ ಬಹುಬೇಗ ಕುಸಿಯುವ ಸಂಭವಗಳಿರುತ್ತವೆ. ಬಹುತೇಕ ಇಂತಹದ್ದೇ ನಿರ್ಧಾರ ಇರಾನ್ ಮೇಲೆ ದಾಳಿ ಮಾಡಿದ ಅಮೆರಿಕದ ನಿರ್ಧಾರವೂ ಒಂದಾಗಿದೆ. ಇದು ಡೊನಾಲ್ಡ್ ಟ್ರಂಪ್ ಅವರ ವೃತ್ತಿಜೀವನದಲ್ಲಿ ನಿರ್ಣಾಯಕ ಕ್ಷಣ ಎಂಬುದನ್ನು ಯುದ್ಧ ವಿಶ್ಲೇಷಣೆಗಳು ಹೇಳುತ್ತಿವೆ. ಇಷ್ಟಕ್ಕೂ ಇಲ್ಲಿ ಟ್ರಂಪ್, ಇಸ್ರೇಲ್‍ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರತಿಜ್ಞೆಯನ್ನು ಪೂರೈಸುವ ಜವಾಬ್ದಾರಿಯನ್ನು ಸ್ವತಃ ತಾವೇ ಮುಂದೆ ನಿಂತು ಮಾಡಲು ಸಾಧ್ಯವಿಲ್ಲ. ಅಮೆರಿಕದ ಆಮಿಷ ಇಲ್ಲದೆ ಇಸ್ರೇಲ್ ನಾಲ್ಕು ಹೆಜ್ಜೆ ಇಡಲೂ ಆಗದು. ಇದು ಕೂಡ ಇತಿಹಾಸದ ಒಂದು ಭಾಗವಾಗಿದೆ. ಇದುವೇ ಮತ್ತೊಮ್ಮೆ ಪುನರಾವರ್ತನೆಯಾಗಿದೆ ಅಷ್ಟೇ…

ಇಸ್ರೇಲ್ ದಾಳಿಯಿಂದ ಲೆಬನಾನ್

ಕಳೆದ ವರ್ಷ ಡಿಸೆಂಬರ್‌ನಿಂದಲೇ, ನೆತನ್ಯಾಹು ಟ್ರಂಪ್ ಅವರನ್ನು ಇರಾನ್ ಮೇಲೆ ದಾಳಿ ಮಾಡುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಇದೇ ಹೊತ್ತಲ್ಲಿ, ಟ್ರಂಪ್ ಕೂಡ ಇರಾನ್‍ನೊಂದಿಗೆ ನಡೆಯುತ್ತಿದ್ದ ಮಾತುಕತೆಗಳಿಂದ ಹೊರಬರಬೇಕಿತ್ತು. ಇದಕ್ಕಾಗಿ ಒಂದು ಮಾರ್ಗವನ್ನು ಕಂಡುಕೊಳ್ಳಲು ಹವಣಿಸುತ್ತಿದ್ದರು. ಇದರ ಮಧ್ಯೆ ಒಪ್ಪಂದಕ್ಕಾಗಿ ಅಮೆರಿಕ ಮತ್ತು ಇರಾನ್ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿತ್ತು. ಆದರೆ, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಒಪ್ಪಂದವನ್ನು ಮುರಿಯಲು ನೆತನ್ಯಾಹು ಪ್ರಯತ್ನಿಸುತ್ತಿದ್ದರು.

ನಮ್ಮ ದೇಶದಲ್ಲಿ ಎದ್ದಿದ್ದ ಬೋಫೋರ್ಸ್, ರಫೇಲ್, ಚುನಾವಣಾ ಬಾಂಡ್ ಹಗರಣಗಳು ಎಷ್ಟು ಸತ್ಯವೋ, ಇಸ್ರೇಲ್‍ನ ಇರಾನಿನಲ್ಲಿ ಪರಮಾಣು ಬಾಂಬ್ ಇರುವುದು ಕೂಡ ಅಷ್ಟೇ ಸತ್ಯ. ಇರಾನ್ ಪರಮಾಣು ಬಾಂಬ್‍ಗಳನ್ನು ತಯಾರಿಸುತ್ತಿಲ್ಲ ಎಂದು ಅಂತರರಾಷ್ಟ್ರೀಯ ಪರಮಾಣು ಇಂಧನ ಆಯೋಗದಿಂದ ಪ್ರಮಾಣ ಪತ್ರ ನೀಡಿದ್ದರೂ, ನೆತನ್ಯಾಹು ಇದನ್ನು ಸುಳ್ಳೆನ್ನುತ್ತಿದ್ದಾರೆ. ಇದಕ್ಕೆ ಟ್ರಂಪ್ ಬಲಿಯಾಗಲಿದ್ದಾರೆ. ಜೊತೆಗೆ ಜಗದ ಉದ್ದಗಲ ಜನರ ಪ್ರಾಣ ಹರಣ ಮಾಡಲಿದ್ದಾರೆ. ಇದರ ಮಧ್ಯೆ, ಅಮೆರಿಕದ ಹಲವು ಮಾಧ್ಯಮಗಳು ನೆತನ್ಯಾಹು ಮತ್ತು ಸೌದಿ ಅರೇಬಿಯಾದ ಭವಿಷ್ಯದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಮೆರಿಕವನ್ನು ಯುದ್ಧದಲ್ಲಿ ತೊಡಗಿಸಿಕೊಳ್ಳುವಂತೆ ಮನವೊಲಿಸಿದರೆಂಬ ಬಗ್ಗೆ ವರದಿ ಹರಿದಾಡುತ್ತಿದೆ.

ಇನ್ನಿಲ್ಲಿ, ಒಬಾಮಾ ಅಮೆರಿಕವನ್ನು ಯುದ್ಧದ ಅಖಾಡಕ್ಕೆ ಎಳೆಯುತ್ತಾರೆ ಎಂಬ ಸುದ್ದಿಯನ್ನು ಹರಿಯಬಿಡಲಾಗಿತ್ತು. ಆದರೆ, ಒಬಾಮಾ ಇರಾನ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಟ್ರಂಪ್ ಅಮೆರಿಕದ ಮೇಲೆ ಯುದ್ಧ ಹೇರಿದ್ದಾರೆ. ಮೊದಲು ವೆನೆಜುವೆಲಾ ಮೇಲೆ ಏರಿಹೋಗಲಾಗಿತ್ತು. ಇದೀಗ ಇರಾನ್ ಮೇಲೆ ಹೋಗಲಾಗಿದೆ.

ಇಷ್ಟಕ್ಕೂ ನೆತನ್ಯಾಹು ಅವರಂತೆಯೇ, ಟ್ರಂಪ್‍ಗೂ ಯುದ್ಧದ ಅಗತ್ಯವಿತ್ತು. ಎಪ್‌ಸ್ಟೀನ್ ಫೈಲ್‍ಗಳು ಟ್ರಂಪ್ ಮೇಲೆ ಅನುಮಾನದ ಸವಾಲುಗಳನ್ನು ತಂದೊಡ್ಡಿತ್ತು. ಅಲ್ಲದೆ, ಸುಪ್ರೀಂಕೋರ್ಟ್ ಕೂಡ ಆಮದು ಸುಂಕಗಳನ್ನು ಕಾನೂನುಬಾಹಿರವೆಂದು ಘೋಷಿಸಿ ಹೊಡೆತ ಕೊಟ್ಟಿತ್ತು. ಹೀಗೆ ದೇಶದೊಳಗೆ ಎದ್ದಿದ್ದ ಸವಾಲುಗಳಿಂದ ಬೇಸತ್ತಿದ್ದ ಎರಡು ರಾಷ್ಟ್ರಗಳ ಮುಖ್ಯಸ್ಥರಿಗೆ ಜನರ ಮನಸ್ಸನ್ನು ಬದಲಾಯಿಸಬೇಕಿತ್ತು. ಇದಕ್ಕಾಗಿಯೇ ಯುದ್ಧವನ್ನು ಪ್ರಾರಂಭಿಸಿದ್ದಾರೆ. ಯುದ್ಧದ ನೇತೃತ್ವ ವಹಿಸಿರುವ ಇಸ್ರೇಲ್‍ನ ಗುರಿ ಇರಾನ್‍ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರನ್ನು ಕೊಲ್ಲುವುದಾಗಿತ್ತು. ಆದರೆ ಟ್ರಂಪ್‍ನ ಗುರಿ ಅಲ್ಲಿನ ದೇವಪ್ರಭುತ್ವದ ಆಡಳಿತವನ್ನು ಬದಲಾಯಿಸುವುದಾಗಿತ್ತು. ಅದೇನೆ ಇರಲಿ, ಖಮೇನಿ ಒಬ್ಬ ಸರ್ವಾಧಿಕಾರಿ, ಕ್ರೂರಿ. ಜನರ ಮೇಲೆ ಅಮಾನವೀಯ ಚಿತ್ರಹಿಂಸೆ ನೀಡುತ್ತಿದ್ದಾರೆಂಬ ಆಪಾದನೆಯಷ್ಟೇ ಹೊತ್ತಿದ್ದರು. ಇದಕ್ಕೂ ಮುಖ್ಯವಾಗಿ ಅವರು ಅಮೆರಿಕದ ತಾಳಕ್ಕೆ ತಕ್ಕಂತೆ ನೃತ್ಯ ಮಾಡಲು ಸಿದ್ಧರಿರಲಿಲ್ಲ. ವೆನೆಜುವೆಲಾದಂತಹ ಸಣ್ಣ ದೇಶವನ್ನು ಬೆದರಿಸಿ, ಯಶಸ್ವಿಯಾಗಿದಕ್ಕೆ ಟ್ರಂಪ್ ಅವರ ಯುದ್ದೋತ್ಸಾಹದ ಹಸಿವು ಹೆಚ್ಚಾಗಿದೆ.

ಗೊತ್ತಿರಲಿ, ಅಮೆರಿಕ ಸಂವಿಧಾನದಂತೆ, ಯಾವುದೇ ದೇಶದ ವಿರುದ್ಧ ಮಿಲಿಟರಿ ಬಲಪ್ರಯೋಗ ಮಾಡಬೇಕಾದರೆ, ಸರ್ವೋಚ್ಛ ಶಾಸಕಾಂಗ ಸಂಸ್ಥೆಯಾದ ಕಾಂಗ್ರೆಸ್‍ನ ಅನುಮೋದನೆ ಅಗತ್ಯವಾಗಿ ಬೇಕಾಗುತ್ತದೆ. ಸಂವಿಧಾನದ ನಿಬಂಧನೆಗಳ ಪ್ರಕಾರ, ಅಧ್ಯಕ್ಷರು ಸಶಸ್ತ್ರ ಪಡೆಗಳಿಗೆ ಆಜ್ಞಾಪಿಸಬಹುದು. ಜೊತೆಗೆ ವಿದೇಶಿ ಸಂಬಂಧಗಳ ಕುರಿತು ಸೂಚನೆಗಳನ್ನು ಕೂಡ ನೀಡಬಹುದು. ಆದರೆ, ಯುದ್ಧ ಘೋಷಿಸುವ ಅಧಿಕಾರ ಕಾಂಗ್ರೆಸ್‍ಗೆ ಮಾತ್ರ ಇರುತ್ತದೆ. ಇದಕ್ಕೂ ಮೊದಲು, ಜಾರ್ಜ್ ಡಬ್ಲ್ಯೂ. ಬುಷ್‍ಗೆ 2001ರಲ್ಲಿ ಅಫ್ಘಾನಿಸ್ತಾನ ಮತ್ತು 2003ರಲ್ಲಿ ಇರಾಕ್ ಮೇಲೆ ಆಕ್ರಮಣ ಮಾಡಲು ಕಾಂಗ್ರೆಸ್ ಅಧಿಕಾರ ನೀಡಿತ್ತು. ಆದರಿಂಗ ಟ್ರಂಪ್ ಇಂತಹ ಯಾವುದೇ ಅನುಮತಿ ಪಡೆಯದೆ, ಯುದ್ಧವನ್ನು ಆರಂಭಿಸಿದ್ದಾರೆ. ರಾಜಕೀಯ ತಜ್ಞರ ಪ್ರಕಾರ, ಟ್ರಂಪ್ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಸಾಂವಿಧಾನಿಕ ಅಧಿಕಾರದ ಮಿತಿಗಳನ್ನು ದಾಟಿದ್ದಾರೆ. ಇದರ ಮಧ್ಯೆ, ಕಾಂಗ್ರೆಸ್‍ನ ಮೇಲ್ಮನೆಯಾದ ಸೆನೆಟ್ ಇರಾನ್ ಯುದ್ಧದ ವಿರುದ್ಧದ ಮಸೂದೆಯನ್ನು ತಿರಸ್ಕರಿಸಿದೆ. ಹಾಗೆಯೇ, ಟ್ರಂಪ್‍ಗೆ ಯುದ್ಧವನ್ನು ಮುಂದುವರಿಸಲು ಅವಕಾಶವನ್ನು ಮಾಡಿಕೊಟ್ಟಿದೆ. ಇದೀಗ ಟ್ರಂಪ್ ಅವರು ಕೆಳಮನೆಯ ಪ್ರತಿನಿಧಿಗಳ ಸಭೆಯ ಅನುಮೋದನೆಯನ್ನು ಪಡೆಯಬೇಕಿದೆ.

ಇನ್ನೂ, ವಿಶ್ವಸಂಸ್ಥೆ ಸ್ಥಾಪನೆಯ ಹೊತ್ತಲ್ಲಿ ಅಂಗೀಕರಿಸಿದ ಘೋಷಣೆಯಂತೆ, ಇರಾನ್ ಮೇಲಿನ ಯುದ್ಧ ಕಾನೂನು ಉಲ್ಲಂಘಿಸಿದಂತೆ, ಅಂದರೆ, ಒಂದು ದೇಶವು ಮತ್ತೊಂದು ದೇಶದ ಮೇಲೆ ಮಿಲಿಟರಿ ದಾಳಿ ಮಾಡಬಾರದು. ಹಾಗೆಯೇ, ಬೆದರಿಕೆ ಹಾಕುವ ರೀತಿಯಲ್ಲಿ ಮಿಲಿಟರಿ ಬಲವನ್ನು ಬಳಸಬಾರದು. ಇದೀಗ ಇಸ್ರೇಲ್ ಮತ್ತು ಅಮೆರಿಕ ಕೂಡಿ ಇರಾನ್ ಮೇಲೆ ದಾಳಿ ಮಾಡುವ ಮೂಲಕ ವಿಶ್ವಸಂಸ್ಥೆಯ ನಿಯಮವನ್ನು ಉಲ್ಲಂಘಿಸಿವೆ. ಇನ್ನೂ ಯುಎನ್ ಸೆಕ್ಯುರಿಟಿ ಕೌನ್ಸಿಲ್ ತನ್ನ ಮೇಲಾಗುವ ಸಶಸ್ತ್ರ ದಾಳಿಗೆ ಪ್ರತಿಯಾಗಿ ಮಿಲಿಟರಿ ಶಕ್ತಿಯನ್ನು ಬಳಸಲು ಅಥವಾ ಮಿಲಿಟರಿ ಪಡೆಯ ಮೂಲಕ ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡಿರುವುದು ಇದಕ್ಕೆ ಹೊರತಾಗಿದೆ. ಇರಾನ್ ಮೇಲಿನ ದಾಳಿಯಲ್ಲಿ ಇದನ್ನು ಅನುಸರಿಸಿಲ್ಲ. ಆದರೂ, ಸ್ವರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪೂರ್ವಭಾವಿ ಕ್ರಮಗಳನ್ನು ಮಾತ್ರ ಕೈಗೊಳ್ಳಲು ಅನುಮತಿಸಲಾಗಿದೆ. ಸದ್ಯ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬ್ರಿಟನ್ ಮತ್ತು ಸ್ಪೇನ್ ತನ್ನ ನೆಲೆಗಳನ್ನು ಯುದ್ಧಕ್ಕೆ ಬಳಸಲು ಒಪ್ಪಿಗೆ ಕೊಟ್ಟಿಲ್ಲ.

ಇಷ್ಟಕ್ಕೂ ಇರಾನ್ ಮತ್ತು ಇಸ್ರೇಲ್ ಒಂದು ಕಾಲದಲ್ಲಿ ಅತ್ಯಂತ ಸ್ನೇಹದಿಂದ ಇದ್ದವು. ಅದು ಎಷ್ಟರಮಟ್ಟಿಗೆ ಎಂದರೆ, ಎರಡೂ ದೇಶಗಳು ರಹಸ್ಯವಾಗಿ ಒಗ್ಗೂಡಿ ರಹಸ್ಯ ಪೈಪ್‍ಲೈನ್‍ನ್ನು ರಚಿಸಿ ಕೊಂಡಿದ್ದವು. 1967 ರಲ್ಲಿ, ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಯುದ್ಧ ಪ್ರಾರಂಭವಾಯಿತು. ಆರು ದಿನಗಳ ಕಾಲ ನಡೆದ ಯುದ್ಧದಿಂದ ಈಜಿಪ್ಟ್ ಸೂಯೆಜ್ ಕಾಲುವೆ ಸ್ತಬ್ಧಗೊಂಡಿತ್ತು. ಇಸ್ರೇಲ್‍ನ ತೈಲ ಆಮದು ನಿಂತುಹೋಗಿತ್ತು. ಆಮದು ಮಾಡಿಕೊಳ್ಳಲು ಮುಂದಾಗಿತ್ತು. ಹೀಗೆ ತೈಲ ಪಡೆಯಲು ಅನ್ಯ ಮಾರ್ಗ ಹುಡುಕುವ ಹೊತ್ತಲ್ಲಿ ಇರಾನ್ ಕೂಡ ತೈಲ ಮಾರಾಟ ಮಾಡಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಿ, 1967 ರಿಂದ 1975ರವರೆಗೆ ಈಜಿಪ್ಟ್ ಸೂಯೆಜ್ ಕಾಲುವೆಯನ್ನು ಮುಚ್ಚಿಹಾಕಿತು.

suez canal
ಸೂಯೆಜ್‌ ಕಾಲುವೆ

ನೆನಪಿಡಿ, ವಿಶ್ವ ವ್ಯಾಪಾರದ ಶೇಕಡ 12ರಷ್ಟು ಸೂಯೆಜ್‌ ಕಾಲುವೆ ಬಳಸಿ ಮಾಡಲಾಗುತ್ತಿದೆ. ಆದರೆ, ಕಂಟೇನರ್ ಸಂಚಾರದ ಶೇಕಡ 30ರಷ್ಟು ಸೂಯೆಜ್ ಕಾಲುವೆಯ ಮೂಲಕ ನಡೆಯುತ್ತಿದೆ. ಇದು ಯುರೋಪ್ ಮತ್ತು ಏಷ್ಯಾವನ್ನು ಸಂಪರ್ಕಿಸುವ ಹತ್ತಿರದ ಮಾರ್ಗವೆಂದೇ ನಂಬಲಾಗಿದೆ. ಇದಕ್ಕಾಗಿಯೇ, ರಹಸ್ಯ ಪೈಪ್‍ಲೈನ್ ನಿರ್ಮಿಸಲು ಇಸ್ರೇಲ್ ಮತ್ತು ಇರಾನ್ ಕೂಡಿ ಪಡೆಗಳನ್ನು ರಚಿಸಿಕೊಂಡಿವೆ.

ಹೀಗೆ ಈಜಿಪ್ಟ್ ಸೂಯೆಜ್ ಕಾಲುವೆಯನ್ನು ಮುಚ್ಚಿದ ನಂತರ 1968ರಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಸಂಬಂಧ ಉತ್ತಮವಾಗೇ ಇತ್ತು. ಕೆಂಪು ಸಮುದ್ರದ ಇಸ್ರೇಲ್‍ನ ದಕ್ಷಿಣ ಬಂದರಾದ ಐಲಾಟ್‍ನಿಂದ ಮೆಡಿಟರೇನಿಯನ್ ಬಂದರಿನ ಅಶ್ಕೆಲೋನ್‍ಗೆ ಪೈಪ್‍ಲೈನ್ ನಿರ್ಮಿಸಲು ಎರಡೂ ದೇಶಗಳು ಕೊಹಿ ಪಡೆಗಳನ್ನು ರಚಿಸಿಕೊಂಡವು. ಐಲಾಟ್-ಆಶ್ಕೆಲೋನ್ ಪೈಪ್‍ಲೈನ್ 254 ಕಿಮೀ ಉದ್ದ ಮತ್ತು 42 ಇಂಚು ಅಗಲವಿದೆ.

ಇದು 2019ರಿಂದಲೂ ಇಸ್ರೇಲ್ ನಿಯಂತ್ರಣದಲ್ಲಿದೆ. ಇಸ್ರೇಲ್ ಆರ್ಥಿಕತೆಯಲ್ಲಿ ಒಟ್ಟು ಇಂಧನ ಬಳಕೆಯನ್ನು ಈ ಪೈಪ್‍ಲೈನ್ ಮೂಲಕವೇ ಪೂರೈಸಲಾಗುತ್ತದೆ. ಇದರ ಮಧ್ಯೆ, ಡಿಸೆಂಬರ್ 2014ರಲ್ಲಿ ಪೈಪ್‍ಲೈನ್‍ನಿಂದ ತೈಲ ಸೋರಿಕೆಯಾಗಿತ್ತು. ಆಗ ಬಿಕ್ಕಟ್ಟು ಸೃಷ್ಟಿಗೊಂಡಿದೆ. 254 ಕಿ.ಮೀ.ಗಳಲ್ಲಿ 119 ಕಿ.ಮೀ. ಪೈಪ್‍ಲೈನ್ ಸೂಕ್ಷ್ಮ ಪರಿಸರ ಪ್ರದೇಶದ ಮೂಲಕ ಹಾದುಹೋಗುತ್ತದೆ.

ಹೀಗಾಗಿಯೇ, ಇರಾನ್, ಇಸ್ರೇಲ್ ಜೊತೆ ಪೈಪ್‍ಲೈನ್ ವಿವಾದ ಇದೆ. 1978ರಲ್ಲಿ ಇಸ್ರೇಲ್‍ಗೆ 2.9 ಮಿಲಿಯನ್ ಟನ್ ಕಚ್ಚಾ ತೈಲವನ್ನು ನೀಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಆದರೆ, ಇರಾನ್ ಇನ್ನೂ ಆ ಮೊತ್ತವನ್ನು ಸ್ವೀಕರಿಸಿಲ್ಲ ಎಂದು ಹೇಳುತ್ತಿದೆ. ಮೇ 2015ರಲ್ಲಿ, ಸ್ವಿಸ್ ನ್ಯಾಯಾಲಯವು ಇರಾನ್‍ಗೆ $1.1 ಬಿಲಿಯನ್ ಪಾವತಿಸಬೇಕೆಂದು ತೀರ್ಪು ಕೊಟ್ಟಿದೆ. ಇದೇ ನಿರ್ಧಾರವನ್ನು ಜೂನ್ 2016ರಲ್ಲಿ ಮತ್ತೆ ಎತ್ತಿಹಿಡಿಯಲಾಗಿದೆ. ಇದನ್ನು ಶತ್ರು ರಾಷ್ಟ್ರಕ್ಕೆ ಯಾವುದೇ ಹಣ ಪಾವತಿಸುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿತ್ತು.

ಇದೀಗ ಅಮೆರಿಕದಂತಹ ದೇಶ ತೈಲಬೆಲೆಯನ್ನು ಏರಿಸಿದ್ದರೂ, ನಮ್ಮ ದೇಶದಲ್ಲಿ ಮಾತ್ರ ಇಳಿಸಲಾಗಿದೆ. ಇಳಿಕೆಯನ್ನು ಸ್ವಾಗತಿಸಿ, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರದ ಖಜಾನೆಗೆ 1.5 ಲಕ್ಷ ಕೋಟಿ ನಷ್ಟವನ್ನು ಭರಿಸಿದೆ. ತೈಲ ಬೆಲೆ ಸದ್ಯ ಬ್ಯಾರಲ್‍ಗೆ 100 ಡಾಲರ್ ನಷ್ಟು ಏರಿಕೆ ಕಂಡಿರುವ ಮಧ್ಯೆ ಬೆಲೆ ಇಳಿಕೆ ಮಾಡಿರುವುದನ್ನು ಚಿಕಿತ್ಸಕ ದೃಷ್ಟಿಯಲ್ಲಿ ಕಾಣಬೇಕಿದೆ. ಇದರ ನಡುವೆ ಮನಕಲಕುವ ದುರ್ಘಟನೆಯೊಂದು ನಡೆದಿದೆ. ಅದು ಇರಾನಿನ ಮಿನಾಬ್ ನಗರದ ಶಾಲೆಯ ಮೇಲೆ ಹಾರಿಸಿದ ಕ್ಷಿಪಣಿಯಿಂದ 160 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ಇದೊಂದು ಜಾಗತಿಕ ದುರಂತ. ಮಹಿಳಾ ಇತಿಹಾಸದಲ್ಲಿ ಇದೊಂದು ಅಳಿಸಲಾಗದ ಕಪ್ಪು ಚುಕ್ಕೆ.

ಇಸ್ರೇಲ್ ಮತ್ತು ಅಮೆರಿಕ ಅದೇಕೆ ಇರಾನಿನ ಶಾಲಾ ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿ ಬಾಂಬು ಸಿಡಿಸಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಮೊದಲಿಗೆ ನನ್ನನ್ನು ಕಾಡಿತ್ತು. ಯುದ್ಧದಲ್ಲಿ ನಿಜಕ್ಕೂ ಮಹಿಳೆ ಅಸಹಾಯಕಿ. ಆಕೆಯ ಮೇಲೆ ನಡೆಯುವ ದೌರ್ಜನ್ಯಕ್ಕೆ ಮಿತಿ ಎಂಬುದೇ ಇರುವುದಿಲ್ಲ. ಯುದ್ಧ ಪಿಪಾಸುಗಳು ವಶಪಡಿಸಿಕೊಂಡ ಭೂಪ್ರದೇಶದ ಹೆಣ್ಣುಮಕ್ಕಳನ್ನು ತನ್ನ ದೇಶದ ಸೈನಿಕರನ್ನು ಹುರಿದುಂಬಿಸಲು, ಸೆಣಸಾಡಿಸಲು ಲೈಂಗಿಕವಾಗಿ ಬಳಸಿರುವ ಉದಾಹರಣೆಗಳು ಸಾಕಷ್ಟಿದೆ. ಆದರೆ, ಶತ್ರುದೇಶವನ್ನು ಮಣಿಸಲು, ಅಲ್ಲಿನ ಭವಿಷ್ಯದ ಮಾತೆಯಂದಿರನ್ನೇ ಕೊಂದು ಹಾಕಿದರೆ, ಸಂತಾನವೇ ಸೃಷ್ಟಿಯಾಗದೆ ಶತ್ರುಕುಲವನ್ನು ನಾಶಪಡಿಸುವ ಹುನ್ನಾರವನ್ನು ಅಮೆರಿಕ ಮತ್ತು ಇಸ್ರೇಲ್ ಸದ್ಯಕ್ಕೆ ಹೊಂದಿವೆ.

ಇಷ್ಟಕ್ಕೂ ಇರಾನ್‍ನ ಮಹಿಳೆಯರು ಅಲ್ಲಿನ ಪಿತೃಪ್ರಭುತ್ವ ವ್ಯವಸ್ಥೆಯ ವಿರುದ್ಧ ಕಳೆದೊಂದು ದಶಕದಿಂದ ಹೋರಾಡುತ್ತಲೇ ಇದ್ದಾರೆ. ಆಂತರಿಕ ಯುದ್ಧ ಅಲ್ಲಿನ ಮಹಿಳೆಯರ ಮತ್ತು ಪುರುಷಪ್ರಧಾನ ವ್ಯವಸ್ಥೆಯ ಮಧ್ಯೆ ನಡೆಯುತ್ತಲೇ ಇದೆ. ಇಲ್ಲಿ ಮಹಿಳಾ ಹಕ್ಕು ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಇಬ್ಬರು ಇರಾನಿನ ಶಿರಿನ್ ಎಬಾಡಿ ಮತ್ತು ನರ್ಗಿಸ್ ಮೊಹಮ್ಮದಿ ಎಂಬುವರು ಕ್ರಮವಾಗಿ 2003 ಮತ್ತು 2023ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಹುಶ: ಇದನ್ನು ಕಂಡಾಗಲೇ ಜಗತ್ತು ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಿತ್ತು. ಇರಾನ್ ಸರ್ಕಾರ ಕೊಟ್ಟ ಕಿರುಕುಳ ಮತ್ತು ಒತ್ತಡದಿಂದಾಗಿ ಶಿರಿನ್ ಎಬಾಡಿ 2009ರಲ್ಲಿಯೇ ದೇಶ ತೊರೆದು ಓಡಿಹೋಗಿದ್ದರು. ಅವರಿಂದು ಯುರೋಪಿನಲ್ಲಿ ನಿರಾಶ್ರಿತರಾಗಿ ವಾಸಿಸುತ್ತಿದ್ದಾರೆ. ಮತ್ತೊರ್ವ ನೊಬೆಲ್ ಪುರಸ್ಕೃತೆ ನರ್ಗಿಸ್ ಮೊಹಮ್ಮದಿ ಸದ್ಯ ಜೈಲಿನಲ್ಲಿದ್ದಾರೆ.

Iran school strike
ಇಸ್ರೇಲ್‌ ದಾಳಿಗೆ ತುತ್ತಾದ ಇರಾನ್‌ನ ಹೆಣ್ಣುಮಕ್ಕಳ ಶಾಲೆ

ಹೀಗೆ ಪಾಪದ ಇರಾನಿನ ಮಹಿಳೆಯರು ಸುಮಾರು 40 ವರ್ಷಗಳಿಂದ ಆಡಳಿತಾಂಗದಿಂದ ಶೋಷಣೆಗೆ ಒಳಗಾಗಿದ್ದಾರೆ. ಅವರು ಧರಿಸುವ ಬಟ್ಟೆಯಿಂದ ಹಿಡಿದು ಎಲ್ಲವನ್ನೂ ಕಾನೂನಿನಿಂದ ನಿರ್ಬಂಧಿಸಲಾಗಿದೆ. ಆಯತೊಲ್ಲಾ ಖಮೇನಿ 1979 ಮಾರ್ಚ್ 8ರಂದು ಅಧಿಕಾರಕ್ಕೆ ಬಂದರು. ಅಂದಿನಿಂದಲೇ, ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್ ಧರಿಸಬೇಕು. ಮುಖ ಮತ್ತು ಕೂದಲನ್ನು ಮುಚ್ಚಿಕೊಳ್ಳಬೇಕೆಂದು ಆದೇಶಿಸಿದ್ದರು. ಇದನ್ನು ವಿರೋಧಿಸಿ ಇರಾನಿನ ಮಹಿಳೆಯರು ಪ್ರತಿಭಟನೆ ನಡೆಸಲು ಬೀದಿಗಿಳಿದಿದ್ದರು. ಇರಾನ್‍ನಲ್ಲಿ ಒಂಬತ್ತು ವರ್ಷ ವಯಸ್ಸಿನ ಹುಡುಗಿಯರ ಮೇಲೆಯೂ ಹಲವು ನಿರ್ಬಂಧಗಳನ್ನು ಹೇರಿದ್ದರು. ಇತ್ತೀಚೆಗಷ್ಟೇ, ಹಿಜಾಬ್ ಧರಿಸದ ಕಾರಣ ಮಹ್ಸಾ ಅಮಿನಿಯನ್ನು ಬಂಧಿಸಲಾಗಿತ್ತು. ನಂತರ ಎರಡೇ ದಿನಗಳಲ್ಲಿ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಆಗ ಮಹಿಳಾ ಜೀವನ ಸ್ವಾತಂತ್ರ್ಯ ಎಂಬ ಚಳವಳಿಯನ್ನು ಹಾಕಲಾಯಿತು. ಇದನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ನಿಗ್ರಹಿಸಿ, 2024ರಲ್ಲಿ ಹಿಜಾಬ್‍ನ್ನು ವಿರೋಧಿಸುವವರ ವಿರುದ್ಧ ಕಠಿಣ ಕಾನೂನನ್ನು ಜಾರಿಗೆ ತರಲಾಗಿದೆ. ಇದರಂತೆ, ಹಿಜಾಬ್ ಹೇರಿಕೆಯ ವಿರುದ್ಧ ಇಲ್ಲಿನ ಜನ ಶಾಂತಿಯುತವಾಗಿ ಪ್ರತಿಭಟಿಸಿದರೂ, ಮರಣದಂಡನೆ ಶಿಕ್ಷೆಗೆ ಒಳಗಾಗಬೇಕಿತ್ತು. ಉದ್ದೇಶಿತ ಕಾನೂನು ಇನ್ನೂ ಜಾರಿಗೆ ಬಂದಿಲ್ಲವಾದರೂ, ಹಿಂದಿದ್ದ ಕಾನೂನು ಕೂಡ ಅನ್ಯಾಯದಿಂದ ಕೂಡಿದೆ.

ಅದು ಎಷ್ಷರ ಮಟ್ಟಿಗೆ ಎಂದರೆ, ಒಂದೊಮ್ಮೆ ವಿಚ್ಛೇದನ ಆದರೆ, ಮಕ್ಕಳ ಪಾಲನೆ ತಂದೆಯ ಪಾಲಿಗೆ ಹೋಗುತ್ತದೆ. ಅವರಿಗೆ ಸಮಾನ ಉತ್ತರಾಧಿಕಾರ ಹಕ್ಕುಗಳು ಸಿಗುವುದಿಲ್ಲ. ಇನ್ನೂ ಘೋರವೆಂದರೆ, ನ್ಯಾಯಾಲಯದಲ್ಲಿ, ಒಬ್ಬ ಪುರುಷನ ಸಾಕ್ಷ್ಯವನ್ನು ಇಬ್ಬರು ಮಹಿಳೆಯರ ಸಾಕ್ಷ್ಯಕ್ಕೆ ಸಮಾನವೆಂದು ಪರಿಗಣಿಸಲಾಗುತ್ತಿದೆ. ಇಂತಹ ಕ್ರೂರ ಸ್ಥಿತಿ ಇರಾನ್‍ನಲ್ಲಿ ಮಾತ್ರವೇ ಇದೆ. ಇಸ್ರೇಲ್‍ನಲ್ಲಿ ಇಲ್ಲ ಎನ್ನುವಂತಿಲ್ಲ. ಇಲ್ಲಿಯೂ ಮಹಿಳೆಯರಿಗೆ ಸುಂದರ ಬದುಕಿದೆ. ಹಾಗಂತ ಇಲ್ಲಿ, ಸಮಾನ ಹಕ್ಕು ಮತ್ತು ಜವಾಬ್ದಾರಿ ಇದೆ ಎಂದು ಭಾವಿಸಬೇಕಿಲ್ಲ. ಕಾನೂನಿನಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆ ಇದ್ದರೂ, ಮಹಿಳೆಯರಿಗೆ ಮತದಾನದ ಹಕ್ಕು, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಭಾಗವಹಿಸುವ ಹಕ್ಕಿದ್ದರೂ, ಧಾರ್ಮಿಕ ಕಾನೂನುಗಳ ಪ್ರಭಾವದಿಂದಾಗಿ ಅವರು ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ವಿವಾಹ ಸಂಬಂಧಿತ ಸಮಸ್ಯೆಗಳನ್ನು ಯಹೂದಿ ಧಾರ್ಮಿಕ ನ್ಯಾಯಾಲಯಗಳಲ್ಲಿ ಪರಿಹರಿಸಲಾಗುತ್ತದೆ. ಇಸ್ರೇಲ್‍ನಲ್ಲಿ ಪುರುಷರು ವಿಚ್ಛೇದನವನ್ನು ನಿರಾಕರಿಸುವುದರಿಂದ ಸಿಕ್ಕಿಹಾಕಿಕೊಳ್ಳುವ ಮಹಿಳೆಯರ ಸಂಖ್ಯೆ ದೊಡ್ಡದಿದೆ. ಇಸ್ರೇಲ್ ಅಲ್ಟ್ರಾ-ಆರ್ಥೊಡಾಕ್ಸ್ ಗುಂಪುಗಳಲ್ಲಿ ಮಹಿಳೆಯರಿಗೆ ಡ್ರೆಸ್‌ಕೋಡ್ ಬಗ್ಗೆ ಕಟ್ಟುನಿಟ್ಟಾದ ನಿಯಮಗಳಿವೆ. ಧಾರ್ಮಿಕ ಸಮಾರಂಭಗಳಲ್ಲಿ ಹೇಗೆ ವರ್ತಿಸಬೇಕೆಂಬುದರ ಬಗ್ಗೆ ನಿರ್ದಿಷ್ಟ ಶಿಷ್ಟಾಚಾರಗಳಿವೆ.

ಇನ್ನೂ ಪ್ರಪಂಚದಾದ್ಯಂತ 21,000ಕ್ಕೂ ಹೆಚ್ಚು ಉಪ್ಪುನೀರಿನ ಸಂಸ್ಕರಣಾ ಘಟಕಗಳಿವೆ. ಇವು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಶೇಕಡ 70 ರಷ್ಟಿದೆ. ಬಹುತೇಕ ಗಲ್ಫ್ ರಾಷ್ಟ್ರಗಳು ಉಪ್ಪುನೀರಿನ ಸಂಸ್ಕರಣಾ ಘಟಕಗಳಿಂದ ಬರುವ ನೀರನ್ನೇ ಅವಲಂಬಿಸಿವೆ. ಯುಎಇಯಲ್ಲಿ ಶೇಕಡ 42 ರಷ್ಟು ಕುಡಿಯುವ ನೀರನ್ನೇ ಉಪ್ಪುನೀರಿನ ಸಂಸ್ಕರಣಾ ಘಟಕಗಳ ಮೂಲಕ ಪೂರೈಸಲಾಗುತ್ತಿದೆ. ಫ್ರೆಂಚ್ ಸಂಸ್ಥೆಯ ವರದಿಯೊಂದರ ಪ್ರಕಾರ, ಕುವೈತ್‍ನಲ್ಲಿ ಶೇಕಡ 90 ರಷ್ಟು, ಒಮನ್‍ನಲ್ಲಿ ಶೇಕಡ 86ರಷ್ಟು ಮತ್ತು ಸೌದಿ ಅರೇಬಿಯಾದಲ್ಲಿ ಶೇಕಡ 70ರಷ್ಟು ನೀರು ಉಪ್ಪುನೀರಿನ ಸಂಸ್ಕರಣಾ ಘಟಕಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ.

ಯುಎಇಯ ದುಬೈನಲ್ಲಿರುವ ಜೆಬೆಲ್ ಅಲಿ ಬಂದರು ಮತ್ತು ಫುಜೈರಾ ಎಫ್ -1 ವಿದ್ಯುತ್ ಮತ್ತು ನೀರಿನ ಸಂಕೀರ್ಣದ ಮೇಲೆಯೂ ಇರಾನ್ ದಾಳಿ ಮಾಡಿದೆ. ಇರಾನ್ ಕುವೈತ್‍ನ ದೋಹಾ ವೆಸ್ಟ್ ಡಿಸಾಲಿನೇಷನ್ ಪ್ಲಾಂಟ್‍ಅನ್ನು ಗುರಿಯಾಗಿಸಿಕೊಂಡಿತ್ತು. ಗಂಭೀರ ಪ್ರಮಾಣದ ನೀರಿನ ಬಿಕ್ಕಟ್ಟನ್ನು ಸೃಷ್ಟಿಸುವ ಉದ್ದೇಶ ಇದರ ಹಿಂದಿದೆ. ಇದಲ್ಲದೆ, ಡಿಸಾಲಿನೇಷನ್ ಪ್ಲಾಂಟ್‍ನಿಂದ ವಿದ್ಯುತ್ ಉತ್ಪಾದಿಸುತ್ತಿದ್ದನ್ನು ತಡೆಯಲು ಉದ್ದೇಶವೂ ಇತ್ತು. ಹೀಗೆ ಹಲವು ಸ್ಥಳಗಳಲ್ಲಿ ಇರಾನಿನ ದಾಳಿಯಿಂದ ನೀರು ಮಾತ್ರವಲ್ಲದೆ ವಿದ್ಯುತ್ ಪೂರೈಕೆಯ ಮೇಲೆಯೂ ಸಹ ಪರಿಣಾಮ ಬೀರಲಿದೆ. ಸೌದಿ ಅರೇಬಿಯಾದ ರಿಯಾದ್ ನಗರ ಒಂದರಲ್ಲಿಯೇ ಸುಮಾರು ಶೇಕಡ 90ರಷ್ಟು ಕುಡಿಯುವ ನೀರನ್ನು ಡಿಸಾಲಿನೇಷನ್ ಪ್ಲಾಂಟ್ ನಿಂದ ಪೂರೈಸಲಾಗುತ್ತಿದೆ. ಒಂದೊಮ್ಮೆ ರಿಯಾದ್‍ನಲ್ಲಿರುವ ಡಿಸಾಲಿನೇಷನ್ ಪ್ಲಾಂಟ್ ನಾಶಗೊಂಡರೆ, ಒಂದು ವಾರದೊಳಗೆ ಇಡೀ ನಗರವನ್ನು ಸ್ಥಳಾಂತರಿಸಬೇಕಾಗುವ ಅಪಾಯವೂ ಇದೆ.

ಮತ್ತೊಂದೆಡೆ, ಕೆಶ್ಮ್ ದ್ವೀಪದಲ್ಲಿ ಇರಾನಿನ ಉಪ್ಪು ತೆಗೆಯುವ ಘಟಕ ಕಾರ್ಯನಿರ್ವಹಿಸುತ್ತಿದೆ. ಅಮೆರಿಕ ಇದನ್ನೀಗ ಗುರಿಯಾಗಿಸಿಕೊಂಡಿದೆ. ಇರಾನ್‍ನಲ್ಲಿ ಒಟ್ಟು 523 ಅಣೆಕಟ್ಟುಗಳಿವೆ. ಇರಾನಿನ ರಾಷ್ಟ್ರೀಯ ಸಮಿತಿಯ ವರದಿಯಂತೆ, ಅವು ನಗರ ಪ್ರದೇಶಗಳಲ್ಲಿನ ಶೇಕಡ 99.6ರಷ್ಟು ಜನರಿಗೆ ಮತ್ತು ಗ್ರಾಮೀಣ ಪ್ರದೇಶಗಳ ಶೇಕಡ 82ರಷ್ಟು ಜನರಿಗೆ ನೀರನ್ನು ಪೂರೈಸುತ್ತಿವೆ. ಹೀಗೆ ಪಶ್ಚಿಮ ಏಷ್ಯಾದ ದೇಶಗಳು ಪರಸ್ಪರ ನೀರು, ವಿದ್ಯುತ್, ಉಪ್ಪು, ತೈಲದ ಮೇಲೆ ದಾಳಿ ಎಸುಗುತ್ತಿವೆ. ಭವಿಷ್ಯದಲ್ಲಿದು, ಪಶ್ಚಿಮ ಏಷ್ಯಾದಲ್ಲಿ ಗಂಭೀರ ಪ್ರಮಾಣದ ನೀರಿನ ಸಮಸ್ಯೆಯನ್ನು ಖಂಡಿತ ಹುಟ್ಟುಹಾಕುತ್ತದೆ. ಇದಲ್ಲದೆ, ಭಾರತದ ಒಟ್ಟು ದ್ರವೀಕೃತ ಪೆಟ್ರೋಲಿಯಂ, ಎಲ್.ಪಿ.ಜಿ ಆಮದಿನಲ್ಲಿ ಶೇಕಡ 95ರಷ್ಟು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಇದರಿಂದಾಗಿ, ಇಲ್ಲಿ ಯಾವುದೇ ಬೆಳವಣಿಗೆಗಳು ನಡೆದರೂ, ಅವು ನೇರವಾಗಿ ನಮ್ಮ ದೇಶದ ಮೇಲೆ ಪರಿಣಾಮವನ್ನು ಬೀರುತ್ತವೆ. ಒಂದೊಮ್ಮೆ ಇಂತಹ ಸಂಘರ್ಷ ದೀರ್ಘಕಾಲದವರೆಗೂ ಮುಂದುವರಿದರೆ, ನಮ್ಮ ದೇಶದ ಇಂಧನ ಭದ್ರತೆ, ಇಂಧನ ಹಣದುಬ್ಬರ ಮತ್ತು ಆಮದು ವೆಚ್ಚವನ್ನು ಹೆಚ್ಚಿಸಬಹುದೆಂದು ಹಣಕಾಸು ಸಚಿವಾಲಯ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ ಫೆಬ್ರವರಿ 2026ರ ಮಾಸಿಕ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದೆ. ಇದನ್ನೀಗ ಆರ್ಥಿಕ ದಾಖಲೆಯಾಗಿ ಮಾತ್ರ ಕಾಣದೆ, ಗಂಭೀರವಾದ ಎಚ್ಚರಿಕೆಯಾಗಿ ಕಾಣುವ ಅಗತ್ಯವಿದೆ.

ಖನಿಜ ತೈಲ ಅಥವಾ ದ್ರವೀಕೃತ ನೈಸರ್ಗಿಕ ಅನಿಲ ಐಓಉಗೆ ಹೋಲಿಸಿದರೆ ಐPಉಗೆ ಪೂರೈಕೆಯ ಪರ್ಯಾಯ ಮೂಲಗಳು ಬಹಳ ಸೀಮಿತವಾಗಿರುವುದು ಮಾತ್ರವಲ್ಲದೆ ಶೇಖರಣಾ ಸಾಮರ್ಥ್ಯವೂ ವಿರಳವಾಗಿದೆ. ಗೊತ್ತಿರಲಿ, 2024-25ರಲ್ಲಿ ನಮ್ಮ ದೇಶ 31.3 ಮಿಲಿಯನ್ ಟನ್ ಎಲ್‍ಪಿಜಿ ಖರೀದಿಸಿತ್ತು. ಇದರ ನಡುವೆ, ಹಾರ್ಮುಜ್‍ನ ದಿಗ್ಬಂಧನವು ತೈಲ ಸಂಸ್ಕರಣಾಗಾರಗಳು ದೇಶೀಯ ಎಲ್‍ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಆದೇಶಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿವೆ. ಇದನ್ನರಿತುಕೊಂಡೇ, ಸರ್ಕಾರ ಮಾರ್ಚ್ 10ರಂದು ಅಗತ್ಯ ಸೇವೆಗಳ ಕಾಯ್ದೆ, ಎಸ್‍ಎಂಎ ಮತ್ತು ಅಗತ್ಯ ಸರಕುಗಳ ಕಾಯ್ದೆ ಇಸಿಎಗಳನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ತೈಲ ಸಂಸ್ಕರಣಾಗಾರಗಳು ಎಲ್‍ಪಿಜಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಎಲ್‍ಪಿಜಿಯ ಘಟಕಗಳಾದ ಪೆರಪೇನ್ ಮತ್ತು ಬ್ಯುಟೇನ್‍ನನ್ನು ದೇಶೀಯ ಅನಿಲ ಪೂರೈಕೆಗಾಗಿ ಕಾಯ್ದಿರಿಸಲು ಆದೇಶಿಸಿದೆ. ಮೂರು ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳಿಗೆ ಮಾತ್ರ ಎಲ್‍ಪಿಜಿ ಪೂರೈಸಲು ಅನುಮತಿಸಲಾಗಿದೆ. ಜೊತೆಗೆ ಇದನ್ನು ಅಡುಗೆಗೆ ಮಾತ್ರ ಬಳಸುವುದು ಕಡ್ಡಾಯವಾಗಿದೆ.

ರೆಸ್ಟೋರೆಂಟ್ ಮತ್ತು ಹೋಟೆಲ್ ಉದ್ಯಮದವನ್ನು ಕಂಡರೆ ಅಲ್ಲಿಯೂ ಪರಿಸ್ಥಿತಿ ಹದಗೆಟ್ಟಿದೆ. ಒಂದೊಮ್ಮೆ ಸರ್ಕಾರ ತ್ವರಿತವಾಗಿ ಪರ್ಯಾಯ ಇಂಧನ ಆಯ್ಕೆಗಳನ್ನು ಅಥವಾ ತಾತ್ಕಾಲಿಕ ಸಬ್ಸಿಡಿಗಳನ್ನು ಒದಗಿಸಿ ಕೊಡಲು ಮುಂದಾಗದಿದ್ದರೆ, ಹಲವು ಬಗೆಯ ಸಣ್ಣ-ಪುಟ್ಟ ವ್ಯವಹಾರಗಳು ಶಾಶ್ವತವಾಗಿ ಮುಚ್ಚಲ್ಪಡುತ್ತವೆ. ಜೊತೆಗೆ ನಿರುದ್ಯೋಗದ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಯುದ್ಧದ ಕಾರಣದಿಂದ ಎಲ್‍ಪಿಜಿ ಸಿಲಿಂಡರ್ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ. ಸದ್ಯ ದೇಶದ ಹಲವು ನಗರಗಳಲ್ಲಿ ಗ್ಯಾಸ್ ಏಜೆನ್ಸಿಗಳ ಹೊರಗೆ ದೀರ್ಘವಾದ ಸರತಿ ಸಾಲುಗಳು ಪೊಲೀಸರ ಪಹರೆಯಲ್ಲಿ ಕಂಡುಬರುತ್ತಿವೆ. ಹಠಾತ್ತಾಗಿ ಉದ್ಭವವಾದ ಪರಿಸ್ಥಿತಿಯ ಲಾಭ ಪಡೆಯಲು, ಕೆಲವು ಮಾರಾಟಗಾರರು ಎಲ್‍ಪಿಜಿ ಸಿಲಿಂಡರ್‌ಗಳನ್ನು 5ಸಾವಿರ ರೂ.ಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ಕೊರತೆಯ ಪರಿಸ್ಥಿತಿಯನ್ನು ನಿಗ್ರಹಿಸಲು, ಸಿಲಿಂಡರ್ ಕಾಯ್ದಿರಿಸುವ ಅವಧಿಯನ್ನು 30 ರಿಂದ 60 ದಿನಗಳವರೆಗೆ ಹೆಚ್ಚಿಸಲಾಗಿದೆ. ಇದರಿಂದಾಗಿಯೇ ಜನ ಆತಂಕಕ್ಕೆ ಬಿದ್ದು ಅತಿಯಾಗಿ ಸಂಗ್ರಹಣೆ ಮಾಡುತ್ತಿದ್ದಾರೆ.

ಇಂತಹ ಎಲ್‍ಪಿಜಿ ಬಿಕ್ಕಟ್ಟು ನಮ್ಮ ದೇಶದ ಇಂಧನ ಭದ್ರತೆಯಲ್ಲಿರುವ ಮೂಲಭೂತ ದೌರ್ಬಲ್ಯಗಳನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. 2026ರ ವೇಳೆಗೆ ಯುಎಸ್ ಗಲ್ಫ್ ಕರಾವಳಿಯಿಂದ ಸುಮಾರು 2.2 ಮಿಲಿಯನ್ ಟನ್ ಎಲ್‍ಪಿಜಿಯನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಸರ್ಕಾರ ಒಪ್ಪಿದೆ. ಇದು ಒಳ್ಳೆಯ ಕ್ರಮವಾಗಿದ್ದರೂ, ಸದ್ಯಕ್ಕೆ ಇದು ಸಾಕಾಗುವುದಿಲ್ಲ. ನಮ್ಮ ದೇಶ ಮೊದಲು ಪಶ್ಚಿಮ ಏಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಎಲ್.ಪಿ.ಜಿ ಸಂಗ್ರಹಣಾ ಸಾಮರ್ಥ್ಯವನ್ನು, ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು. ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಅಡುಗೆಮನೆಯಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆಗೂ ಮುಂದಾಗಬೇಕು. ಇಂಧನ ಸುರಕ್ಷತೆಯು ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗವಾಗಿದೆ ಎಂಬ ಸತ್ಯವನ್ನು ನಾವು ಎಷ್ಟು ಬೇಗ ಸ್ವೀಕರಿಸುತ್ತೇವೆಯೋ ಅಷ್ಟು ಬೇಗ ನಮ್ಮ ದೇಶ ಸುರಕ್ಷಿತವಾಗುತ್ತದೆ.

ಷೇರು ಮಾರುಕಟ್ಟೆಯನ್ನು ಗಮನಿಸಿದರೆ, ಅಲ್ಲಿ ಮಾರ್ಚ್ 27ರಂದು ರಿಲಯನ್ಸ್ ಮಾರುಕಟ್ಟೆ ಬಂಡವಾಳ ಸುಮಾರು 80 ಸಾವಿರ ಕೋಟಿಗಳಷ್ಟು ಕುಸಿತ ಕಂಡಿದೆ. ಇದಿಷ್ಟೇ ಅಲ್ಲದೆ, ಯುದ್ಧ ನಮ್ಮ ದೇಶದ ಔಷಧ ಕಂಪನಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಔಷಧ ಕಂಪನಿಗಳು ಮಾತ್ರೆಗಳನ್ನು ಮತ್ತು ಔಷಧಿಗಳನ್ನು ತಯಾರಿಸಲು ಎಲ್.ಪಿ.ಜಿ ಮತ್ತು ಪೆಟ್ರೋಕೆಮಿಕಲ್‍ಗಳು ಅಗತ್ಯವಾಗಿ ಬೇಕಾಗುತ್ತದೆ. ಸದ್ಯ ಇವೆರಡರ ಪೂರೈಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಹೀಗಾಗಿ ಔಷಧಿಗಳನ್ನು ತಯಾರಿಸುವುದು ಹೇಗೆ ಎಂಬ ಪ್ರಶ್ನೆಯೂ ದೇಶದ ಮುಂದಿದೆ. ಇದುವೇ ಪ್ಯಾರಸಿಟಮಲ್ ಉತ್ಪಾದನೆ ಹಾಗೂ ಇಂಜೆಕ್ಷನ್‍ಗಳಿಗೆ ಬಳಸುವ ಸಿರಿಂಜ್‍ಗಳ ಮೇಲೆಯೂ ಪರಿಣಾಮ ಬೀರುತ್ತದೆ.

ಹೀಗಾಗಿಯೇ ಔಷಧ ಕಂಪನಿಗಳು ಕೇಂದ್ರ ವಾಣಿಜ್ಯ ಸಚಿವಾಲಯ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಗಳು ಕೂಡಿ ಔಷಧ ಇಲಾಖೆಯ ಮುಂದೆ ತಮ್ಮ ಕಳವಳವನ್ನು ಮಂಡಿಸಿವೆ. ಯುದ್ಧವು ಮಾತ್ರೆ ಮತ್ತು ಔಷಧಿಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಕೊರೋನಾ ಅವಧಿಯಲ್ಲಿ ನೀಡಲಾದ ವಿನಾಯಿತಿಗಳನ್ನು ಔಷಧ ಕಂಪನಿಗಳಿಗೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದರ ಮಧ್ಯೆ, ಔಷಧ ಕಂಪನಿಗಳ ಪ್ರತಿನಿಧಿಗಳು, ವಾಣಿಜ್ಯ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಔಷಧ ವಲಯವು ಎಲ್‍ಪಿಜಿ ಮತ್ತು ಪೆಟ್ರೋಕೆಮಿಕಲ್‍ಗಳ ಮೇಲೆ ಎಷ್ಟರ ಮಟ್ಟಿಗೆ ಅವಲಂಬಿತವಾಗಿದೆ. ಜೊತೆಗೆ ಸದ್ಯದ ಪರಿಸ್ಥಿತಿ ಏನು ಎಬುದು ಕೂಡ ಚರ್ಚೆಯಾಗಿದೆ.

ನಮ್ಮ ದೇಶದ ಔಷಧ ಕಂಪನಿಗಳು ಎಲ್‍ಪಿಜಿ ಮತ್ತು ಪಿಎನ್‍ಜಿ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಇವೆರಡು ಅನಿಲಗಳ ಪೂರೈಕೆಯಲ್ಲಿ ಅಡ್ಡಿಯಾಗಬಾರದೆಂದು ಔಷಧ ಕಂಪನಿಗಳ ಪ್ರತಿನಿಧಿಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ. ಒಂದೊಮ್ಮೆ ಪೂರೈಕೆಯಲ್ಲಿ ಅಡ್ಡಿಯಾದರೆ, ಬಹುಮುಖ್ಯ ಔಷಧಿಗಳ ಕೊರತೆ ಖಂಡಿತವಾಗಿಯೂ ಉಂಟಾಗುತ್ತದೆ. ಆಗ ಜಗದೆಲ್ಲೆಡೆ ಹಾಹಾಕಾರ ಏಳುವ ಸಾಧ್ಯತೆಗಳಿವೆ.

ನಾವು ಇಷ್ಟೊಂದು ಆತಂಕಪಡಲು ಕಾರಣ, ಮಾತ್ರೆಗಳನ್ನು ಮತ್ತು ಔಷಧಿಗಳನ್ನು ತಯಾರಿಸುವಾಗ ಬಾಯ್ಲರ್‌ಗಳು, ಗ್ರ್ಯಾನ್ಯುಲೇಷನ್, ಕ್ರಿಮಿನಾಶಕ ಮತ್ತು ಇತರೆ ಬಗೆಯ ಪ್ರಕ್ರಿಯೆಗಳಲ್ಲಿ ಎಲ್.ಪಿ.ಜಿ ಅಗತ್ಯವಾಗಿಬೇಕು. ಅದರಲ್ಲೂ ಸಣ್ಣ ಮತ್ತು ಮಧ್ಯಮ ಔಷಧ ಕಂಪನಿಗಳು ಎಲ್.ಪಿ.ಜಿ ಮತ್ತು ಪಿ.ಎನ್.ಜಿ ಮೇಲೆಯೇ ಅವಲಂಬಿತವಾಗಿರುತ್ತವೆ. ಕೆಲವೇ ಕೆಲವು ದೊಡ್ಡ ಕಂಪನಿಗಳು ಮಾತ್ರ ಇಂತಹ ಪ್ರಕ್ರಿಯೆಗಳಲ್ಲಿ ಅನಿಲದ ಬದಲಿಗೆ ವಿದ್ಯುತ್ ಬಳಸುವ ತಂತ್ರಜ್ಞಾನವನ್ನು ಹೊಂದಿವೆ. ಎಲ್‍ಪಿಜಿ ಮತ್ತು ಪಿ.ಎನ್.ಜಿ ಪೂರೈಕೆಯಲ್ಲಿ ಅಡೆ-ತಡೆ ಉಂಟಾದರೆ, ಅದರ ಪರಿಣಾಮ ಔಷಧಿಗಳ ತಯಾರಿಕೆಯ ಮೇಲೆ ಗಂಭೀರವಾಗಿ ಬೀರುತ್ತದೆ. ಇದು ಕೆಲವು ದಿನಗಳ ನಂತರ ಔಷಧ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ. ಔಷಧ ಕ್ಷೇತ್ರದ ತಜ್ಞರ ಪ್ರಕಾರ ಬಹುತೇಕ ಕಂಪನಿಗಳು ಹದಿನೈದರಿಂದ ಮೂವತ್ತು ದಿನಗಳ ದಾಸ್ತಾನು ಮಾತ್ರ ಹೊಂದಿವೆ. ಕೆಲವು ದೊಡ್ಡ ಕಂಪನಿಗಳು ಮೂರರಿಂದ ಆರು ತಿಂಗಳ ದಾಸ್ತಾನು ಹೊಂದಿವೆ. ಒಂದೊಮ್ಮೆ ಔಷಧ ಉತ್ಪಾದನೆ ನಿಂತು ಹೋದರೆ, ಕೆಲವು ದಿನಗಳಲ್ಲಿಯೇ ಇದರ ಪರಿಣಾಮ ಕಾಣಿಸಿಕೊಳ್ಳುತ್ತದೆ.

ಇದನ್ನರಿತೇ ನಮ್ಮಲ್ಲಿ ಕೈಗಾರಿಕೆಗಳಿಗೆ ಕೆಲವು ಪೆಟ್ರೋಕೆಮಿಕಲ್‍ಗಳನ್ನು ಪಡೆಯಲು ಸರ್ಕಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಕಾರಣ, ದೇಶೀಯ ಅನಿಲದ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿದೆ. ಇದರಿಂದ ಔಷಧಿಗಳು ಮತ್ತು ಉಪಕರಣಗಳ ಉತ್ಪಾದನೆಯ ಮೇಲೆಯೂ ಬಿದ್ದಿದೆ. ಸರ್ಕಾರದ ಇಂತಹ ಕೆಲವು ನಿರ್ಬಂಧಗಳ ಹೇರಿಕೆಯಿಂದ ಸಂಸ್ಕರಣಾ ದರ್ಜೆಯ ಪೆರಫಿಲೀನ್ ಕೊರತೆಗೆ ಕಾರಣವಾಗುತ್ತಿದೆ. ಇದನ್ನು ಫಾರ್ಮಾಕೊಪೆಯಿಯಾ-ಗ್ರೇಡ್ ಐಸೊಪೆರಪಿಲ್ ಆಲ್ಕೋಹಾಲ್, ಐಪಿಎ ತಯಾರಿಸಲು ಬಳಸಲಾಗುತ್ತದೆ. ಔಷಧಿಗಳ ಉತ್ಪಾದನೆಯಲ್ಲಿ ಲೇಪನಕ್ಕಾಗಿ ಐಪಿಎ ಯನ್ನು ಬಳಸಲಾಗುತ್ತದೆ.

ಸದ್ಯ ಐಪಿಎ ಯನ್ನು ಜಾಮ್‍ನಗರದಲ್ಲಿರುವ ರಿಲಯನ್ಸ್‌ನ ಸಂಸ್ಕರಣಾಗಾರದಿಂದ ಔಷಧ ಕಂಪನಿಗಳಿಗೆ ಪೂರೈಸಲಾಗುತ್ತಿದೆ. ಆದರೀಗ ಸರ್ಕಾರದ ಆದೇಶದಂತೆ, ರಿಲಯನ್ಸ್ ಐಪಿಎ ಪೂರೈಕೆಯನ್ನು ನಿಲ್ಲಿಸಿದೆ. ಇದರಿಂದಾಗಿ, ಔಷಧ ಉತ್ಪಾದನೆಯಲ್ಲಿ ಇಂತಹ ಪ್ರಮುಖ ಘಟಕಾಂಶವನ್ನು ಪಡೆಯುವುದು ಕಷ್ಟಕರವಾಗಿದೆ. ಮುಂದಿನ 7 ರಿಂದ 10 ದಿನಗಳಲ್ಲಿ 200 ಔಷಧ ಕಂಪನಿಗಳು ಉತ್ಪಾದನೆಯನ್ನು ನಿಲ್ಲಿಸುವ ಸಂಭವ ಇದೆ. ಗೊತ್ತಿರಲಿ, ಐಪಿಎ ಯನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾರಣ ಇದು ಕಲಬೆರಕೆಗೆ ಬಹುತೇಕ ಒಳಗಾಗಿರುತ್ತವೆ. ಐಪಿಎಯನ್ನು ಪೆರಫಿಲಿನ್ ಬಳಸಿ ತಯಾರಿಸಲಾಗುತ್ತದೆ. ಇಂತಹ ಪೆರಫಿಲೀನ್‍ನನ್ನು ಎಲ್‍ಪಿಜಿ ತಯಾರಿಸಲು ಬಳಸಲಾಗುತ್ತದೆ. ಇದರ ಉತ್ಪಾದನೆಯಿಂದ ಜೀವ ಉಳಿಸುವ ಔಷಧಿಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ. ಇದು ಅನಿಲದ ಮಾಸಿಕ ಬೇಡಿಕೆಯಲ್ಲಿ ಕೇವಲ ಶೇಕಡ 0.36ರಷ್ಟನ್ನು ಪೂರೈಸುತ್ತದೆ. ಅಲ್ಲದೆ, 14 ಬಗೆಯ ಔಷಧಿಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ.

ಇದಲ್ಲದೆ, ಎಲ್‍ಪಿಜಿ ಮತ್ತು ಪಿಎನ್‍ಜಿ ಕೊರತೆಯು ಬೆಂಜೀನ್ ಪೂರೈಕೆಯ ಮೇಲೂ ಪರಿಣಾಮ ಉಂಟುಮಾಡುತ್ತದೆ. ಜ್ವರಕ್ಕೆ ಪ್ಯಾರಸಿಟಮಾಲ್ ಮಾತ್ರೆಗಳನ್ನು ತಯಾರಿಸಲು ಬೆಂಜೀನ್ ನನ್ನು ಬಳಸಲಾಗುತ್ತದೆ. ಪೆರಪಿಲೀನ್ ಮತ್ತು ಬೆಂಜೀನ್ ಔಷಧಿಗಳ ತಯಾರಿಕೆಯಲ್ಲಿ ಇವು ಮುಖ್ಯ ಪದಾರ್ಥಗಳೆಂಬುದನ್ನು ಮರೆಯಬಾರದು. ಕೈಗವಸುಗಳು, ಪಿಪಿಇ ಕಿಟ್‍ಗಳು, ಸಿರಿಂಜ್‍ಗಳನ್ನು ತಯಾರಿಸಲು ಕೂಡ ಇವುಗ ಳು ಉಪಯೋಗಕ್ಕೆ ಬರುತ್ತವೆ. ಪೆಟ್ರೋಕೆಮಿಕಲ್ ಕಂಪನಿಗಳು ಇವುಗಳನ್ನು ಪಡೆಯದಿದ್ದರೆ, ಪರಿಣಾಮವನ್ನು ಸದ್ಯದಲ್ಲಿಯೇ ಕಾಣಬಹುದಾಗಿದೆ.

ಇದಿಷ್ಟು ಮಾತ್ರವಲ್ಲದೆ, ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್‍ನಲ್ಲಿರುವ ಅಮೆಜಾನ್ ವೆಬ್ ಸೇವೆಗಳ ಮೂಲಸೌಕರ್ಯವನ್ನು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಗುರಿಯಾಗಿಸಿ ದಾಳಿ ನಡೆಸಿದೆ. ಅಮೆಜಾನ್ ಡೇಟಾ ಸೆಂಟರ್ ಅಮೆಜಾನ್ ವೆಬ್ ಸೇವೆಯ ಭಾಗಮಾತ್ರವಲ್ಲದೆ, ಇದರ ಡೇಟಾ ಸೆಂಟರ್‌ಗಳು ಸಾವಿರಾರು ಕಂಪ್ಯೂಟರ್ ಸರ್ವರ್‌ಗಳು, ಶೇಖರಣಾ ವ್ಯವಸ್ಥೆ ಮತ್ತು ನೆಟ್‍ವರ್ಕಿಂಗ್ ಹಾರ್ಡ್‍ವೇರ್‌ಗಳನ್ನು ಹೊಂದಿವೆ. ಇಂತಹ ಕೇಂದ್ರಗಳನ್ನು ಆಧುನಿಕ ಇಂಟರ್‌ನೆಟ್‍ನ ಎಂಜಿನ್‍ಗಳೆಂದೇ ಪರಿಗಣಿಸಲಾಗುತ್ತದೆ. ಇವು ಎಐ ಮಾದರಿಗಳನ್ನು, ಸ್ಟ್ರೀಮಿಂಗ್ ಸೇವೆಗಳನ್ನು ಮತ್ತು ಸರ್ಕಾರಿ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳನ್ನು ಮುನ್ನಡೆಸುತ್ತವೆ. ಇವುಗಳಲ್ಲಿ ಹಲವು ಹೈಪರ್‍ಸ್ಕೇಲ್ ಡೇಟಾ ಸೆಂಟರ್‌ಗಳಿವೆ. ಪ್ರತಿಯೊಂದೂ 5,000 ರಿಂದ 50,000 ಸರ್ವರ್‌ಗಳನ್ನು ಒಳಗೊಂಡಿದೆ.

ಇನ್ನೂ ಪೆರಫೆಸರ್ ಮೈಕ್ ಚಾಪೆಲ್ ಪ್ರಕಾರ, ಒಂದು ಡೇಟಾ ಕೇಂದ್ರದ ನಷ್ಟಕ್ಕೊಳಗಾದರೆ, ಅದರ ಒಟ್ಟಾರೆ ಕಾರ್ಯಾಚರಣೆಗಳ ಮೇಲೆ ಹೆಚ್ಚು ಪರಿಣಾಮ ಬೀರದ ರೀತಿಯಲ್ಲಿ ಅಮೆಜಾನ್ ತನ್ನ ಸೇವೆಯನ್ನು ವಿನ್ಯಾಸಗೊಳಿಸಿದೆ. ಇದೇ ವಲಯದಲ್ಲಿರುವ ಇತರ ಡೇಟಾ ಕೇಂದ್ರಗಳು ಇಂತಹ ಕಾರ್ಯವನ್ನು ನೋಡಿಕೊಳ್ಳುತ್ತವೆ. ಒಂದೊಮ್ಮೆ, ಒಂದೇ ಹೊತ್ತಲ್ಲಿ ಅನೇಕ ಕೇಂದ್ರಗಳು ವಿಫಲಗೊಂಡರೆ, ಗಂಭೀರ ಸಮಸ್ಯೆಗಳು ಉದ್ಭವಿಸಬಹುದು. ಆದರೀಗ ಅಮೆಜಾನ್ ವೆಬ್ ಸರ್ವೀಸಸ್ ಮಧ್ಯಪ್ರಾಚ್ಯದ ಗ್ರಾಹಕರು ತಮ್ಮ ಡೇಟಾವನ್ನು ಬ್ಯಾಕಪ್ ಮಾಡುವಂತೆ ಸಲಹೆಯನ್ನು ಕೊಟ್ಟಿದೆ. ಯುಎಇಯಲ್ಲಿನ ಕೇಂದ್ರಗಳನ್ನು ಪುನಃಸ್ಥಾಪಿಸುವ ಕೆಲಸವೂ ನಡೆಯುತ್ತಿದೆ ಎಂದು ಅಮೆಜಾನ್ ವೆಬ್ ಸರ್ವೀಸ್ ತಿಳಿಸಿದೆ. ಇಂತಹದ್ದೇ ದಾಳಿಗೆ ಗೂಗಲ್, ಮೈಕ್ರೋಸಾಫ್ಟ್, ಎನ್ವಿಡಿಯಾ, ಐಬಿಎಂ ಒಳಗಾಗುವ ಸಾಧ್ಯತೆ ಇದೆ. ಆದರೂ, ಸದ್ಯದ ಭದ್ರತಾ ಪರಿಸ್ಥಿತಿಯನ್ನು ಗಮನಿಸಿದರೆ, ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ಹೇಳುವುದು ಕಷ್ಟ.

ಇವುಗಳ ನಡುವೆ ಯುದ್ಧದಂತಹ ದೀರ್ಘಕಾಲೀನ ಸಮಸ್ಯೆ ಉದ್ಯೋಗ ಕಡಿತದ ಭೀತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇದೆ. ದೊಡ್ಡ ಮಟ್ಟದ ವ್ಯವಹಾರಗಳು ಸ್ವಲ್ಪಕಾಲದದವರೆಗೂ ಪರಿಣಾಮ ಬೀರದೇ ಇರಬಹುದು. ಆದರೆ, ಕಾರ್ಮಿಕರನ್ನು ಅದರಲ್ಲೂ ವಿಶೇಷವಾಗಿ ಅನೌಪಚಾರಿಕ ಹುದ್ದೆಗಳಲ್ಲಿರುವವರನ್ನು ಕಾಡಲು ಆರಂಭಿಸಿದೆ. ಉದಾಹರಣೆಗೆ ಇವತ್ತು ಅನೇಕ ಹೊಟೇಲ್‍ಗಳು ಮುಚ್ಚುವ ಸ್ಥಿತಿಗೆ ತಲುಪಿದೆ. ಅಲ್ಲಿದ್ದ ಕೆಲಸಗಾರರನ್ನು, ಸಹಾಯಕರನ್ನು ಮತ್ತು ಸ್ಥಳೀಯ ವಿತರಣಾ ಹುಡುಗರನ್ನು ತೆಗೆದುಹಾಕಿ ಪಾರ್ಟ್ ಟೈಂ ಕೆಲಸ ಕೊಡಲಾಗಿದೆ. ಇಂತಹದ್ದೇ ಪರಿಸ್ಥಿತಿ ಒಂದು ತಿಂಗಳು ಅಥವಾ ಇನ್ನೂ ಕೆಲವು ತಿಂಗಳುಗಳವರೆಗೆ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿವೆ. ಆಗ ಕೆಲವು ಕಾರ್ಮಿಕರನ್ನು ಮನೆಗೆ ಕಳುಹಿಸುವುದನ್ನು ಬಿಟ್ಟು ಅನ್ಯ ದಾರಿಯಿಲ್ಲ ಎಂದು ಗಣೇಶ್ ಭವನದ ಮಾಲೀಕ ಅವಲತ್ತುಕೊಂಡಿದ್ದಾರೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಮಂದಿರ ಪ್ರವೇಶಕ್ಕೆ ಬೆಂಬಲಿಸದ ಮೋದಿ ಸರ್ಕಾರ, ಮಹಿಳಾ ಹಕ್ಕುಗಳ ರಕ್ಷಣೆ ಮಾಡುವುದೇ?

ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆದರೆ, ಯುದ್ಧದಿಂದ ನೀರು, ಉಸಿರಾಡುವ ಗಾಳಿಯೂ ಕಲುಷಿತಗೊಳ್ಳುತ್ತಿದೆ. ಹೌದು, ಇಸ್ರೇಲ್ ಹಲವು ತೈಲ ನಿಕ್ಷೇಪಗಳ ಮೇಲೆ ದಾಳಿ ಎಸಗಿರುವುದರಿಂದ ಟೆಹ್ರಾನ್ ನಗರದಲ್ಲಿ ಕಪ್ಪು ಮಳೆಯಾಗಿದೆ. ಇದೊಂದು ವಿಷಕಾರಿ ಹೊಗೆಯಾಗಿದ್ದು, ಇದರ ಸೂಕ್ಷ್ಮ ಧೂಳಿನ ಕಣ, ಸಲ್ಫರ್‌ ಡೈ ಆಕ್ಸೈಡ್ ಮತ್ತು ಇತರ ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿದೆ. ಇವುಗಳ ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳಕ್ಕೆ ಇಳಿದು ಉಸಿರಾಟ ಮತ್ತು ಹೃದ್ರೋಗದಂತಹ ಅಪಾಯವನ್ನು ತಂದೊಡ್ಡುತ್ತದೆ. ಒನ್ ಅರ್ಥ್ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯಂತೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಸುಮಾರು 33 ಮಿಲಿಯನ್‍ ಟನ್ ಇಂಗಾಲದ ಡೈಆಕ್ಸೈಡ್‍ನ್ನು ಹೊರಸೂಸುತ್ತಿದೆ. ಇದು 7.6 ಮಿಲಿಯನ್ ಗ್ಯಾಸೋಲಿನ್ ಚಾಲಿತ ವಾಹನಗಳ ಹೊರಸೂಸುವಿಕೆಗೆ ಸಮಾನವಾಗಿದೆ.

ಹೀಗೆ ವಿದ್ಯುತ್ ಸ್ಥಾವರ, ತೈಲ ಟ್ಯಾಂಕರ್ ಮತ್ತು ಮಿಲಿಟರಿ ನೆಲೆಗಳ ಮೇಲೆ ನಡೆಯುತ್ತಿರುವ ದಾಳಿಯಿಂದ ಗಾಳಿ ಮತ್ತು ನೀರು ಮಾತ್ರವಲ್ಲದೆ ಸಕಲವೂ ಕಲುಷಿತಗೊಳ್ಳುತ್ತಿದೆ. ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದಿಂದ ಹೊರಬರುತ್ತಿರುವ ಸ್ಪೋಟದ ಹೊಗೆಯ ಮಾಲಿನ್ಯ ಮನುಷ್ಯರ ಮೇಲೆ ಮಾತ್ರವಲ್ಲದೆ. ಪರಿಸರ ಮತ್ತು ವಲಸೆ ಹಕ್ಕಿಗಳ ಮೇಲೆಯೂ ಬೀರುತ್ತಿದೆ. 1991ರ ಕೊಲ್ಲಿ ಯುದ್ಧದ ನಂತರ ನಡೆದ ಅಧ್ಯಯನದಂತೆ, ತೈಲ ಸೋರಿಕೆಯಿಂದ ಅರೇಬಿಯನ್ ಕೊಲ್ಲಿಯಲ್ಲಿ ಸುಮಾರು 30 ಸಾವಿರ ಸಮುದ್ರ ಪಕ್ಷಿಗಳು ಸಾವನ್ನಪ್ಪಿದ್ದನ್ನು ಗಮನಿಸಬೇಕಿದೆ.

WhatsApp Image 2025 11 17 at 3.59.52 PM
ಡಾ. ಎಂ ಎಸ್ ಮಣಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...