ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ಸಮಾಜದ ನೋವು, ಅನ್ಯಾಯ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಅಕ್ಷರಗಳ ಮೂಲಕ ಧ್ವನಿಯಾಗಿದ್ದ ಹಿರಿಯ ಪತ್ರಕರ್ತ ಪಂಜೇರಿರ ಜಗದೀಶ್ ಬೆಳ್ಯಪ್ಪ (ಪಿ.ಬಿ. ಜಗದೀಶ್) ಅವರು ಇದೀಗ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಟಿವಿ9 ಡಿಜಿಟಲ್ ಕನ್ನಡದಲ್ಲಿ ಡೆಪ್ಯುಟಿ ಎಡಿಟರ್ ಆಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್ ಬೆಳ್ಯಪ್ಪ ಅವರಿಗೆ ಕಳೆದ ಅಕ್ಟೋಬರ್‌ನಲ್ಲಿ ಬಾಯಿಯ ವಸಡಿನಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು. ಧೈರ್ಯ ಕಳೆದುಕೊಳ್ಳದೆ ಚಿಕಿತ್ಸೆ ಪಡೆದು ಮತ್ತೆ ಸಹಜ ಬದುಕಿನತ್ತ ಮರಳುವ ವಿಶ್ವಾಸದಲ್ಲಿದ್ದ ಅವರಿಗೆ, ಕೆಲವೇ ತಿಂಗಳಲ್ಲಿ ಕ್ಯಾನ್ಸರ್ ಮರುಕಳಿಸಿದೆ.
ಸದ್ಯ ಕ್ಯಾನ್ಸರ್ ಸ್ಟೇಜ್-4 ತಲುಪಿದ್ದು, ಶ್ವಾಸಕೋಶ ಹಾಗೂ ಸ್ಪೈನಲ್ ಕಾರ್ಡ್‌ಗೂ ವ್ಯಾಪಿಸಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪ್ರತಿದಿನವೂ ನೋವು, ಚಿಕಿತ್ಸೆ ಮತ್ತು ಆಸ್ಪತ್ರೆಯ ನಡುವೆ ಬದುಕು ಸಾಗುತ್ತಿದೆ. ಆದರೂ ಜಗದೀಶ್ ಅವರು ಬದುಕುವ ಆಸೆಯನ್ನು ಕೈಬಿಟ್ಟಿಲ್ಲ.
ಈಗಾಗಲೇ ಚಿಕಿತ್ಸೆಗೆ ₹34 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಚಿಕಿತ್ಸೆ ಮುಂದುವರಿಸಲು ಇನ್ನೂ ಸುಮಾರು ₹15 ಲಕ್ಷ ಅಗತ್ಯವಿದೆ. ಚಿಕಿತ್ಸೆಯನ್ನು ಮುಂದುವರಿಸಬೇಕೆಂಬ ಬಲವಾದ ಇಚ್ಛೆ ಜಗದೀಶ್ ಅವರಲ್ಲಿದ್ದರೂ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚವನ್ನು ಭರಿಸುವುದು ಕುಟುಂಬಕ್ಕೆ ಕಷ್ಟಕರವಾಗಿದೆ.
ಸಮಾಜದ ಸಮಸ್ಯೆಗಳನ್ನು ವರದಿ ಮಾಡಿ, ಕಷ್ಟದಲ್ಲಿದ್ದವರ ಧ್ವನಿಯನ್ನು ಸಾರ್ವಜನಿಕರ ಮುಂದಿಟ್ಟಿದ್ದ ಪತ್ರಕರ್ತನ ನೋವು ಇಂದು ಆಸ್ಪತ್ರೆಯ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿದೆ. ಸಾವಿರಾರು ಸುದ್ದಿಗಳನ್ನು ಸಮಾಜದ ಮುಂದೆ ತಂದ ಅವರ ಕೈಗಳು ಇಂದು ನೆರವಿಗಾಗಿ ಚಾಚಿಕೊಂಡಿವೆ.
ಇದು ಕೇವಲ ಒಬ್ಬ ಪತ್ರಕರ್ತನ ಚಿಕಿತ್ಸೆಗೆ ನೆರವು ನೀಡುವ ಮನವಿಯಲ್ಲ; ಸಂಕಷ್ಟದಲ್ಲಿರುವ ಒಬ್ಬ ಮನುಷ್ಯನ ಬದುಕಿನ ಹೋರಾಟಕ್ಕೆ ಕೈಜೋಡಿಸುವ ಮನವಿಯಾಗಿದೆ.
ಮಾಧ್ಯಮ ಸಹೋದ್ಯೋಗಿಗಳು, ಸ್ನೇಹಿತರು, ಬಂಧುಗಳು, ಸಾರ್ವಜನಿಕರು ಹಾಗೂ ಸಮಾಜದ ಹೃದಯವಂತರು ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಿ ಜಗದೀಶ್ ಬೆಳ್ಯಪ್ಪ ಅವರ ಚಿಕಿತ್ಸೆಗೆ ಸ್ಪಂದಿಸುವಂತೆ ‘ಮಾಧ್ಯಮ ಸ್ಪಂದನ’ ಮೂಲಕ ಕಳಕಳಿಯ ಮನವಿ ಮಾಡಲಾಗಿದೆ.
ಸಮಾಜದ ಧ್ವನಿಯಾಗಿದ್ದ ಜಗದೀಶ್ ಬೆಳ್ಯಪ್ಪ ಅವರ ಬದುಕಿನ ಹೋರಾಟದಲ್ಲಿ ಇಂದು ನಾವೇ ಅವರ ಧ್ವನಿಯಾಗೋಣ. ಅವರ ಕೈ ಹಿಡಿದು, ಕುಟುಂಬಕ್ಕೆ ಧೈರ್ಯ ತುಂಬಿ, ಚಿಕಿತ್ಸೆಗೆ ನೆರವಾಗುವ ಮೂಲಕ ಬದುಕಿನ ಭರವಸೆ ಮೂಡಿಸೋಣ ಎಂಬ ಮನವಿ ಕೇಳಿಬಂದಿದೆ.
ಚಿಕಿತ್ಸೆಗೆ ನೆರವು ನೀಡಲು
ಬ್ಯಾಂಕ್: Axis Bank
ಖಾತೆ ಸಂಖ್ಯೆ: 009010101338636
ಖಾತೆದಾರರು: Jagadish P B
IFSC: UTIB0000009
ಖಾತೆ ಪ್ರಕಾರ: Savings A/c
Google Pay / PhonePe:
9060137282
8660529389
ಈ ವಿಶೇಷ ಸುದ್ದಿ ಓದಿದ್ದೀರಾ? ‘ಮೈಸೂರು ಚಲೋ’: ಪ್ರಜಾರಾಜ್ಯಕ್ಕಾಗಿ ಹೋರಾಡಿ ಬಲಿಯಾದ ಧೀರ ಬಾಲಕ ಬಾಣಾವರದ ರಾಮಸ್ವಾಮಿ
ಜಗದೀಶ್ ಬೆಳ್ಯಪ್ಪ ಅವರ ಚಿಕಿತ್ಸೆಗೆ ಸಾಧ್ಯವಾದಷ್ಟು ನೆರವು ನೀಡುವ ಮೂಲಕ ಅವರ ಬದುಕಿನ ಹೋರಾಟದಲ್ಲಿ ಕೈಜೋಡಿಸುವಂತೆ ಮನವಿ ಮಾಡಲಾಗಿದೆ.




