ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಹಣ ದುರುಪಯೋಗ ಮಾಡಲಾಗಿದೆ. ಆದರೆ, ಮಕ್ಕಳಿಗೆ ಸರಿಯಾಗಿ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಕೊಡುತ್ತಿಲ್ಲ. ಪ್ರತಿಭಾ ಪುರಸ್ಕಾರದ ಹಣ ಯಾರಪ್ಪನ ಸ್ವತ್ತು ಅಲ್ಲ. ನಾವು ನೀವು ಕಟ್ಟಿದ ತೆರಿಗೆ ಹಣದಲ್ಲಿ ಪುರಸ್ಕಾರ ಮಾಡುತ್ತಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಾಲ್ಮೀಕಿ ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪ್ರಾಣವಾದರೂ ಬಿಟ್ಟೇವು, ನಮ್ಮ ಒಗ್ಗಟ್ಟು ಬಿಡಲ್ಲ ಎಂಬ ಪ್ರತಿಜ್ಞೆಯನ್ನು ಸಮುದಾಯದ ಪ್ರತಿಯೊಬ್ಬರೂ ಮಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅಂಕದ ಜತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಮನುಷ್ಯತ್ವ ಬೆಳೆಸಿಕೊಳ್ಳುವ ಶಿಕ್ಷಣವನ್ನು ನೀಡಬೇಕು” ಎಂದು ಪ್ರತಿಪಾದಿಸಿದರು.
“ವಾಲ್ಮೀಕಿ ಸಮಾಜ ಸುಧಾರಕ, ದಾರ್ಶನಿಕ, ಪ್ರತಿಯೊಬ್ಬರ ಮನೆಯಲ್ಲಿ ರಾಮಾಯಣ ಪುಸ್ತಕ ಇಟ್ಟುಕೊಳ್ಳಬೇಕು. ನಿತ್ಯ ಓದಬೇಕು. ಆ ಕೃತಿಗೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿ ಇದೆ” ಎಂದು ಹೇಳಿದರು.
“ಈಗಿನ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ರಾಮನ ಹೆಸರಲ್ಲಿ ಮಂದಿರ ಕಟ್ಟಿ, ಈಗ ಕೆಲವರು ಹಣ ಲೂಟಿಯಲ್ಲಿ ತೊಡಗಿರುವರನ್ನು ಕಾಣಬಹುದು. ಸ್ವಾಭಿಮಾನಕ್ಕೆ ಬದ್ಧರಾಗಿರುವವರು ಎಂದರೆ ವಾಲ್ಮೀಕಿ ಸಮುದಾಯದವರು. ಆಧುನಿಕ ದ್ರೋಣಾಚಾರ್ಯರು ಶಿಕ್ಷಣ, ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ಇದ್ದಾರೆ. ಅಂಥವರ ಮೇಲೆ ಕಣ್ಣು ಇಟ್ಟಿರಬೇಕು” ಎಂದು ಏಕಲವ್ಯ, ದ್ರೋಣಾಚಾರ್ಯರ ಸನ್ನಿವೇಶದ ಉದಾಹರಣೆಯೊಂದಿಗೆ ವಿವರಿಸಿದರು.
“ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು. ಆದರೆ ಅದು ಸಾಧ್ಯವಾಗದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅನ್ಯಾಯದ ವಿರುದ್ಧ ದನಿ ಎತ್ತಬೇಕಿದೆ. ಮೀಸಲಾತಿ ಯಾರಪ್ಪನ ಸ್ವತ್ತು ಅಲ್ಲ. ಸ್ವಾಭಿಮಾನದಿಂದ ಒಗ್ಗಟ್ಟಾಗಿ ಎಲ್ಲಾ ರೀತಿಯ ಮೀಸಲಾತಿ ಪಡೆಯಬೇಕು. ಆಗ ನಮ್ಮ ಸಮುದಾಯದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಆಗ ಸಮಸಮಾಜ ಕಟ್ಟಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ರವಿ ಚನ್ನಣ್ಣನವರ್ ಮಾತನಾಡಿ, “ಯುವಶಕ್ತಿ ಸರ್ಕಾರಿ ಉದ್ಯೋಗಕ್ಕೆ ಕಾಯದೆ ಉದ್ಯಮಿಗಳಾಗುವ ಮೂಲಕ ಉದ್ಯೋಗ ಸೃಷ್ಟಿಮಾಡಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕು. ವಿದ್ಯಾರ್ಥಿಗಳು ವಿಮರ್ಶಾತ್ಮಕ ಮನೋಭಾವ ಬೆಳೆಸಿಕೊಂಡು ಒಳಿತನ್ನು ಸಾವಧಾನವಾಗಿ ಆಲಿಸಬೇಕು. ಕೃತಕ ಪ್ರಪಂಚದ ವೈಭೋಗದ ಸುಳ್ಳಿನ ಅರಮನೆಯಲ್ಲಿ ಬದುಕದೆ ಗೌತಮಬುದ್ಧನ ರೀತಿಯಲ್ಲಿ ವಾಸ್ತವವನ್ನು ಅರ್ಥ ಮಾಡಿಕೊಂಡು ಪ್ರಾಮಾಣಿಕ ಬದುಕನ್ನು ಕಟ್ಟಿಕೊಳ್ಳಬೇಕು. ಹಕ್ಕುಗಳನ್ನು ತಿಳಿದುಕೊಂಡು ಪ್ರಶ್ನಿಸುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು” ಎಂದರು
“ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಬಡವರು ಒಂದಾಗುವ ಮೂಲಕ ಸಂಘಟನೆ ಬಲಪಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವನ್ನೂ ಹೋರಾಟ ಮಾಡಿಯೇ ಪಡೆಯಬೇಕಿದ್ದು, ಇದಕ್ಕೆ ಯುವಶಕ್ತಿ ಮಾನಸಿಕವಾಗಿ ಸಿದ್ಧರಾಗಬೇಕು. ವಾಟ್ಸ್ಯಾಪ್, ಫೇಸ್‌ಬುಕ್ ಸುಳ್ಳಿನ ಪ್ರಪಂಚದಿಂದ ಹೊರಬಂದು ಜ್ಞಾನಕ್ಕೆ ಮಾತ್ರ ಮೊಬೈಲ್ ಸೀಮಿತಗೊಳಿಸಿಕೊಳ್ಳಬೇಕು. ಧರ್ಮ-ಜಾತಿ ಬಗ್ಗೆ ಪ್ರೇಮ ಸಹಜವಾದರೂ ಅದು ನಾನೇ ಶ್ರೇಷ್ಠ ಎಂಬ ಅಹಂ ಆಗಬಾರದು. ಸ್ವಾಭಿಮಾನ, ಶ್ರಮದ ಒಗ್ಗಟ್ಟಿನ ಕೋಟೆ ಕಟ್ಟಿ ಶಿಕ್ಷಣದ ಖಡ್ಗ ಹಿಡಿಯುವುದು ಎಲ್ಲರ ಗುರಿಯಾಗಬೇಕು” ಎಂದು ಸಲಹೆ ನೀಡಿದರು.
ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, “ರಂಗಮಂದಿರ ಕಿಕ್ಕಿರಿದು ತುಂಬಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು. ಮಕ್ಕಳು ಅಂಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ಹಾಗೂ ಸಮಾಜದ ಶ್ರೇಯೋಭಿದ್ದಿಗೆ ಶ್ರಮಿಸಬೇಕು. ಕೇವಲ ಉದ್ಯೋಗಿಗಳಾಗದೆ; ಉದ್ಯಮಿಗಳಾಗಬೇಕು” ಎಂದು ಸಲಹೆ ನೀಡಿದರು.
ಪ್ರತಿಭಾ ಪುರಸ್ಕಾರದಲ್ಲಿ ಸುಮಾರು 250 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ಪರಿಶಿಷ್ಟ ವರ್ಗಗಳ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ದಡಗುಂಟಿ, ಸಶಸ್ತ್ರ ಮೀಸಲು ಪಡೆ ಡಿಸಿಪಿ ಎ.ನಾಗರಾಜ್, ಮುಖಂಡರಾದ ಎಂ.ಎನ್.ಎಸ್ ನಾರಾಯಣಸ್ವಾಮಿ, ಕೆ.ಆನಂದ್ ಕುಮಾರ್, ಬಂಕ್ ಮಂಜು, ರೂಪಶ್ರೀ, ಅವಣಿ ಆನಂದ್, ನರಸಿಂಹಯ್ಯ, ಅಬ್ಬಣಿ ಶಿವಪ್ಪ, ಬೆಳ್ಳೂರು ಅಶ್ವಥ್, ಮುನಿಯಪ್ಪ, ನಾಗರಾಜ್, ಕುರಗಲ್ ಗಿರೀಶ್ ಇದ್ದರು.




